ಬೆಂಗಳೂರು: ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎಡ ಭಾಗಗಕ್ಕೆ ಉರುಳಿದ ಪರಿಣಾಮ ಬಸ್ ಚಾಲಕ, ನಿರ್ವಾಹಕ ಸೇರಿ 14 ಮಂದಿ ಗಾಯಗೊಂಡ ಘಟನೆ ರಾಜಾಜಿನಗರ ಪ್ರವೇಶ (ಎಂಟ್ರೆನ್ಸ್) ಸಮೀಪ ಮೇಲ್ಸೇತುವೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಪ್ರಯಾಣಿಕರಾದ ಸುಶ್ಮಿತಾ (23), ಅಂಬಿಕಾ (30), ಚಿಕ್ಕೆಗೌಡ (45), ಕಮಲಾ (44), ಜಯಕುಮಾರ್ (45) ಎಂಬುವವರು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಸ್ ನಿರ್ವಾಹಕ ವಿಜಯ್‌ಕುಮಾರ್ (52), ಚಾಲಕ ನಿಂಗೇಗೌಡ (54), ಪ್ರಯಾಣಿಕರಾದ ಮೋಹನ್ (72), ಆರೋಗ್ಯಸ್ವಾಮಿ (54), ದರ್ಶನ್ (19), ಆರಾನ್
ಮೋಜಿ (62), ಪ್ರಭಾಕರ್ (25), ಕೃಷ್ಣಮೂರ್ತಿ (50), ನಂಜಪ್ಪ (68) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉರುಳಿ ಬಿದ್ದ ರಭಸಕ್ಕೆ ಬಸ್ ಜಖಂಗೊಂಡಿದ್ದು, ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 12 ಮಂದಿ ಗಾಯಗೊಂಡಿದ್ದಾರೆ.
ಕಾವಲ್‌ಭೈರಸಂದ್ರ ಬಸ್ ನಿಲ್ದಾಣ-ಕೆಎಚ್‌ಬಿ ಕಾಲೋನಿ ಮಾರ್ಗದ ಬಿಎಂಟಿಸಿಯ “180ಎ’ ಬಸ್ಸು, ಬುಧವಾರ ಬೆಳಗ್ಗೆ 11.15ರ ಸುಮಾರಿಗೆ ಯಶವಂತಪುರದಿಂದ ಕೆಎಚ್‌ಬಿ ಕಾಲೋನಿ ಕಡೆ ಹೋಗುತ್ತಿತ್ತು. ರಾಜಾಜಿನಗರ ಎಂಟ್ರೆನ್ಸ್‌ನ
ಮೇಲ್ಸೇತುವೆ ಹತ್ತಲು ಚಾಲಕ ನಿಂಗೇಗೌಡ ಬಸ್‌ನ ವೇಗ ಹೆಚ್ಚಿಸಿದ್ದಾರೆ. ಈ ವೇಳೇ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು, ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಪರಿಣಾಮ ಎಡ ಭಾಗಕ್ಕೆ ಬಸ್ ಬಿದ್ದಿದ್ದೆ. ಅದೃಷ್ಟವಶಾತ್ ದುರ್ಘಟನೆ ವೇಳೆ ಬಸ್ ಬಿದ್ದ ಜಾಗದಲ್ಲಿ ಯಾವುದೇ ವಾಹನಗಳು, ಸಾರ್ವಜನಿಕರು ಸಂಚರಿಸುತ್ತಿರಲಿಲ್ಲ. ಆದರೆ, ಬಸ್ ಒಳಗಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 12 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಪ್ರಯಾಣಿಕರನ್ನು ಶರವೇಗದಲ್ಲಿ ರಕ್ಷಣೆ ಮಾಡಿದ್ದಾರೆ. ಈ ವೇಳೆ ಕೆಲ ಪ್ರಯಾಣಿಕರು ಬೇರೆ ಬಸ್‌ಗಳನ್ನು ಹತ್ತಿ ಹೋಗಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಸಂಚಾರ ಡಿಸಿಪಿ ಡಾ.ಎಸ್.ಕೆ.ಸೌಮ್ಯಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರ ಭೇಟಿ: ಘಟನೆ ಬಗ್ಗೆ ಮಾಹಿತಿ ಪಡೆದ ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ, ಪೊಲೀಸರಿಂದ ಘಟನೆ ಕುರಿತು ಮಾಹಿತಿ ಪಡೆದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ನಂತರ ಮಾತನಾಡಿದ ಶಾಸಕ ಗೋಪಾಲಯ್ಯ, ಚಾಲಕ ಅತೀ ವೇಗವಾಗಿ ಬಸ್ ಚಾಲನೆ ಮಾಡಿಕೊಂಡು ಬಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ನಗರ ಸಾರಿಗೆ ಇಲಾಖೆಯಿಂದ ಭರಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ಬಸ್ ಚಾಲಕ ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಕೆಳಗೆ ಬಿದ್ದಿದೆ. ಪ್ರಯಾಣಿಕರಿಂದ ದೂರು
ಪಡೆದುಕೊಂಡು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ಡಾ ಎಸ್.ಕೆ. ಸೌಮ್ಯಲತಾ, ಪಶ್ಚಿಮ ವಲಯ ಸಂಚಾರ ಡಿಸಿಪಿ
ಪಡೆದುಕೊಂಡು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ಡಾ ಎಸ್.ಕೆ. ಸೌಮ್ಯಲತಾ, ಪಶ್ಚಿಮ ವಲಯ ಸಂಚಾರ ಡಿಸಿಪಿ
ಬಿಎಂಟಿಸಿ ಮಾಹಿತಿ
ಬುಧವಾರ ಬೆಳಗ್ಗೆ ಬಿಎಂಟಿಸಿ 31ನೇ ಘಟಕದ ಬಸ್ ಚಾಲಕ, ರಾಜಾಜಿನಗರದ ಒಂದನೇ ಬ್ಲಾಕ್ ಮಲ್ಸೇತುವೆ ಬಳಿ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೂಡಲೇ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು, ಗಾಯಾಳುಗಳನ್ನು ಖಾಸಗಿ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ಸದಾನಂದಗೌಡ ಭೇಟಿ
ವೆಸ್ಟ್ ಆಫ್ ಕಾರ್ಡ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿ, ಬಿಎಂಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿ, ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.