ಬೆಂಗಳೂರು: “ಕರ್ತವ್ಯಕ್ಕೆ ಹಾಜರಾಗುವವರು ವೈದ್ಯಕೀಯ ಪ್ರಮಾಣಪತ್ರ ಪಡೆಯುವುದು ಕಡ್ಡಾಯ’ ಎಂದು ಬಿಎಂಟಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಸಾವಿರಾರು ಸಿಬ್ಬಂದಿ ಮಂಗಳವಾರ ಪ್ರಮಾಣ ಪತ್ರಕ್ಕಾಗಿ ಶಾಂತಿನಗರದಲ್ಲಿರುವ ಸಂಸ್ಥೆಯ ಆಸ್ಪತ್ರೆಗೆ ಮುಗಿಬಿದ್ದರು. ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಯಿಂದಲೇ ಪ್ರಮಾಣಪತ್ರ ಹೊಂದಿರಬೇಕು ಎಂಬ ನಿಯಮವನ್ನು ಆದೇಶದಲ್ಲಿ ಉಲ್ಲೇಖೀಸಲಾಗಿತ್ತು. ಹಾಗಾಗಿ, ಬೆಳಗ್ಗೆಯಿಂದಲೇ ನಾನಾ ಭಾಗಗಳಲ್ಲಿರುವ ಚಾಲಕರು, ನಿರ್ವಾಹಕರು, ಮೆಕಾನಿಕ್‌ಗಳು ಆಸ್ಪತ್ರೆ ಕಡೆಗೆ ಹರಿದುಬಂದರು.
ಸಾಮಾಜಿಕ ಅಂತರ ನಿಯಮ ಗಾಳಿಗೆ ತೂರಿ, ಗುಂಪಾಗಿ ಕಾಣಿಸಿಕೊಂಡಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿತು. ಪ್ರಮಾಣಪತ್ರ ವಿತರಿಸಲು ಆಸ್ಪತ್ರೆಯಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಕೇವಲ ಮೂರರಿಂದ ನಾಲ್ಕು ಜನ ಮಾತ್ರ. ಆಸ್ಪತ್ರೆ ಮುಂದೆ ನೆರೆದವರು 1,000-1,500 ನೌಕರರು. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ, ಹೆಸರು, ವಿಳಾಸ ಮತ್ತು ಉದ್ಯೋಗ ಸಂಖ್ಯೆ ಸೇರಿದಂತೆ ವಿವರ ನಮೂದಿಸಿ, ಪ್ರಮಾಣಪತ್ರ ವಿತರಿಸಲು ಸಮಯ ಹಿಡಿಯಿತು. ಹೀಗಾಗಿ, ಮಧ್ಯಾಹ್ನದವರೆಗೂ ಆಸ್ಪತ್ರೆ ಮುಂದೆ “ಕ್ಯೂ’ ಏರ್ಪಟ್ಟಿತ್ತು.
ಆದೇಶ ಅರಿಯುವಲ್ಲಿ ಗೊಂದಲ?: ವೈದ್ಯಕೀಯ ಪ್ರಮಾಣಪತ್ರ ಪಡೆದ ನಂತರವೇ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶ ಹೊರಡಿಸಲಾಗಿದೆ. ಆದರೆ, ಇಂತಹದ್ದೇ ದಿನ ಎಲ್ಲ ಸಿಬ್ಬಂದಿ ಏಕಕಾಲದಲ್ಲಿ ಹಾಜರಾಗುವಂತೆ ಆದೇಶದಲ್ಲಿ ಹೇಳಿಲ್ಲ. ಸಿಬ್ಬಂದಿ ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೋವಿಡ್-19 ಹರಡುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯ ವೈದ್ಯಕೀಯ ತಪಾಸಣೆ ಅತ್ಯವಶ್ಯಕ. ಹೀಗಾಗಿ ಪ್ರಮಾಣಪತ್ರ ಪಡೆಯುವುದು ಅನಿವಾರ್ಯ. ಜತೆಗೆ ಥರ್ಮಲ್ ಸ್ಕ್ಯಾನಿಂಗ್‌ನಿಂದ ಸದೃಢ ಎಂದು ಕಂಡುಬಂದರೆ ಮಾತ್ರ ಕರ್ತವ್ಯಕ್ಕೆ ಅನುಮತಿ ನೀಡಬೇಕು ಎಂದು ಬಿಎಂಟಿಸಿ ಆದೇಶದಲ್ಲಿ ಸೂಚಿಸಲಾಗಿದೆ.
ಪ್ರಮಾಣ ಪತ್ರ ಸಮರ್ಪಕವೇ?: ವೈದ್ಯಕೀಯ ಪ್ರಮಾಣಪತ್ರ ನೀಡುವ ಮುಖ್ಯ ವೈದ್ಯಾಧಿಕಾರಿ ಬಳಿ ಕೋವಿಡ್-19ಗೆ ಸಂಬಂಧಿಸಿದ ವಿಶೇಷ ಉಪಕರಣಗಳಿಲ್ಲ ಹಾಗೂ ಸೌಲಭ್ಯಗಳೂ ಇಲ್ಲ. ಹಾಗಾಗಿ, ಹೆಚ್ಚೆಂದರೆ ಜ್ವರ ತಪಾಸಣೆ ಮಾಡಲು ಮಾತ್ರ ಸಾಧ್ಯವಿದ್ದು,ವೈದ್ಯಕೀಯ ಸಿಬ್ಬಂದಿ ನೀಡುವ ಪ್ರಮಾಣಪತ್ರ ಸಮರ್ಪಕ ಆಗಿರಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಬಿಎಂಟಿಸಿಯಲ್ಲಿ ಒಟ್ಟಾರೆ 33 ಸಾವಿರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರೆಲ್ಲರಿಗೂ ಅಲ್ಪಾವಧಿಯಲ್ಲಿ ವೈದ್ಯಕೀಯ ತಪಾಸಣೆ ಕೂಡ ಕಷ್ಟ ಎನ್ನಲಾಗುತ್ತಿದೆ.
ಬಿಎಂಟಿಸಿ ಸಿಬ್ಬಂದಿಯಲ್ಲಿ ಬಹುತೇಕರು ಹೊರ ಜಿಲ್ಲೆಗಳಲ್ಲಿ ನೆಲೆಸಿದವರಾಗಿದ್ದಾರೆ. ಅವರಿಗೆ ಕರ್ತವ್ಯಕ್ಕೆ ಹಾಜರಾಗುವ ಮುನ್ನ ವೈದ್ಯಕೀಯ ತಪಾಸಣೆಗೊಳಪಡಲು ಸೂಚಿಸಲಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬುಧವಾರದಿಂದ ಘಟಕವಾರು ಸಿಬ್ಬಂದಿಗೆ ವೈದ್ಯಕೀಯ ತಪಾಸಣೆಗೆ ಸಮಯ ನಿಗದಿಪಡಿಸಲಾಗುವುದು.
-ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ
ಮೊದಲ ದಿನ 490 ಸಿಬ್ಬಂದಿಯ ತಪಾಸಣೆ ನಡೆಸಲಾಗಿದೆ. ಯಾರಲ್ಲೂ ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ತೀವ್ರ ಜ್ವರದಂತಹ ಸಮಸ್ಯೆಗಳು ಕಂಡುಬಂದಿಲ್ಲ. ಬುಧವಾರ ಕೂಡ ತಪಾಸಣೆ ಮುಂದುವರಿಯಲಿದೆ.
-ಡಾ.ಹರೀಶ್, ಮುಖ್ಯ ಆರೋಗ್ಯ ಅಧಿಕಾರಿಗಳು, ಬಿಎಂಟಿಸಿ