ಗೆಳತಿ, ಇದು ಹೃದಯದ ಮಾತು. ನೀನು ಎದುರಾದಾಗ ಮಾತು ಬರಿದಾಗಿ, ಮೌನ ಮಡುಗುಟ್ಟತ್ತದೆ. ಏಕೆಂದರೆ, ನಿನ್ನ ಮುಂದೆ ಪ್ರೀತಿಯ ವಿಚಾರ ಹೇಳುವ ಧೈರ್ಯ ನನಗಿಲ್ಲವೋ ಏನೋ..
ನಿನ್ನ ಮೆಚ್ಚಿದ ದಿನದಿಂದ ಇಲ್ಲಿಯ ತನಕವೂ ಕಳವಳವಿದೆ ನನ್ನೆದೆಯಲಿ. ಅದೇನು ಕೇಳು ಗೆಳತಿ ಎಂದು ನಿನ್ನ ಮುಂದೆ ಬಂದು ಹೇಳಲು ನನ್ನ ಹೃದಯ ಕಸರತ್ತು ಮಾಡುತ್ತಲೇ ಇದೆ.ಆದರೆ ಪ್ರಯೋಜನ ಆಗಲಿಲ್ಲ.
ಒಂದು ದಿನ, ನಿನಗೆ ಹೂ ಕೊಟ್ಟಾದರೂ ಇದನ್ನೆಲ್ಲಾ ಹೇಳಬೇಕು ಅಂತ ಆಲೋಚನೆ ಮಾಡಿದ್ದೆ. ಆ ಮಧುರವಾದ ಗುಟ್ಟೊಂದು ಮರುದಿನವೇ ಹೂವಿನಂತೆ ಬಾಡಿಹೋಗಿತ್ತು!! ಏಕೆಂದರೆ, ಕೇವಲ ಒಂದು ದಿನ ಹೂ ಕೊಟ್ಟು ಹೇಳುವ ಬದಲು ನಿತ್ಯವೂ ಹೂ ಬಿಡುವ ಸಸಿಯನ್ನ ನಿನ್ನ ಕೈಗಿತ್ತರೆ ! ಆ ಸಸಿ ಪ್ರತಿ ನಿತ್ಯವೂ ಹೂ ಬಿಡುತ್ತಾ, ಅವನ್ನು ನೀನು ಮುಡಿಯುತ್ತಾ ಇದ್ದರೆ. ದಿನಂಪ್ರತಿ ನಾನೇ ನಿನಗೆ ಹೂ ಮುಡಿಸಿದಂತೆ ಆಗುತ್ತದಲ್ಲವೇ? ಅಂದು ಕೊಂಡೆ!
ಇಷ್ಟಾದ ನಂತರವೂ, ನನ್ನ ಒಲುಮೆಯನ್ನ ನಿನ್ನ ಮುಂದೆ ಬಂದು, ನೇರಾನೇರವಾಗಿ ಹೇಳುವ ಪ್ರಯತ್ನ ಮಾಡೋಣ ಅಂದುಕೊಂಡರೆ, ನನ್ನೆದೆಯ ಉಗಿ ಬಂಡಿ ನಿನ್ನ ನೋಡಿದ ಕ್ಷಣವೇ ಹಿಂತಿರುಗಿ ಓಡಿ ಹೋಗುತ್ತದಲ್ಲ ಏನುಮಾಡಲಿ?
ಹಸಿರು ನಿಶಾನೆಯನ್ನ ನೀಡುವಂತಹ ನಿನ್ನ ನಸು ನಾಚಿಕೆಯ ಹೊಳಪನ್ನ ಸಹಿಕೊಳ್ಳಲು ಈ ನನ್ನ ಕಣ್ಣುಗಳಿಂದಾಗುತ್ತಿಲ್ಲ.
ಕೇಳು ಮುದ್ದು ಗೆಳತಿ, ನನ್ನ ಮನದಲ್ಲಿ ಅಂದು ನೀನು ನೆಟ್ಟಿದ್ದ ಪ್ರೀತಿಯ ಸಸಿ ಇಂದು ಮೊಗ್ಗಾಗಿ ಅರಳುತ್ತಿದೆ. ಉರಿ ಬಿಸಿಲು ಮೂಡುವ ಮುನ್ನ ಅರಳಿದ ಮೊಗ್ಗನು ನಿನಗೆ ಮುಡಿಸಲು ಬರುವೆನು. ಆಗ ನೀನು ದಯವಿಟ್ಟು ಹಿಂತಿರುಗಿ ನಿಂತುಬಿಡು, ಏಕೆಂದರೆ, ನಿನ್ನ ಆ ನಸುನಾಚಿಕೆಯ ಹೊಳಪನ್ನು ನನ್ನೊಳಗಿನ ಧೈರ್ಯವನ್ನು ಎಲ್ಲಿ ಕೊಂದು ಬಿಡುತ್ತದೋ ಅನ್ನೋ ಭಯ.
ಶರಣ… ಬೂದಿಹಾಳ್, ದಾವಣಗೆರೆ ವಿ.ವಿ