Advertisement

ಮಹಾನಗರದ ಜನತೆಗೆ ಅಗ್ಗದ ದರದಲ್ಲಿ ರಕ್ತ ಪರೀಕ್ಷಾ ಕೇಂದ್ರ ಸೇವೆ

05:15 PM Sep 29, 2022 | Team Udayavani |

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆಗೆ ವೈದ್ಯಕೀಯ ಪರೀಕ್ಷೆಗಳು ಅನಿವಾರ್ಯವಾಗುತ್ತಿವೆ. ಆದರೆ ದುಬಾರಿ ಶುಲ್ಕದಿಂದಾಗಿ ಈ ವೈದ್ಯಕೀಯ ಪರೀಕ್ಷೆಗಳು ಬಡ-ಮಧ್ಯಮ ವರ್ಗದ ಜನರಿಗೆ ಗಗನ ಕುಸುಮವಾಗಿವೆ.

Advertisement

ಇಂತಹ ವಾತಾವರಣದಲ್ಲೂ ಯುವ ಸಂಘಟನೆಯೊಂದು ಸಾಮಾಜಿಕ ಕಾಳಜಿಯಿಂದ ರಕ್ತ ಪರೀಕ್ಷಾ ಕೇಂದ್ರ ಆರಂಭಿಸಿದ್ದು, ಬಡವರಿಗೆ ಕೈಗೆಟಕುವ ಕನಿಷ್ಠ ದರದಲ್ಲಿ ಸೇವೆ ದೊರೆಯುವಂತಾಗಿದೆ. ಪ್ರತಿಯೊಂದು ವೈದ್ಯಕೀಯ ಪರೀಕ್ಷೆಗಳಿಗೆ ಇಂತಿಷ್ಟು ದರ ಅಂತ ನಿಗದಿಯಾಗಿದ್ದರೂ ಕೆಲವೆಡೆ ಇದು ಪಾಲನೆಯೂ ಇಲ್ಲ. ಇನ್ನು ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಲೇಬೇಕಾದ ಅನಿವಾರ್ಯತೆ.

ಆದರೆ ದುಬಾರಿ ಶುಲ್ಕದ ಪರಿಣಾಮ ಕೆಲವರು ಸಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಹಿಂದೇಟು ಹಾಕಿ ರೋಗ ಉಲ್ಬಣಗೊಂಡ ನಂತರ ವೈದ್ಯರ ಬಳಿಗೆ ತೆರಳುತ್ತಾರೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎನ್ನುವ ಕಾರಣಕ್ಕೆ ಅಖೀಲ ಭಾರತ ತೇರಾಪಂಥ ಯುವಕ ಪರಿಷತ್‌ ನಗರದ ದೇಸಾಯಿ ವೃತ್ತದಲ್ಲಿರುವ ವಿವೇಕಾನಂದ ಕಾರ್ನರ್‌ನಲ್ಲಿ ರಕ್ತ ಹಾಗೂ ಮೂತ್ರ ಪರೀಕ್ಷಾ ಕೇಂದ್ರ ಆರಂಭಿಸಿದ್ದು, ಪರೀಕ್ಷೆಗೆ ತಗಲುವ ವೆಚ್ಚವನ್ನು ಮಾತ್ರ ಶುಲ್ಕದ ರೀತಿಯಲ್ಲಿ ಪಡೆದು ಎಲೆಮರೆಯ ಕಾಯಿಯಂತೆ ಯುವಕರ ತಂಡ ಕೆಲಸ ಮಾಡುತ್ತಿದೆ.

ಅಗ್ಗದ ಶುಲ್ಕ: ಹೊರಗಿನ ಪ್ರಯೋಗಾಲಯದ ಶುಲ್ಕಕ್ಕೆ ಹೋಲಿಸಿದರೆ ಕನಿಷ್ಠ ಶೇ.40ಕ್ಕಿಂತಲೂ ದರ ಕಡಿಮೆಯಿದೆ. ಕಾಲಕಾಲಕ್ಕೆ ಮಾಡಿಸಬೇಕಾದ ಪರೀಕ್ಷೆಗಳಾದ ಕಂಪ್ಲೀಟ್‌ ಬ್ಲಿಡ್‌ ಕೌಂಟ್‌-140 ರೂ, ಬ್ಲಿಡ್‌ ಶುಗರ್‌ ಟೆಸ್ಟ್‌-50, ಲಿವರ್‌ ಫಂಕ್ಷನ್‌ ಟೆಸ್ಟ್‌-300 ರೂ, ಲಿಪಿಡ್‌ ಪ್ರೊಫೈಲ್‌-250 ರೂ. ಥೈರಾಯ್ಡ ಪ್ರೊಫೈಲ್‌-250 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಇತರ ಎಲ್ಲಾ ಪರೀಕ್ಷೆಗಳ ದರವೂ ಕೂಡ ಕನಿಷ್ಠವಾಗಿದೆ. ಇನ್ನು ಅಪರೂಪದ ಪರೀಕ್ಷೆಗಳಿಗೆ ಅಗತ್ಯ ಪರಿಕರಗಳ ಕಾರಣ ಹೊರಗಿನ ಕೇಂದ್ರಗಳಿಗೆ ಹೋಲಿಸಿದರೆ ಶೇ.30 ರಷ್ಟು ದರ ಕಡಿಮೆಯಾಗಲಿದೆ. ಹೊರಗಿನ ಪ್ರಯೋಗಾಲಯದಲ್ಲಿ ಈ ಪರೀಕ್ಷೆಗಳಿಗೆ ದುಪ್ಪಟ್ಟು ಶುಲ್ಕವಿದೆ. ಬಡವರ ಆರೋಗ್ಯದ ಕಾಳಜಿಯ ಗಮನದಲ್ಲಿ ಇಟ್ಟುಕೊಂಡು ಈ ಕೇಂದ್ರ ಆರಂಭಿಸಲಾಗಿದೆ. ಸದ್ಯಕ್ಕೆ ಮೂವರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

 ಸಾಮಾಜಿಕ ಕಾಳಜಿ: ಈ ಸೇವೆ ದೇಶಾದ್ಯಂತ ನಡೆಯುತ್ತಿದ್ದು, ನಗರದಲ್ಲಿ ಕಾರ್ಯನಿವಹಿಸುತ್ತಿರುವುದು 51ನೇ ಕೇಂದ್ರವಾಗಿದೆ. ಕೇಂದ್ರ ಸಮಿತಿಯಿಂದ ಕೇಂದ್ರ ಸ್ಥಾಪನೆಗೆ 25ಲಕ್ಷ ರೂ. ಸಹಾಯಧನದೊಂದಿಗೆ ಉಳಿದ ಹಣವನ್ನು ಸ್ಥಳೀಯವಾಗಿ ಸಂಗ್ರಹಿಸಿ ಆರಂಭಿಸಲಾಗಿದೆ. ಈ ಕೇಂದ್ರದ ನಿರ್ವಹಣೆಗೆ 25 ಜನರ ಟ್ರಸ್ಟ್‌ ರಚಿಸಿಕೊಂಡಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಈ ಟ್ರಸ್‌ rನ ಸದಸ್ಯರು ಪ್ರತಿಯೊಬ್ಬರು ವಹಿಸಿಕೊಳ್ಳುತ್ತಾರೆ. ಪ್ರತಿ ತಿಂಗಳು ಕಟ್ಟಡ ಬಾಡಿಗೆ, ಸಿಬ್ಬಂದಿ ವೇತನ, ವೈದ್ಯಕೀಯ ಪರೀಕ್ಷಾ ಪರಿಕರಗಳು, ಕೇಂದ್ರ ನಿರ್ವಹಣೆ ಸೇರಿದಂತೆ ಲಕ್ಷಾಂತರ ರೂಪಾಯಿಗಳನ್ನು ಈ ಟ್ರಸ್ಟ್‌ ಭರಿಸುತ್ತದೆ. ಈ ಸೇವೆ ಪಡೆಯಲು ಯಾವುದೇ ನಿಬಂಧನೆಗಳು ಅಥವಾ ದಾಖಲೆಗಳ ಅಗತ್ಯ ಇರಲ್ಲ.

ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಈ ಸೇವೆ ಲಭ್ಯವಿರುತ್ತದೆ. ಈ ಕಾರ್ಯದ ಜತೆ ಅನಾಥಶ್ರಮ, ವೃದ್ಧಾಶ್ರಮಗಳಿಗೆ ಅಗತ್ಯ ಪರಿಕರ ಒದಗಿಸುವ ಮಹತ್ಕಾರ್ಯ ಈ ಯುವಕ ಪರಿಷತ್‌ ಮಾಡುತ್ತಿದೆ.

ಸ್ಕ್ಯಾನಿಂಗ್ ಕೇಂದ್ರದ ಚಿಂತನೆ: ಕೋವಿಡ್‌ ಸಂದರ್ಭದಲ್ಲಿ ಆಕ್ಸಿಜನ್‌ ಕೊರತೆ ನೀಗಿಸುವ ನಿಟ್ಟಿನಲ್ಲಿ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ್ದರು. ಈಗಲೂ ವೈದ್ಯರ ಶಿಫಾರಸ್ಸಿನೊಂದಿಗೆ ದಿನಕ್ಕೆ 100 ರೂ. ಬಾಡಿಗೆ ರೂಪದಲ್ಲಿ ಕೊಡುವ ಕಾರ್ಯ ಮುಂದುವರಿದಿದೆ. ಬಡ ರೋಗಿಗಳಿಗೆ ಸೇವೆ ದೊರಕಲಿ ಎನ್ನುವ ಕಾರಣದಿಂದ ನಗರದ ಆಸ್ಪತ್ರೆಯೊಂದರ ಸಹಕಾರದಿಂದ ಈ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿತ್ತು. ‌

ಆದರೆ ಅವರಿಂದ ಲಾಭದ ನಿರೀಕ್ಷೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಆರಂಭಿಸಿದ್ದಾರೆ. ರೋಗಿಗಳ ಪ್ರಮಾಣದ ಹೆಚ್ಚಿದಂತೆಲ್ಲಾ ಬೇರೆಡೆಗೆ ಕೇಂದ್ರ ಸ್ಥಳಾಂತರಿಸಿ ರಕ್ತ ಪರೀಕ್ಷಾ ಕೇಂದ್ರದೊಂದಿಗೆ ಸ್ಕ್ಯಾನಿಂಗ್‌ ಹಾಗೂ ಫಿಸಿಯೋಥೆರಪಿ ಸೇವೆ ಆರಂಭಿಸುವ ಗುರಿಯಿದೆ. ಇದರೊಂದಿಗೆ ಅಗತ್ಯ ವೈದ್ಯರ ನೆರವು ನೀಡಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ.

ಬಡವರಿಗೆ ಈ ಸೇವೆ ದೊರೆಯಬೇಕು ಎನ್ನುವ ಕಾರಣದಿಂದ ಕೇಂದ್ರ ಆರಂಭಿಸಲಾಗಿದೆ. ದುಬಾರಿ ದರದಿಂದ ಬಡವರು ಆರೋಗ್ಯ ಕಳೆದುಕೊಳ್ಳಬಾರದು ಎಂಬುದು ಪ್ರಮುಖ ಉದ್ದೇಶವಾಗಿದೆ. ಹೊರಗಿನ ಪ್ರಯೋಗಾಲಯಗಳಿಗೆ ಹೋಲಿಸಿದರೆ ಸಾಕಷ್ಟು ಪ್ರಮಾಣದಲ್ಲಿ ದರ ಕಡಿಮೆಯಿದೆ. ಇದರಲ್ಲಿ ಯಾವುದೇ ಲಾಭದ ಉದ್ದೇಶ ಹೊಂದಿಲ್ಲ. ಟ್ರಸ್ಟ್‌ ಮೂಲಕ ಇದನ್ನು ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಮೇಲ್ದರ್ಜೆಗೇರಿಸುವ ಉದ್ದೇಶವಿದೆ. ರಕ್ತ ತಪಾಸಣೆ ಕೇಂದ್ರದ ಜತೆಗೆ ಸ್ಕ್ಯಾನಿಂಗ್‌ ವ್ಯವಸ್ಥೆ ದೊರಕಿಸುವ ಉದ್ದೇಶ ಹೊಂದಿದ್ದೇವೆ.  –ವಿಶಾಲ್‌ ಜೈನ್‌, ಮ್ಯಾನೇಜಿಂಗ್‌ ಟ್ರಸ್ಟಿ. ಕಾರ್ಯದರ್ಶಿ, ಆಚಾರ್ಯ ತುಳಸಿ ಡೈಗ್ನಾಸ್ಟಿಕ್‌ ಕೇಂದ್ರ.

-ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next