ನವದೆಹಲಿ: ರಾಜ್ಯದ 5 ಮತ್ತು 8ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ (ಬೋರ್ಡ್) ಪರೀಕ್ಷೆ ನಡೆಸಲು ಅನುಮತಿಸಿರುವ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅಲ್ಲದೇ, ಈ ಸಂಬಂಧ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸಲ್ಲಿಸಿರುವ ಅರ್ಜಿಯನ್ನು ಮಾ.27ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಅರ್ಜಿಯ ತುರ್ತು ವಿಚಾರಣೆಗೆ ಅರ್ಜಿದಾರರು ಕೋರಿದ್ದು, ಅದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಒಪ್ಪಲಿಲ್ಲ. ಆಗ ಅರ್ಜಿದಾರರ ಪರ ವಕೀಲರು, ಮಾ.27ರಿಂದಲೇ ಪರೀಕ್ಷೆ ಆರಂಭವಾಗುವ ಕಾರಣ ಅದಕ್ಕೂ ಮುಂಚಿತವಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
ಆಗ ನ್ಯಾಯಪೀಠ, “ಹೈಕೋರ್ಟ್ನ ಆದೇಶದಲ್ಲಿ ನಾವು ಮಧ್ಯಪ್ರವೇಶಿಸುವುದು ಸರಿಯಲ್ಲ. ರಾಜ್ಯಕ್ಕೆ ಏನು ಒಳಿತು ಎಂಬುದು ಹೈಕೋರ್ಟ್ಗೆ ತಿಳಿದಿದೆ. ಆದಾಗ್ಯೂ, ಅರ್ಜಿಯನ್ನು ಮಾ.27ರಂದು ವಿಚಾರಣೆ ನಡೆಸಲಾಗುವುದು’ ಎಂದಿದೆ.