Advertisement

ಬಿಎಂಶ್ರೀ ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದ ಮೇಧಾವಿ

06:07 PM Jul 05, 2022 | Nagendra Trasi |

ಶಿವಮೊಗ್ಗ: ಬಿಎಂಶ್ರೀ ಅವರು ಆಧುನಿಕ ಕನ್ನಡ ಸಾಹಿತ್ಯಕ್ಕೆ “ಇಂಗ್ಲಿಷ್‌ ಗೀತಗಳು’ ಕೃತಿಯ ಮೂಲಕ ನವಚೈತನ್ಯ ತುಂಬಿದವರು. ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಈ ಕೃತಿಗೆ ಐತಿಹಾಸಿಕ ಮಹತ್ವವಿದೆ ಎಂದು ವಿಮರ್ಶಕ ಡಾ| ನರಹಳ್ಳಿ ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟರು.

Advertisement

“ಇಂಗ್ಲಿಷ್‌ ಗೀತಗಳು’ ಕೃತಿಗೆ ನೂರು ವರ್ಷ ತುಂಬಿದ ಸವಿ ನೆನಪಿಗೆ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಪ್ರೊ| ಎಸ್‌.ಪಿ. ಹಿರೇಮಠ ಸಭಾಂಗಣದಲ್ಲಿ “ಬಿಎಂಶ್ರೀ ಮಾರ್ಗ’ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬಿಎಂಶ್ರೀ ಅವರು ಕನ್ನಡ ನವೋದಯ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದು, ತನ್ಮೂಲಕ ಅಂದಿನ ಉದಯೋನ್ಮುಖ ಬರಹಗಾರರಿಗೆ ಹೊಸ ಮಾರ್ಗ ಹಾಕಿಕೊಟ್ಟವರು. ನಂತರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಹೇಗೆ ವಿಕಸನ ಹೊಂದಿತು ಎಂಬುದು ಇತಿಹಾಸ.

ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಅವಜ್ಞೆ ಸರಿಯಲ್ಲ. ಸದ್ಯದ ಸವಾಲುಗಳು ಮತ್ತು ಬಿಕ್ಕಟ್ಟುಗಳ ನಿರ್ವಹಣೆಗೆ ಪರಂಪರೆಯ ಜೊತೆಗಿನ ಅನುಸಂಧಾನ ಅತ್ಯಗತ್ಯ. ಕನ್ನಡ ಸಾಹಿತ್ಯಕ್ಕೆ 12ನೇ ಶತಮಾನ ಮತ್ತು 20ನೇ ಶತಮಾನ ಪ್ರಮುಖವಾದ ಕಾಲಘಟ್ಟಗಳು. ವಚನ ಚಳವಳಿ ಸಂಸ್ಕೃತದಿಂದ ಬಿಡುಗಡೆ ನೀಡಿದರೆ, ವಸಾಹತುಶಾಹಿ ಧೋರಣೆಯಿಂದ ಮುಕ್ತಿ ದೊರಕಿದ್ದು 20ನೇ ಶತಮಾನದಲ್ಲಿ ಎಂದು ಪ್ರತಿಪಾದಿಸಿದರು.

ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ಕರ್ನಾಟಕ ಮತ್ತು ಕನ್ನಡ ಅಸ್ಮಿತೆಗೆ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಐತಿಹಾಸಿಕವಾಗಿ ಗುರುತರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅದು ವಚನ ಸಾಹಿತ್ಯ, ನವೋದಯ, ನವ್ಯ, ದಲಿತ-ಬಂಡಾಯ ಚಳುವಳಿಗಳಿರಬಹುದು, ಕನ್ನಡ ಸಾಹಿತ್ಯದ ಕೃಷಿ, ಕರ್ನಾಟಕದ ಸಾಂಸ್ಕೃತಿಕ ಜಗತ್ತಿಗೆ ಅನನ್ಯವಾದ ಕೊಡುಗೆ ನೀಡಿದೆ ಎಂದರು.

Advertisement

ನಂತರ ನಡೆದ ಗೋಷ್ಠಿಗಳಲ್ಲಿ ಡಾ| ಬೈರಮಂಗಳ ರಾಮೇಗೌಡ, ಡಾ| ಗೀತಾ ವಸಂತ, ಡಾ| ಕೆ. ಸಿ. ಶಿವಾರೆಡ್ಡಿ, ಡಾ| ಎ. ರಘುರಾಂ ಬಿಎಂಶ್ರೀ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ವಿಚಾರ ಮಂಡಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್‌ ಮಾತನಾಡಿದರು. ಕನ್ನಡ ಭಾರತಿ ನಿರ್ದೇಶಕ ಡಾ| ಜಿ. ಪ್ರಶಾಂತ ನಾಯಕ, ಪ್ರೊ| ಶಿವಾನಂದ ಕೆಳಗಿನಮನಿ, ಡಾ| ನೆಲ್ಲಿಕಟ್ಟೆ ಸಿದ್ದೇಶ್‌, ಮಾರ್ಷಲ್‌ ಶರಾಂ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next