Advertisement

ಬೋಟ್‌ ಕಾಣೆಯಾಗಿ 37 ದಿನ ಉಕ್ಕುತ್ತಿದೆ ಮನೆಯವರ ದುಃಖದ ಕಡಲು

12:50 AM Jan 21, 2019 | Team Udayavani |

ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್‌ ಮತ್ತು ಅದರಲ್ಲಿದ್ದ 
7 ಮಂದಿ ಮೀನುಗಾರರು ನಾಪತ್ತೆಯಾಗಿ 37 ದಿನ ಕಳೆದಿದೆ. ಅವರು ಎಲ್ಲಿ ಹೋದರು? ಏನಾದರು? ಎಂಬುದು ಇನ್ನೂ ನಿಗೂಢವಾಗಿದೆ. ನಾಪತ್ತೆಯಾದವರ ಮನೆಗಳಲ್ಲಿ ಇಂದು ಬರಬಹುದು, ನಾಳೆ ಬರಬಹುದು ಎಂಬ ಕಾತರ ಹೆಚ್ಚುತ್ತಿದೆ. ಏನು ಮಾಡುವುದೆಂದು ದಿಕ್ಕೇ ತೋಚದ ಸ್ಥಿತಿಯಲ್ಲಿದ್ದಾರೆ. ದುಃಖದ ಕಡಲು ದಿನೇ ದಿನೆ ಮೇರೆ ಮೀರುತ್ತಿದೆ.

Advertisement

ಕರೆಗಾಳಿ ಇತ್ತೆ ?
ಸುವರ್ಣ ತ್ರಿಭುಜ ಸಂಪರ್ಕ ಕಡಿದುಕೊಂಡ ಡಿ. 15ರ ರಾತ್ರಿ ಮಹಾರಾಷ್ಟ್ರ ಸಮುದ್ರದಲ್ಲಿ ಕರೆಗಾಳಿ (ಪೂರ್ವದಿಂದ ಪಶ್ಚಿಮಕ್ಕೆ) ಬಲವಾಗಿ ಬೀಸುತ್ತಿತ್ತೆನ್ನಲಾಗುತ್ತಿದೆ. ಈ ಗಾಳಿ ರಾತ್ರಿಆರಂಭವಾದರೆ ಬೆಳಗ್ಗಿನವರೆಗೂ ಇರುತ್ತದೆ. ಅಂಥ ಸಂದರ್ಭದಲ್ಲಿ ಮೀನಿಗೆ ಬಲೆ ಹಾಕಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಸುವರ್ಣ ತ್ರಿಭುಜ ಬೋಟಿಗೆ ಹಡಗು ಢಿಕ್ಕಿಯಾಗಿ ಅವಘಡ ಸಂಭವಿಸಿದ್ದೇ ಆಗಿದ್ದಲ್ಲಿ ಕರೆಗಾಳಿಯಿಂದಾಗಿ ಬೋಟಿನಲ್ಲಿದ್ದ ವಸ್ತುಗಳು ಪಶ್ಚಿಮ ದಿಕ್ಕಿಗೆ ಸಾಗಿರುವ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಕೋಸ್ಟ್‌ಗಾರ್ಡ್‌, ನೌಕಾಪಡೆಯ ಹಡಗುಗಳು ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನ ಕಂಡು ಬಂದಿಲ್ಲ. ಮಲ್ಪೆಯಿಂದ ಡಿ. 11ರಂದು 150 ಆಳಸಮುದ್ರ ಬೋಟ್‌ಗಳು ಮೀನುಗಾರಿಕೆಗೆ ತೆರಳಿದ್ದು ಆ ಬಳಿಕ ಎಲ್ಲವೂ ಹಂತ ಹಂತವಾಗಿ ಕಡಲಿಗಿಳಿದಿವೆ. ಅವುಗಳೂ ಪತ್ತೆ ಕಾರ್ಯದಲ್ಲಿ ತೊಡಗಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಸಂಘದ ಕಾರ್ಯದರ್ಶಿ ಗೋಪಾಲ ಆರ್‌.ಕೆ. ತಿಳಿಸಿದ್ದಾರೆ.

ಸ್ಪಷ್ಟ ವರದಿಯ ಬಳಿಕ ತೀರ್ಮಾನ
ನೌಕಾಪಡೆಯ ಹಡಗು ಹಾನಿಗೊಂಡ ಬಗ್ಗೆ ನೀಡಿರುವ ವರದಿಯಲ್ಲಿ ಪೂರ್ಣ ಮಾಹಿತಿ ಇಲ್ಲ. ಸ್ಪಷ್ಟ ವರದಿ ಬಂದ ಬಳಿಕ ಮೀನುಗಾರರ ಸಂಘಟನೆಗಳ ಜತೆ ಸಭೆ ನಡೆಸಿ ಮುಂದೆ ಏನು ಮಾಡುವುದು ಎಂಬ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ.
– ಸತೀಶ್‌ ಕುಂದರ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ

ಕುಟುಂಬಕ್ಕೆ ತಲಾ 1 ಲ.ರೂ. 
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದ ಸರಕಾರ ಹಣವನ್ನು ಬಿಡುಗಡೆ ಮಾಡಿದೆ. ಮಲ್ಪೆ ಸಮೀಪದ ಇಬ್ಬರಿಗೆ, ಉತ್ತರ ಕನ್ನಡ ಜಿಲ್ಲೆಯ ಐವರಿಗೆ ಮೊತ್ತ ಮಂಜೂರಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Advertisement

ಕ್ರೇಟ್‌ಗಳು ಸುವರ್ಣ ತ್ರಿಭುಜದ್ದು
ಕಾರವಾರ:
ಮಹಾರಾಷ್ಟ್ರದ ಮಲ್ವಾಣ್‌ ಸಮೀಪ ಸಮುದ್ರದಲ್ಲಿ ಇತ್ತೀಚೆಗೆ ಲಭಿಸಿದ್ದ ಇಂಗ್ಲಿಷ್‌ನ “ಎಸ್‌ಟಿ’ ಎಂದು ಬರೆದಿದ್ದ ಮೀನು ತುಂಬುವ ಕ್ರೇಟ್‌ಗಳು ಸುವರ್ಣ ತ್ರಿಭುಜ ಬೋಟ್‌ನಿಂದ ಬಿದ್ದವುಗಳು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ದೃಢಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next