ಹುಬ್ಬಳ್ಳಿ: ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ನಿಧಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನ ಸಹಯೋಗದಲ್ಲಿ ಸ್ಥಾಪನೆಗೊಂಡಿರುವ ರಕ್ತ ಅಂಗಾಂಶಗಳನ್ನು ಪ್ರತ್ಯೇಕಿಸುವ ಘಟಕ ಫೆ.27ರಂದು ಸಂಜೆ 5ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೋತ್ಥಾನ ರಕ್ತನಿಧಿ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ, ಇಲ್ಲಿನ ನೀಲಿಜನ್ ರಸ್ತೆಯ ಡಿ.ಜೆ.ಕಟ್ಟಡದಲ್ಲಿನ ಎಸ್‌ಡಿಜೆಎಂ ರಾಷ್ಟ್ರೋತ್ಥಾನ ನಿಧಿ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ ನಡ್ಡಾ ನೂತನ ಘಟಕ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ನರರೋಗ ತಜ್ಞ ಡಾ| ಕ್ರಾಂತಿ ಕಿರಣ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ರಕ್ತನಿಧಿ ಕಟ್ಟಡದ ಪ್ರಾಯೋಜಕ ವೀರೇಂದ್ರ ಛೇಡಾ, ಇನ್ಫೋಸಿಸ್ ಪ್ರತಿಷ್ಠಾನದ ಧರ್ಮದರ್ಶಿ ವಿನೋದ್ ಹಂಪಾಪುರ ಪಾಲ್ಗೊಳ್ಳಲಿದ್ದಾರೆ ಎಂದರು.
ರಕ್ತದ ಅಂಗಾಂಶಗಳ ಪ್ರತ್ಯೇಕಿಸುವ ಘಟಕ ಸ್ಥಾಪನೆಗೆ ಇನ್ಫೋಸಿಸ್ ಪ್ರತಿಷ್ಠಾನ ಸುಮಾರು 1.37ಕೋಟಿ ರೂ. ಗಳ ನೆರವು ನೀಡಿದೆ. ರಕ್ತದ ಅಂಗಾಂಶಗಳ ಪ್ರತ್ಯೇಕರಣದ ಉದ್ದೇಶದೊಂದಿಗೆ ಒಟ್ಟು ಎಂಟು ಯಂತ್ರಗಳು ಬಂದಿವೆ. ಅಶೋಕ ಲೇಲಾಂಡ್ ಕಂಪೆನಿಯವರು ಸುಮಾರು 120 ಕೆ.ವಿ.ಸಾಮರ್ಥ್ಯದ ಜನರೇಟರ್ ದೇಣಿಗೆಯಾಗಿ ನೀಡಿದ್ದಾರೆ.
ರಕ್ತನಿಧಿ ಭಂಡಾರದಲ್ಲಿ ಒಟ್ಟು 11 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಡಾ| ಗೋಪಾಲ ದೇಸಾಯಿ ವೈದ್ಯಾಧಿಕಾರಿಯಾಗಿದ್ದಾರೆ ಎಂದರು. ರಾಷ್ಟ್ರೋತ್ಥಾನ ರಕ್ತನಿಧಿ 2010ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾಗಿದ್ದು, ಇದುವರೆಗೆ 190 ರಕ್ತದಾನ ಶಿಬಿರ ನಡೆಸಿದ್ದು, 21,068 ಯೂನಿಟ್ ರಕ್ತ ಸಂಗ್ರಹಿಸಿದ್ದು, ಸುಮಾರು 15,382 ಜನರಿಗೆ ರಕ್ತ ವಿತರಿಸಿದೆ ಎಂದರು.
ರಕ್ತದ ಪರೀಕ್ಷೆ ವಿಚಾರದಲ್ಲಿ ನಿಯಮ ಪಾಲನೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಕೇವಲ 700ರೂ.ಗಳ ಪರೀಕ್ಷಾ ಶುಲ್ಕವನ್ನು ಮಾತ್ರ ಪಡೆದು ಅವಶ್ಯವಿದ್ದವರಿಗೆ ರಕ್ತ ನೀಡಲಾಗುತ್ತದೆ. ಸರಕಾರ ನಿಗದಿ ಪಡಿಸಿದ ಶುಲ್ಕಕಿಂತಲೂ ಇದು ಕಡಿಮೆಯಾಗಿದೆ. ಅತ್ಯಂತ ಬಡವರಿದ್ದರೆ ಅವರಿಗೆ ಉಚಿತವಾಗಿ ರಕ್ತ ನೀಡಲಾಗುತ್ತದೆ.
ಇದೀಗ ಆರಂಭಗೊಳ್ಳಲಿರುವ ರಕ್ತ ಅಂಗಾಂಶಗಳ ಪತ್ಯೇಕ ಘಟಕದಿಂದಲೂ ಪ್ಲಾಸ್ಮ ಹಾಗೂ ಪ್ಲೇಟ್‌ಲೆçಟ್ಸ್‌ಗಳನ್ನು ಕಡಿಮೆ ಶುಲ್ಕದಲ್ಲಿ ಹಾಗೂ ಬಡವರಿಗೆ ಕೆಲ ದಾನಿಗಳ ನೆರವು ಪಡೆದು ಉಚಿತವಾಗಿ ನೀಡಲಾಗುವುದು ಎಂದರು. ಡಾ| ಗೋಪಾಲ ದೇಸಾಯಿ, ಗೋವರ್ಧನರಾವ್, ಕಿರಣ ಗುಡ್ಡದಕೇರಿ ಇನ್ನಿತರರು ಇದ್ದರು.