Advertisement

ಯುಪಿಎಸ್‌ ಬದಲಾವಣೆಗೆ ಬಿಎಂಆರ್‌ಸಿ ನಿರ್ಧಾರ

06:41 AM Feb 06, 2019 | |

ಬೆಂಗಳೂರು: “ನಮ್ಮ ಮೆಟ್ರೋ’ ಸಿಗ್ನಲ್‌ಗ‌ಳ ಕಾರ್ಯಾಚರಣೆಗೆ ಅಗತ್ಯ ಇರುವ ಯುಪಿಎಸ್‌ ಯೂನಿಟ್‌ಗಳು ಪದೇ ಪದೇ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ಬದಲಾವಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ನಿರ್ಧರಿಸಿದೆ.

Advertisement

ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ಮಾರ್ಗದಲ್ಲಿ ಬರುವ ತಲಾ 8 ಕಿ.ವ್ಯಾ. ಸಾಮರ್ಥ್ಯದ ಯುಪಿಎಸ್‌ಗಳು ಕೈಕೊಡುವುದರಿಂದ ಸಿಗ್ನಲಿಂಗ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದು ಮೆಟ್ರೋ ಸೇವೆ ವ್ಯತ್ಯಯದಲ್ಲಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಯುಪಿಎಸ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. 

2010ರಲ್ಲಿ ಈ ಯುಪಿಎಸ್‌ಗಳನ್ನು ಹೈದರಾಬಾದ್‌ ಮೂಲದ ಕಂಪನಿಯೊಂದರಿಂದ ಖರೀದಿಸಲಾಗಿತ್ತು. ಆದರೆ, ಈಗ ಅವುಗಳ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡು-ಮೂರು ಬಾರಿ ಸೇವೆಯಲ್ಲಿ ವ್ಯತ್ಯಯ ಆಯಿತು. ಹಾಗಾಗಿ ಬದಲಾವಣೆಗೆ ಮುಂದಾಗಿದ್ದು, ಇದಕ್ಕಾಗಿ ಸುಮಾರು ನಾಲ್ಕು ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ತನಿಖೆ ಆಗಲಿ; ಸಂಘ ಆಗ್ರಹ: ಆದರೆ, ಈ ಸಂಬಂಧ ಟೆಂಡರ್‌ ಕರೆಯದೆ ಯುಪಿಎಸ್‌ಗಳ ಖರೀದಿಗೆ ಬಿಎಂಆರ್‌ಸಿ ಮುಂದಾಗಿದೆ. ಹಾಗೊಂದು ವೇಳೆ ಟೆಂಡರ್‌ ಆಹ್ವಾನಿಸಿದರೂ ಅದು ಕೇವಲ “ಓಪನ್‌ ಟೆಂಡರ್‌’ಗೆ ಸೀಮಿತಗೊಳಿಸಲು ಚಿಂತನೆ ನಡೆಸಿದೆ. ಅಂದರೆ ಕೇವಲ ನಾಲ್ಕಾರು ದಿನ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ನಂತರದಲ್ಲಿ ತೆಗೆದುಹಾಕಲು ಉದ್ದೇಶಿಸಿದೆ. ಇದು ನಾಮಕೆವಾಸ್ತೆ ಆಗಲಿದೆ.

ಅಷ್ಟೇ ಅಲ್ಲ, ಇದರ ಹಿಂದೆ ಮತ್ತೆ ಈ ಹಿಂದಿನ ಕಂಪನಿಗೇ ಗುತ್ತಿಗೆ ನೀಡುವ ಹುನ್ನಾರ ಅಡಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ ಆರೋಪಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಆ ತನಿಖೆಯು ಹೊರಗಿನವರಿಂದಲೇ ಆಗಬೇಕು ಹಾಗೂ ಸಂಘದ ಇಬ್ಬರು ಸದಸ್ಯರು ಅದರಲ್ಲಿ ಪ್ರತಿನಿಧಿಗಳಾಗಿರಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. 

Advertisement

ನಿಯಮ ಅನುಸಾರ ಖರೀದಿ; ಸ್ಪಷ್ಟನೆ: “ಯುಪಿಎಸ್‌ಗಳನ್ನು ಅಳವಡಿಸಿ ಒಂಬತ್ತು ವರ್ಷ ಕಳೆದಿದೆ. ಈ ಮಧ್ಯೆ ಎರಡು-ಮೂರು ಬಾರಿ ಇವು ಕೈಕೊಟ್ಟಿದ್ದರಿಂದ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಆದರೆ ಟೆಂಡರ್‌ ಆಹ್ವಾನಿಸುವುದು ಸೇರಿದಂತೆ ಎಲ್ಲ ನಿಯಮಗಳ ಅನುಸಾರ ಖರೀದಿ ಪ್ರಕ್ರಿಯೆ ನಡೆಯಲಿದೆ. ಇನ್ನು ಯುಪಿಎಸ್‌ಗಳಿಗೆ ವಾರಂಟಿ ಎಂದೇನೂ ಇರುವುದಿಲ್ಲ. ಡಿಸೈನ್‌ ಲೈಫ್ ಎಂದಿರುತ್ತದೆ. ಅದು ಬಳಕೆಯನ್ನು ಅವಲಂಬಿಸಿರುತ್ತದೆ’ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next