ಬೆಂಗಳೂರು: ನಗರದ ಜೀವನ ಸಹಜಸ್ಥಿತಿಗೆ ಮರಳಿಯಾಯ್ತು. ಸಾರ್ವಜನಿಕ ಸಾರಿಗೆ ಬಿಎಂಟಿಸಿ ಬಸ್‌ಗಳಿಗೆ ನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ವೋಲ್ವೋ ಬಸ್ ಗಳಿಗೆ ಶೇ. 34ರಷ್ಟು ದರ ಇಳಿಕೆ ಮಾಡಿ, ಮತ್ತಷ್ಟು ಜನರನ್ನು ಆಕರ್ಷಿಸಲಾಗುತ್ತಿದೆ. ಆದರೆ, ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಬೆಂಗಳೂರು ಪರಿಚಯಿಸುವ ಸೇವೆ ಮಾತ್ರ ನೇಪಥ್ಯಕ್ಕೆ ಸರಿದಿದ್ದು, ಸಂಸ್ಥೆ ಕೂಡ ಇದನ್ನು ನಿರ್ಲಕ್ಷಿಸಿದೆ. ಪರಿಣಾಮ ಪರೋಕ್ಷವಾಗಿ ನಗರ ಪ್ರವಾಸೋದ್ಯಮಕ್ಕೆ ಹಿನ್ನಡೆಯಾದಂತಾಗಿದೆ.
ಅತಿ ಕಡಿಮೆ ದರದಲ್ಲಿ ಬೆಂಗಳೂರು ತೋರಿಸಬೇಕು ಎಂಬ ಉದ್ದೇಶದಿಂದ ಬೆಂಗಳೂರು ಮಹಾನಗರಸಾರಿಗೆ ಸಂಸ್ಥೆ (ಬಿಎಂಟಿಸಿ) ಆರಂಭಿಸಿದ “ಬೆಂಗಳೂರು ದರ್ಶನ’ ವೋಲ್ವೋ ಸೇವೆಯನ್ನು ಪರಿಚಯಿಸಿತ್ತು.ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿಸ್ಥಗಿತ ಗೊಂಡಿತ್ತು. ಎಲ್ಲ ಪ್ರಕಾರದ ಸಾರಿಗೆ ಸೇವೆಗಳು ಪುನಾರಂಭಗೊಂಡ ಬೆನ್ನಲ್ಲೇ “ಬೆಂಗಳೂರು ದರ್ಶನ’ ವೂ ಶುರುವಾಯಿತು. ಆದರೆ, ಅದಕ್ಕೆ ಪ್ರಯಾಣಿಕರ ಭಾಗ್ಯ ಇಲ್ಲದಂತಾಗಿದೆ.
ಕೊರೊನಾ ಹಾವಳಿಗೂ ಮೊದಲು ಪ್ರತಿ ದಿನ ಸರಾಸರಿ 40ರಿಂದ 60 ಜನರ ಬರುತ್ತಿದ್ದವರ ಸಂಖ್ಯೆ, ಇದೀಗ ಸರಾಸರಿ 5ಕ್ಕೆ ಇಳಿದಿದೆ. ವಾರಾಂತ್ಯಗಳಲ್ಲಿ 3ರಿಂದ 4 ಬಸ್ಸುಗಳು ಓಡಿಸುತ್ತಿದ್ದ ಬಿಎಂಟಿಸಿ, ಇದೀಗ ಕೇವಲಒಂದೇ ಬಸ್ಸಿಗೆ ಸೀಮಿತವಾಗಿದೆ. ಈ ಸೇವೆ ಉತ್ತೇಜನಕ್ಕೆ ಪ್ರವಾಸೋದ್ಯಮ ಇಲಾಖೆಯಾಗಲಿ ಹಾಗೂ ಬಿಎಂಟಿಸಿ ಯಾಗಲಿ ಆಸಕ್ತಿ ತೋರುತ್ತಿಲ್ಲ. ನೀರಸಪ್ರತಿಕ್ರಿಯೆಗೆ ಇದು ಕೂಡ ಒಂದು ಕಾರಣ ಎನ್ನಲಾಗುತ್ತಿದೆ.
ಕೊರೊನಾ ನಂತರ ಅ. 1ರಿಂದ “ಬೆಂಗಳೂರು ದರ್ಶನ’ ಸೇವೆ ಆರಂಭವಾಗಿದ್ದು, ಅಕ್ಟೋಬರ್‌ನಲ್ಲಿ157, ನವೆಂಬರ್‌ನಲ್ಲಿ 160 ಮತ್ತು ಡಿಸೆಂಬರ್ (15ರವರೆಗೆ)ನಲ್ಲಿ 53 ಮಂದಿ ಮಾತ್ರ ಬೆಂಗಳೂರುದರ್ಶನದಲ್ಲಿ ಪ್ರಯಾಣ ಮಾಡಿದ್ದಾರೆ. ಎರಡೂವರೆ ತಿಂಗಳಲ್ಲಿ ಕೇವಲ 370 ಜನ ಬೆಂಗಳೂರು ದರ್ಶನ ಪಡೆದಿದ್ದಾರೆ
ಯಾವ ಯಾವ ಪ್ರದೇಶ ದರ್ಶನ? : ಬೆಂಗಳೂರು ವೀಕ್ಷಣೆಗಾಗಿ ಬರುವ ಪ್ರಯಾಣಿಕರಿಗೆ ಬಿಎಂಟಿಸಿ ಒಂದು ದಿನದ ಬೆಂಗಳೂರು ದರ್ಶನ ಎಂಬ ಯೋಜನೆಯನ್ನು ಆರಂಭಿಸಿತು.ಕೇವಲ 420 ರೂ.ಗಳಲ್ಲಿ ನಗರದ ಪ್ರಮುಖ ಸ್ಥಳಗಳನ್ನು ನೋಡುವ ಸೌಲಭ್ಯ ಕಲ್ಪಿಸಿದೆ. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಮೆಜೆಸ್ಟಿಕ್‌ನಿಂದ ಹೊರಡುವ ಬಸ್, ನಂತರ ಸುಪ್ರಸಿದ್ಧ ಇಸ್ಕಾನ್ ದೇವಾಲಯ, ವಿಧಾನಸೌಧ, ಹೈಕೋರ್ಟ್, ಲಾಲ್‌ಬಾಗ್,ಕಬ್ಬನ್‌ಪಾರ್ಕ್, ಗವಿಗಂಗಾಧರೇಶ್ವರ ಮತ್ತು ಬಸವನಗುಡಿಯ ದೊಡ್ಡ ಗಣಪತಿ ದೇವಾಲಯ, ಟಿಪ್ಪು ಸುಲ್ತಾನ್ ಅರಮನೆ, ಎಂ.ಜಿ. ರಸ್ತೆ.ಹಲಸೂರು ಕೆರೆ, ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ವೆಂಕಟಪ್ಪ ಆರ್ಟ್ ಗ್ಯಾಲರಿ ಸ್ಥಳಗಳನ್ನು ತೋರಿಸಿ ಮತ್ತೆ ಸಂಜೆ 6 ಗಂಟೆಗೆ ಮೆಜೆಸ್ಟಿಕ್‌ಗೆ ತಂದು ಬಿಡುವ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರ ಸಲಹೆಗಳೇನು?:
- ಯೋಜನೆ ಕುರಿತು ಪ್ರಮುಖವಾಗಿ ಅಂತಾರಾಷ್ಟೀಯ ವಿಮಾನ ನಿಲ್ದಾಣಗಳಲ್ಲಿ ಸೇವೆ ಮಾಹಿತಿ ನೀಡಬೇಕು. ಇದರ ಜತೆಗೆ ರೈಲ್ವೆ ಟಿಕೆಟ್, ವಿಮಾನದ ಟಿಕೆಟ್ ಬುಕ್ ಮಾಡುವ ವೆಬ್‌ಸೈಟ್ ಅಥವಾ ಸ್ಥಳಗಳಲ್ಲಿ ಬೆಂಗಳೂರು ದರ್ಶನ ಮಾಹಿತಿ ಲಭ್ಯವಾಗುವಂತೆ ಮಾಡಬೇಕು.
- ಕೇವಲ ಮೆಜೆಸ್ಟಿಕ್‌ನಿಂದ ಮಾತ್ರವಲ್ಲದೆ, ನಗರದ ವಿವಿಧೆಡೆಗಳಿಂದ ಬಸ್ ಸೌಲಭ್ಯಕಲ್ಪಿಸಬೇಕು. ಸಾಧ್ಯವಾದರೆ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಕೆ.ಆರ್. ಪುರ, ಎಲೆಕ್ಟ್ರಾನಿಕ್‌ಸಿಟಿ, ಕೆಂಗೇರಿ, ಜಾಲಹಳ್ಳಿ ಮತ್ತು ಯಲಹಂಕಪ್ರದೇಶಗಳಲ್ಲಿ ಸೇವೆ ಆರಂಭಿಸಬೇಕು.
- ಮೆಟ್ರೋ ರೈಲು ಕೂಡ ನಗರದ ಎಲ್ಲಾ ಭಾಗಕ್ಕೂ ಸಂಪರ್ಕ ಕಲ್ಪಿಸುತ್ತಿರುವುದರಿಂದರೈಲು ನಿಲ್ದಾಣಗಳಿಂದ ಬಸ್‌ಗಳನ್ನು ಓಡಿಸಲು ಸಾಧ್ಯವೇ ಎಂಬುದನ್ನು ಚರ್ಚಿಸಬೇಕು.
- ಕೇವಲ ಬೆಂಗಳೂರು ಕೇಂದ್ರ ಭಾಗದಲ್ಲಿರುವ ಪ್ರದೇಶವನ್ನು ಮಾತ್ರ ಗುರಿಯಾಗಿಸಿಕೊಳ್ಳದೆ,ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇಬಸ್ ಸೇವೆ ಕಲ್ಪಿಸಿ. ಅಲ್ಲಿಂದಲೇ ದರ್ಶನ ಆರಂಭಿಸಲು ಮುಂದಾಗಬೇಕು.
ಯೋಜನೆ ವೈಫಲ್ಯಕ್ಕೆ ಕಾರಣಗಳೇನು? :
- ಸಹಜವಾಗಿ ಕೊರೊನಾ ಜಗತ್ತನ್ನುಆವರಿಸಿರುವುದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ
- ಬೆಂಗಳೂರುನೋಡಬೇಕೆಂದುಬರುವ ಪ್ರಯಾಣಿಕರಿಗೆ ಯೋಜನೆ ಬಗ್ಗೆ ಮಾಹಿತಿ ಕೊರತೆ
- ಕೇವಲ ಮೆಜೆಸ್ಟಿಕ್‌ನಿಂದಮಾತ್ರ ಬಸ್‌ಹೊರಡುವುದರಿಂದಬೆಳಗಿನ ವೇಳೆ ತಲುಪಲು ಕಷ್ಟವಾಗುತ್ತಿರುವುದು
- ನಗರ ಪ್ರವಾಸೋದ್ಯಮ ಅಭಿವೃದ್ಧಿ ಭಾಗವಾಗಿಇದನ್ನು ಪರಿಗಣಿಸದಿರುವುದು
ಚೆನ್ನೈನಿಂದ ಬೆಂಗಳೂರು ನೋಡಲು ಬಂದಿದ್ದೇವೆ.ಇಲ್ಲಿ ಟ್ಯಾಕ್ಸಿ ಸೇವೆ ಪಡೆದು ನಗರದ ವಿವಿಧ ಸ್ಥಳಗಳನ್ನು ನೋಡುತ್ತಿದ್ದೇವೆ. ಬಿಎಂಟಿಸಿ ಯೋಜನೆ ಮಾಹಿತಿ ತಿಳಿದಿಲ್ಲ. ಒಂದು ವೇಳೆ ಸರ್ಕಾರದ ಸೇವೆ ಮಾಹಿತಿ ತಿಳಿದಿದ್ದರೆ, ಕಡಿಮೆ ಖರ್ಚಿನಲ್ಲಿ ಬೆಂಗಳೂರುನೋಡುವ ಸೌಲಭ್ಯ ಸಿಗುತ್ತಿತ್ತು.
–ಪೆರುಮಾಳ್, ಚೆನ್ನೈನಿವಾಸಿ
ಕೊರೊನಾ 2ನೇ ಅಲೆಯ ಬಳಿಕ ಬೆಂಗಳೂರು ದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿತ್ತು.ಒಮಿಕ್ರಾನ್‌ನಿಂದ ಸ್ವಲ್ಪ ಹಿನ್ನಡೆಯಾಗಿದೆ. ಸೋಂಕು ಕಡಿಮೆಯಾದರೆ, ಮತ್ತೆ ಯಶಸ್ವಿಯಾಗಲಿದೆ.
–ವಿ. ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ
ದೆಹಲಿಯಿಂದ ಬೆಂಗಳೂರಿಗೆ ಮೂರು ದಿನಗಳ ಪ್ರಯಾಣಕೈಗೊಂಡಿದ್ದೇನೆ. ನಗರದ ವಿವಿಧಸ್ಥಳಗಳನ್ನು ಪರಿಚಯಿಸಲು ಯಾವುದೇಸಾರಿಗೆ ಸೇವೆಗಳು ಲಭ್ಯವಿರುವ ಬಗ್ಗೆಮಾಹಿತಿ ತಿಳಿಯಲಿಲ್ಲ. ಹೀಗಾಗಿ, ಟ್ಯಾಕ್ಸಿ ಸೇವೆ ಪಡೆದು ನಗರದ ವಿವಿಧ ಸ್ಥಳಗಳನ್ನುನೋಡುತ್ತಿದ್ದೇನೆ.
–ಅನುರಾಗ್, ದೆಹಲಿ ಪ್ರವಾಸಿಗ
–ಎನ್.ಎಲ್. ಶಿವಮಾದು