Advertisement

ರಕ್ತಸಿಕ್ತ ಕ್ರಾಂತಿಗೀತ

11:49 AM Dec 09, 2018 | Team Udayavani |

“ಪ್ರಪಂಚದಲ್ಲಿ ಜಾತಿ-ಜಾತಿಗಳ ನಡುವೆ ನಡೆದ ರಕ್ತಪಾತಕ್ಕಿಂತಲೂ, ಉಳ್ಳವರು ಮತ್ತು ಇಲ್ಲದವರ ನಡುವಿನ ರಕ್ತಪಾತವೇ ಹೆಚ್ಚು. ಭೈರವ ಮತ್ತು ಗೀತ ಇಬ್ಬರ ಪ್ರೇಮಕಥೆಯೇ ಭೈರವಗೀತ ಕ್ರಾಂತಿ ಗೀತೆ ….’  ನಟ ವಸಿಷ್ಠ ಸಿಂಹ ಅವರ ಕಂಚಿನ ಕಂಠದಲ್ಲಿ ಭೈರವಗೀತ ಚಿತ್ರದ ಕಥೆ ಬಿಚ್ಚಿಕೊಳ್ಳುತ್ತದೆ. ಶ್ರೀಮಂತಿಕೆಯ ದರ್ಪದಿಂದ ಮೆರೆಯುತ್ತಿರುವ ಶಂಕ್ರಣ್ಣನ ಮನೆಯಲ್ಲಿ ಭೈರವ ಗುಲಾಮಗಿರಿ ಮಾಡಿಕೊಂಡಿರುತ್ತಾನೆ.

Advertisement

ಪಟ್ಟಣದಿಂದ ಶಿಕ್ಷಣ ಕಲಿತು ಹಳ್ಳಿಗೆ ಬರುವ ಶಂಕ್ರಣ್ಣನ ಮಗಳು ಗೀತ, ಭೈರವನ ಪ್ರೀತಿಯಲ್ಲಿ ಬೀಳುತ್ತಾಳೆ. ಮಗಳು ಮನೆಕೆಲಸದವನನ್ನು ಪ್ರೀತಿಸುವ ವಿಚಾರ ತಿಳಿದ ಶಂಕ್ರಣ್ಣ, ಭೈರವನನ್ನು ಕೊಲ್ಲಲು ಮುಂದಾಗುತ್ತಾನೆ. ಈ ವಿಚಾರ ತಿಳಿದ ಭೈರವ ಮತ್ತು ಗೀತ ಮನೆ ಬಿಟ್ಟು ಓಡಿ ಹೋಗಲು ಮುಂದಾಗುತ್ತಾರೆ. ಹಾಗಾದ್ರೆ ಅಂತಿಮವಾಗಿ ಇಬ್ಬರ ಕಥೆ ಏನಾಗುತ್ತದೆ? ಭೈರವ ಮತ್ತು ಗೀತ ಇಬ್ಬರೂ ಒಂದಾಗುತ್ತಾರಾ?

ಚಿತ್ರದ ಶೀರ್ಷಿಕೆಗೆ ನ್ಯಾಯ ಸಿಗುತ್ತದೆಯಾ? ಅನ್ನೋದೆ ಭೈರವಗೀತ ಚಿತ್ರದ ಕ್ಲೈಮ್ಯಾಕ್ಸ್‌. ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷದ ಚಿತ್ರಗಳು ಕನ್ನಡಕ್ಕೆ ಹೊಸದೇನಲ್ಲ. 60ರ ದಶಕದಿಂದಲೂ ಜೀತಪದ್ದತಿ, ಜಮಿನ್ದಾರಿಕೆ, ಗುಲಾಮಗಿರಿಯ ಕಥಾಹಂದರವನ್ನಿಟ್ಟುಕೊಂಡ ಹತ್ತಾರು ಚಿತ್ರಗಳು ಕನ್ನಡದಲ್ಲಿ ಬಂದು ಹೋಗಿರುವುದರಿಂದ, ಇದು ಅಂಥದ್ದೇ ಸಾಲಿಗೆ ಸೇರುವ ಮತ್ತೂಂದು ಚಿತ್ರ ಎನ್ನುವುದನ್ನು ಬಿಟ್ಟರೆ, ಭೈರವಗೀತ ಎಲ್ಲೂ ನೋಡುಗರಿಗೆ ಹೊಸಥರದ ಚಿತ್ರ ಎನಿಸುವುದಿಲ್ಲ.

ಚಿತ್ರವನ್ನು ನೋಡುತ್ತಿದ್ದರೆ, ಎಲ್ಲೋ ನೋಡಿದ ಹಳೆ ಕಥೆಯನ್ನೇ ಮತ್ತೆ ಚಿತ್ರ ಮಾಡಿದ್ದಾರೇನೋ ಅನಿಸುತ್ತದೆ. ಇನ್ನು ಚಿತ್ರಕಥೆ ನಿರೂಪಣೆಯ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಪ್ರೇಮಗೀತೆಗಿಂತ ರಕ್ತ ಚರಿತ್ರೆಯೇ ಜಾಸ್ತಿ. ಅದರಲ್ಲೂ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಎಂದು ಆರಂಭದಲ್ಲೇ ಹೇಳುವುದರಿಂದ, ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲೂ ಏಕಕಾಲಕ್ಕೆ ತಯಾರಾಗಿರುವುದರಿಂದ, ಚಿತ್ರದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನ ರಾಯಲಸೀಮ ರಗಡ್‌ ಶೈಲಿಯೇ ಎದ್ದು ಕಾಣುತ್ತದೆ.

ಒಂದೇ ಮಾತಿನಲ್ಲಿ ಹೆಳುವುದಾದರೆ, ಭೈರವಗೀತ ಪಕ್ಕಾ ಆರ್‌ಜಿವಿ (ರಾಮ್‌ ಗೋಪಾಲ್‌ ವರ್ಮ) ಶೈಲಿಯ ಚಿತ್ರ. ನಿರ್ದೇಶಕ ಸಿದ್ದಾರ್ಥ್ ತಾವು ಆರ್‌ಜಿವಿ ಶಿಷ್ಯ ಎಂಬುದನ್ನು ಪ್ರತಿ ಫ್ರೆಮ್‌ನಲ್ಲೂ ನಿರೂಪಿಸಿದ್ದಾರೆ. ಇನ್ನು ಚಿತ್ರದಲ್ಲಿ ಭೈರವನಾಗಿ ನಟ ಆರಂಭದಿಂದ ಅಂತ್ಯದವರೆಗೂ ಅಬ್ಬರದ ಅಭಿನಯ ನೀಡಿದ್ದಾರೆ. ಇಲ್ಲಿಯವರೆಗೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡು ಡಾಲಿಯಂತ ಪಾತ್ರದಲ್ಲಿ ನೋಡುಗರ ಮನಗೆದ್ದಿದ್ದ ಧನಂಜಯ್‌ ಇಲ್ಲಿ ಯಾಕೋ, ಖಾಲಿ ಖಾಲಿ ಎನಿಸುತ್ತಾರೆ.

Advertisement

ಆ್ಯಕ್ಷನ್‌, ಡ್ಯಾನ್ಸ್‌, ರೊಮ್ಯಾಂಟಿಕ್‌ ದೃಶ್ಯಗಳಲ್ಲೂ ಧನಂಜಯ್‌ ಎಷ್ಟೇ ಪರಿಶ್ರಮ ಹಾಕಿದ್ದರೂ, ಅವರ ಪಾತ್ರ ನೋಡುಗರಿಗೆ ಅಷ್ಟಾಗಿ ಒಗ್ಗುವುದಿಲ್ಲ. ಅದನ್ನು ಬಿಟ್ಟರೆ ಖಳನಟ ಶಂಕ್ರಣ್ಣನ ಪಾತ್ರದಲ್ಲಿ ಬಲ ರಾಜವಾಡಿ ಅಭಿನಯ ಗಮನ ಸೆಳೆಯುತ್ತದೆ. ಉಳಿದಂತೆ ಕೇವಲ ಗ್ಲಾಮರ್‌ ಮತ್ತು ಚುಂಬನದ ದೃಶ್ಯಗಳಿಗಾಗಿಯೇ ಐರಾ ಮೋರ್‌ ಎಂಬ ಗ್ಲಾಮರ್‌ ಗೊಂಬೆಯನ್ನು ಆಮದು ಮಾಡಿಕೊಂಡಂತಿದೆ.

ಶೋಕ, ದುಃಖ, ಸರಸ ಹೀಗೆ ಎಲ್ಲಾ ದೃಶ್ಯಗಳಲ್ಲೂ ನಿರ್ಭಾವುಕಳಾಗಿ ನಿಲ್ಲುವ ಐರಾ ಭಾವಾಭಿನಯದ ಬಗ್ಗೆ ಹೆಚ್ಚು ಹೇಳದಿರುವುದೇ ಒಳಿತು. ಅದನ್ನು ಹೊರತುಪಡಿಸಿದರೆ, ಅನೇಕ ಮುಖಗಳು ಕನ್ನಡಕ್ಕೆ ತೀರ ಹೊಸದಾಗಿ ಕಾಣುತ್ತದೆ. ಬಹುದೊಡ್ಡ ಕಲಾವಿದರ ತಾರಾಗಣವಿದ್ದರೂ, ಬಹುತೇಕ ಕಲಾವಿದರು ಅಬ್ಬರಿಸಿ, ಬೊಬ್ಬಿರಿದು, ಅತ್ತು-ಕರೆದು ಕೊನೆಗೆ ರಕ್ತ ಸುರಿಸುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಅನೇಕ ಪಾತ್ರಗಳಿಗೆ ಬರೀ ಡಬ್‌ ಮಾಡಿದಂತೆ ಕಾಣುತ್ತಿದ್ದು, ನಟರ ಮಾತಿಗೂ, ಧ್ವನಿಗೂ ಅಜಗಜಾಂತರ ವ್ಯತ್ಯಾಸವಿದೆ. 

ಅದನ್ನು ಹೊರತುಪಡಿಸಿದರೆ, ಇಡೀ ಚಿತ್ರವನ್ನು ನೋಡುವಂತೆ ಮಾಡಿರುವುದು ಚಿತ್ರ ತಾಂತ್ರಿಕ ಕೆಲಸಗಳು. ಚಿತ್ರದ ಚಿತ್ರದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಎರಡೂ ಪ್ಲಸ್‌ ಪಾಯಿಂಟ್ಸ್‌. ಕಥೆಯಲ್ಲಿ ಏನೂ ಇಲ್ಲದಿದ್ದರೂ, ಮೇಕಿಂಗ್‌ ನೋಡುಗರ ಗಮನ ಸೆಳೆಯುತ್ತದೆ. ಧನಂಜಯ್‌ ಅವರಿಗಾಗಿ ಚಿತ್ರವನ್ನು ಸಹಿಸಿಕೊಂಡರೂ, ಉಳ್ಳವರ ವಿರುದ್ಧ ಇಲ್ಲದವರ ಹೋರಾಟ ಇಂಥ ರಕ್ತಕ್ರಾಂತಿ ಮಾಡುತ್ತದೆಯಾ ಎಂಬ ಹತ್ತಾರು ಪ್ರಶ್ನೆಗಳನ್ನು ಪ್ರೇಕ್ಷಕ ತಲೆಯಲ್ಲಿ ತುಂಬಿಕೊಂಡೇ ಚಿತ್ರಮಂದಿರದಿಂದ ಹೊರ ನಡೆಯುತ್ತಾನೆ. 

ಚಿತ್ರ: ಭೈರವಗೀತ
ನಿರ್ಮಾಣ: ರಾಶಿ ಭಾಸ್ಕರ್‌
ನಿರ್ದೇಶನ: ಸಿದ್ಧಾರ್ಥ್
ತಾರಾಗಣ: ಧನಂಜಯ್‌, ಐರಾ ಮೋರ್‌, ಬಲರಾಜವಾಡಿ, ಮತ್ತು ಇತರರು.

* ಜಿ.ಎಸ್‌ ಕಾರ್ತಿಕ ಸುಧನ್‌ 

Advertisement

Udayavani is now on Telegram. Click here to join our channel and stay updated with the latest news.

Next