Advertisement

ಹಿಮದ ನಾಡಲ್ಲೊಂದು ರಕ್ತದ ಜಲಪಾತ!

11:15 AM Aug 03, 2017 | |

ಎತ್ತರದಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡುವುದೇ ರೋಮಾಂಚನ. ಮಕ್ಕಳಂತೂ ಜಲಪಾತವೆಂದರೆ ಕುಣಿದಾಡಿಯೇ ಬಿಡುವರು. ಅದಕ್ಕೇ ಶಾಲೆಯಿಂದ ಪ್ರವಾಸಕ್ಕೆ ಕರೆದೊಯ್ದಾಗಲೆಲ್ಲಾ ಜಲಪಾತ ವೀಕ್ಷಣೆಯನ್ನು ತಮ್ಮ ಪ್ರವಾಸದಲ್ಲಿ ಶಾಲೆಯವರು ಸೇರಿಸಿಕೊಂಡೇ ಇರುತ್ತಾರೆ. ಜಲಪಾತಗಳು ಎತ್ತರದಿಂದ ಹರಿಯಬಹುದು, ರಭಸದಿಂದ ಹರಿಯಬಹುದು, ಹೀಗೆ ಅವುಗಳಲ್ಲಿ ನಾನಾ ವಿಧಗಳನ್ನು ಗುರುತಿಸಬಹುದು. ಸಾಮಾನ್ಯವಾಗಿ ಜಲಪಾತದಲ್ಲಿ ಧುಮ್ಮಿಕ್ಕುವ ನೀರು ಬಿಳಿ ಹಾಲ ನೊರೆಯಂತೆ ಇರುತ್ತದೆ. ಆದರೆ ಜಲಪಾತದಲ್ಲಿ ಕೆಂಪು ಬಣ್ಣದ ನೀರು ಸುರಿದರೆ ಹೇಗಿರುತ್ತದೆ. ಕೇಳಿದರೆ ಭಯವಾಗುತ್ತದೆಯಲ್ಲವೆ? ಅಂಥದ್ದೊಂದು ಜಲಪಾತ ನಿಜಕ್ಕೂ ಇದೆ. ಅದರ ಹೆಸರು ರಕ್ತದ ಜಲಪಾತ(ಬ್ಲಿಡ್‌ ಪಾಲ್ಸ್‌)! 

Advertisement

ರಕ್ತದ ಜಲಪಾತ
ಈ ಜಲಪಾತ ಪೂರ್ವ ಅಂಟಾರ್ಟಿಕದಲ್ಲಿದೆ. 1911ರಲ್ಲಿ ಆಸ್ಟೇಲಿಯಾದ ಭೂವಿ ಜ್ಞಾನಿ ಟೇಲರ್‌ ಗ್ಲೆಸರ್‌ ಈ ರಕ್ತ ಜಲಪಾತವನ್ನು ಮೊದಲು ಕಂಡುಹಿಡಿದವರು. ಆದ್ದರಿಂದ ಆ ಜಾಗಕ್ಕೆ “ಟೇಲರ್‌ ಗ್ಲೆಸರ್‌’ ಎಂದು ನಾಮಕರಣ ಮಾಡಲಾಯಿತು. ಮೊದಲು ಈ ಥರದ ಕೆಂಪು ಜಲಪಾತವೊಂದು ಹರಿಯುತ್ತಿದೆಯೆಂದು ಹೊರಜಗತ್ತಿಗೆ ತಿಳಿದಾಗ ಜನರು ಭಯಪಟ್ಟುಕೊಂಡಿದ್ದರು. ಇದ್ಯಾವುದೋ ದುಷ್ಟಶಕ್ತಿಯಿಂದಾಗಿ ಅಲ್ಲಿ ರಕ್ತದ ಜಲಪಾತ ಹರಿಯುತ್ತಿದೆ ಎಂಬ ವಾದಗಳೂ ಕೇಳಿ ಬಂದವು. ಆ ಜಲಪಾತದ ಸುತ್ತ ನಾನಾ ಕಥೆಗಳು, ಊಹಾಪೋಹಗಳು ಹುಟ್ಟಿಕೊಂಡಿದ್ದವು. 

ನಿಜಕ್ಕೂ ಅದು ರಕ್ತವೇ?
ವಿಜ್ಞಾನಿಗಳು ಆ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದರೂ ಜನರು ಮಾತ್ರ ಅದು ರಕ್ತವೆಂದೇ ತಿಲಿದಿದ್ದರು. ಕೊನೆಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದಾಗಲೇ ನಿಜ ವಿಚಾರ ಹೊರಬಿದ್ದಿದ್ದು. ವಿವಾದಗಲಿಗೆಲ್ಲಾ ತೆರೆ ಬಿದ್ದಿದ್ದು. ಅಲ್ಲಿ ಹರಿಯುತ್ತಿದ್ದ ಕೆಂಪು ನೀರು ನಿಜಕ್ಕೂ ರಕ್ತವಾಗಿರಲಿಲ್ಲ. ಆ ನೀರಿನ ಸ್ಯಾಂಪಲ್ಲನ್ನು ಪರೀಕ್ಷಿಸಿದಾಗ ಅದರಲ್ಲಿ ಕಬ್ಬಿಣದ ಆಕ್ಸೆ„ಡ್‌ ಮತ್ತು ಕಲುಷಿತಗೊಂಡ ಉಪ್ಪು ಪತ್ತೆಯಾಗಿತ್ತು.

ಕೆಂಪು ಬಣ್ಣದ ರಹಸ್ಯ
ಅಲ್ಲಿನ ನೀರಲ್ಲಿ ಉಪ್ಪಿನ ಮತ್ತು ಕಬ್ಬಿಣದ ಅಂಶಗಳು ಅಧಿಕವಾಗಿರುವುದರಿಂದ ಜಲಪಾತ ಕೆಂಬಣ್ಣಕ್ಕೆ ತಿರುಗಿತ್ತು. ಮಳೆಗಾಲದಲ್ಲಿ ಜಲಪಾತಗಳು ಮಣ್ಣಿನೊಡನೆ ಮಿಶ್ರಿತಗೊಂಡು ಹಳದಿ ಬಣ್ಣವನ್ನು ಪಡೆಯುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಅದೇ ರೀತಿ ಇಲ್ಲಿ ಕಬ್ಬಿಣದ ಆಕ್ಸೆ„ಡ್‌ ಮತ್ತು ಅತಿಯಾದ ಪ್ರಮಾಣದ ಉಪ್ಪು ಸೇರಿ ರಕ್ತದ ಜಲಪಾತ ಸೃಷ್ಟಿಯಾಗಿತ್ತು.

ವಿಶಿಷ್ಟ ಸೂಕ್ಷ್ಮಾಣು ಜೀವಿಗಳು
ಈ ಜಲಪಾತದ ನೀರಿನ ಮೇಲೆ ಟೆನ್ನೇನ್ಸಿಯ ವಿಶ್ವವಿದ್ಯಾನಿಲಯದ ಸೂಕ್ಷ್ಮಾಣು ಅಧ್ಯಯನ ವಿಭಾಗದವರು ಹೆಚ್ಚಿನ ಸಂಶೋಧನೆ ಕೈಗೊಂಡಾಗ ಇದರಲ್ಲಿ 17ಕ್ಕೂ ಹೆಚ್ಚಿನ ವಿವಿಧ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿದ್ದವು. ಆ ನೀರಿನಲ್ಲಿ ಆಮ್ಲಜನಕ ಲಭ್ಯವಿಲ್ಲದ್ದರಿಂದ ಆ ಸೂಕ್ಷ್ಮಾಣು ಜೀವಿಗಳು ತಮ್ಮ ಉಸಿರಾಟಕ್ಕೆ ಫೆರಿಕ್‌ ಆ್ಯಸಿಡ್‌ ಮತ್ತು ಸಲ್ಪೆ„ಟ್‌ ಅನ್ನು ಬಳಸುತ್ತಿದ್ದವು. ಆ ನೀರಿನಲ್ಲಿನ ಕಲುಷಿತ ಪದಾರ್ಥಗಲೇ ಅವುಗಳಿಗೆ ಆಹಾರ. ಈ ರೀತಿ ಆಮ್ಲಜನಕ ಮುತ್ತು ಬೆಳಕು ಎರಡೂ ಮೂಲಭೂತ ವಸ್ತುಗಳಿಲ್ಲದ ವಾತಾವರಣದಲ್ಲಿ ವಾಸಿಸುವ ಸೂಕ್ಮ ಜೀವಿಗಳು ಬೇರೆಲ್ಲೂ ಕಂಡು ಬಂದಿಲ್ಲ. ಅದೇ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದ್ದು. ಈಗ ಇದು ಪ್ರವಾಸಿಗರ ಮೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ. ಯಾವುದೇ ಭೀತಿಯಿಲ್ಲದೆ ಜನರು ಇದರತ್ತ ತದೇಕಚಿತ್ತರಾಗಿ ರಕ್ತದ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.

Advertisement

ಜಯಪ್ರಕಾಶ್‌ ಬಿರಾದಾರ್‌
 

Advertisement

Udayavani is now on Telegram. Click here to join our channel and stay updated with the latest news.

Next