ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯ ಆವರಣದ ಕಾರು ಪಾರ್ಕಿಂಗ್ ಜಾಗದಲ್ಲಿ ಜು.12ರಂದು ರಕ್ತದ ಕಲೆ ಕಾಣಿಸಿ ಸಾಕಷ್ಟು ಆತಂಕ ಹಾಗೂ ಕುತೂಹಲಕ್ಕೆ ಇತೆರೆ ಎಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯ ಆಧಾರದಲ್ಲಿ ನ್ಯಾಯಾಲಯದ ಆವರಣದಲ್ಲಿ ಪತ್ತೆಯಾಗಿದ್ದ ರಕ್ತ ನಾಯಿಯದ್ದು ಎಂದು ದೃಢಪಟ್ಟಿದೆ! ಈ ಕುರಿತ ವರದಿಯ ಪ್ರತಿಯನ್ನು ಮಂಗಳೂರು ಪೊಲೀಸ್ ಆಯುಕ್ತರಿಗೆ ನೀಡಿದ್ದು, ಈ ಮೂಲಕ ಕಳೆದ ಒಂದು ವಾರದಿಂದ ರಕ್ತದ ಕಲೆಯ ಬಗ್ಗೆ ಇದ್ದ ಕುತೂಹಲ ಹಾಗೂ ನಿಗೂಢತೆಗೆ ಕಾರಣ ಗೊತ್ತಾಗಿದೆ.
ಕಳೆದ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯದ ಮುಖ್ಯ ದ್ವಾರದ ಎದುರಿನ ಪರಿಸರದಲ್ಲಿ ಕಸ ಗುಡಿಸುವವರು ಸ್ಕಾರ್ಪಿಯೋ ಕಾರಿನ ಬಾಗಿಲು ಹಾಗೂ ಪಕ್ಕದಲ್ಲಿ ರಕ್ತ ಚೆಲ್ಲಿರುವುದನ್ನು ಗಮನಿಸಿದ್ದರು. ಕೂಡಲೇ ಬಂದರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಅಷ್ಟೇಅಲ್ಲ, ಖುದ್ದು ನಗರ ಪೊಲೀಸ್ ಆಯುಕ್ತರೇ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಆ ಕುರಿತಂತೆ ತನಿಖೆ ಕೈಗೊಂಡಿದ್ದರು.
ಕೋರ್ಟ್‌ನಲ್ಲಿ ಅಳವಡಿಸಿದ್ದ ಸಿಸಿ ಕೆಮರಾದ ದೃಶ್ಯದ ಪರಿಶೀಲನೆ ಕೂಡ ನಡೆಸಲಾಗಿತ್ತು. ಆದರೆ, ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂಬ ಕಾರಣದಿಂದ ಪೊಲೀಸರಿಗೂ ಈ ಪ್ರಕರಣ ಸವಾಲಾಗಿತ್ತು. ಬಳಿಕ ರಕ್ತದ ಕಲೆಯನ್ನು ಪರಿಶೀಲನೆಗಾಗಿ ವಿಧಿ-ವಿಜ್ಞಾನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ, ಅಲ್ಲಿಂದ ವರದಿ ಬಂದಿದ್ದು, ಕೋರ್ಟ್ ಆವರಣದಲ್ಲಿ ಗಾಯಗೊಂಡಿದ್ದ ನಾಯಿಯ ದೇಹದಿಂದ ಆ ರೀತಿಯಲ್ಲಿ ರಕ್ತ ಚೆಲ್ಲಿದ್ದು ಎನ್ನುವುದು ದೃಢಪಟ್ಟಿದೆ.
ಆದರೆ ರಕ್ತದ ಕಲೆ ಕಾಣಿಸಿದ ತಕ್ಷಣವೇ ಆ ಬಗ್ಗೆ ನಿರ್ಲಕ್ಷ ವಹಿಸದೆ ಹೆಚ್ಚಿನ ಮುತುವರ್ಜಿಯಿಂದ ತನಿಖೆ ಕೈಗೊಂಡು ಸತ್ಯಾಂಶ ಬಹಿರಂಗಪಡಿಸಿ ಜನರಲ್ಲಿ ಮನೆ ಮಾಡಿದ್ದ ಆತಂಕ-ಕುತೂಹಲಕ್ಕೆ ತೆರೆ ಎಳೆಯುವ ಕಾರ್ಯವನ್ನು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಡಿರುವುದು ಗಮನಾರ್ಹ.