ಸುವರ್ಣ ವಿಧಾನಸೌಧ: ಒಂದೆಡೆ ಹೆಚ್ಚಾಗುತ್ತಿರುವ ಕಾರ್ಯಾಚರಣೆ ವೆಚ್ಚದಿಂದ ಉಂಟಾದ ಆದಾಯ ಮತ್ತು ವೆಚ್ಚಗಳ ನಡುವಿನ ಅಂತರ ತಗ್ಗಿಸಲು ಸರ್ಕಾರದ ಹಣಕಾಸಿನ ನೆರವು ಇಲ್ಲ; ಮತ್ತೂಂದೆಡೆ ಸಂಸ್ಥೆಗೆ ರಾಜ್ಯ ಸರ್ಕಾರದಿಂದ ಬರಬೇಕಾದ ರಿಯಾಯಿತಿ ಪಾಸುಗಳ ಹಿಂಬಾಕಿಯೂ ಇಲ್ಲ. ಇದರಿಂದ ಬೆಂಗಳೂರಿನ ಸಂಚಾರ ನಾಡಿ “ಬಿಎಂಟಿಸಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ವಿದ್ಯಾರ್ಥಿಗಳು, ಅಂಗವಿಕಲರು, ಸ್ವಾತಂತ್ರ್ಯ ಹೋರಾಟಗಾರರು ಸೇರಿ ದಂತೆ ವಿವಿಧ ಪ್ರಕಾರದ ರಿಯಾಯ್ತಿ ಬಸ್ ಪಾಸು ವಿತರಿಸುತ್ತಿದೆ. ಒಪ್ಪಂದದ ಪ್ರಕಾರ ಇದರಿಂದಾಗುವ ಆರ್ಥಿಕ ಹೊರೆಯನ್ನು ಒಪ್ಪಂದ ದ ಪ್ರಕಾರ ರಾಜ್ಯ ಸರ್ಕಾರ ಶೇ. 50ರಷ್ಟು ಭರಿಸಬೇಕು. ಆದರೆ, ಸರ್ಕಾರವು 2017-22ರವರೆಗೆ 345 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
ಈ ಮಧ್ಯೆ ರಸ್ತೆಯಲ್ಲಿ ಖಾಸಗಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಪ್ರಯಾಣದರವನ್ನು ಕೈಗೆಟುಕುವಂತಿರಬೇಕು ಎಂಬ ಕಾರಣಕ್ಕೆ ಪ್ರಯಾಣದರವನ್ನೂ ಪರಿಷ್ಕರಿಸಿಲ್ಲ. ಇದರಿಂದ ಸುಮಾರು 650 ಕೋಟಿ ರೂ. ಸಂಭಾವ್ಯ ಸಂಚಾರ ಆದಾಯ ಖೋತಾ ಆಗಿದೆ. ಇಂತಹ ಸಂದರ್ಭದಲ್ಲಿ ಉಂಟಾಗುವ ಕಾರ್ಯಾಚರಣೆ ವೆಚ್ಚ ಮತ್ತು ಆದಾಯ ಸರಿದೂಗಿಸಲು ಸರ್ಕಾರದ ಹಣಕಾಸಿನ ನೆರವಿನ ಅವಶ್ಯಕತೆ ಇದೆ. ಈ ಸಂಬಂಧ ಬಿಎಂಟಿಸಿಯು ಪ್ರಸ್ತಾವವನ್ನೂ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಅದನ್ನು ಸರ್ಕಾರ ತಿರಸ್ಕರಿಸಿತು. ಈ ಕಾರಣಕ್ಕಾಗಿ ಆರ್ಥಿಕ ನಷ್ಟದ ರೂಪದಲ್ಲಿ ಪರಿಣಮಿಸಿತು ಎಂದು ವರದಿಯು ಹೇಳಿದೆ.
ವರ್ಷದಿಂದ ವರ್ಷಕ್ಕೆ ಕಾರ್ಯಾಚರಣೆ ಆದಾಯ ಮತ್ತು ವೆಚ್ಚದ ನಡುವಿನ ಅಂತರ ಸಾಕಷ್ಟು ಹೆಚ್ಚುತ್ತಿದ್ದು, 2017-18ರಿಂದ 2021-22ರ ನಡುವೆ ಈ ದುಪ್ಪಟ್ಟಾಗಿದೆ. ಅಂದರೆ 2017ರಲ್ಲಿ ಕಾರ್ಯಾಚರಣೆ ಆದಾಯ 1,764 ಕೋಟಿ ರೂ. ಇತ್ತು. 2021-22ಕ್ಕೆ ಇದು 922.49 ಕೋಟಿ ರೂ.ಗೆ ಕುಸಿದಿದೆ. ಅದೇ ರೀತಿ, ವೆಚ್ಚವು 2,357 ಕೋಟಿ ರೂ. ಇದ್ದದ್ದು 2,053 ಕೋಟಿ ರೂ. ಆಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಯಾಣಿಕರ ಸಂಖ್ಯೆ ಕೂಡ ಗಣನೀಯವಾಗಿ ತಗ್ಗಿದೆ. 2017-18ರಲ್ಲಿ ಪ್ರತಿದಿನ 44.37 ಲಕ್ಷ ಜನ ಸಂಚರಿಸುತ್ತಿದ್ದರು. 2021-22ರಲ್ಲಿ 15.97 ಕೋಟಿಗೆ ಕುಸಿದಿತ್ತು. ಇದಕ್ಕೆ ಮುಖ್ಯವಾಗಿ ಕೋವಿಡ್ ಹಾವಳಿ ಕಾರಣ ಎನ್ನಲಾಗಿದೆ. ಈಗ ಇದು ಮತ್ತೆ ಚೇತರಿಕೆ ಕಂಡಿದ್ದು, 40 ಕೋಟಿ ಆಸುಪಾಸು ತಲುಪಿದೆ. ಆದರೆ, ಈ ಅವಧಿಯಲ್ಲಿ ನಗರದ ಜನಸಂಖ್ಯೆ ಕೂಡ ಏರಿಕೆಯಾಗಿರುವುದು ಗಮನಿಸಬೇಕಾದ ಅಂಶವಾಗಿದೆ.