Advertisement

ರಕ್ತದ ಕೊರತೆ ನೀಗಿಸಲಿದೆ ಬೆಳ್ಳಿ ರಕ್ತನಿಧಿ ಕೇಂದ್ರ

02:24 PM Apr 24, 2019 | Team Udayavani |

ರಾಮನಗರ: ಅಪಘಾತ ಮುಂತಾದ ತುರ್ತು ಸ್ಥಿತಿಯಲ್ಲಿ ರಕ್ತಕ್ಕಾಗಿ ಜಿಲ್ಲೆಯ ಜನತೆ ಬೆಂಗಳೂರು ಅಥವಾ ಮಂಡ್ಯಕ್ಕೆ ಹೋಗಬೇಕಾಗಿತ್ತು. ಈ ಕೊರತೆಯನ್ನು ನೀಗಿಸಲುವಾಗಿ ಬೆಳ್ಳಿ ರಕ್ತ ನಿಧಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದಿ ಬೆಳ್ಳಿ ಹೆಲ್ತ್ ಸರ್ವೀಸ್‌ ಫೌಂಡೇಷನ್‌ ಅಧ್ಯಕ್ಷ ವಿನೋದ್‌ ತಿಳಿಸಿದರು.

Advertisement

ನಗರದ ರಾಮಕೃಷ್ಣ ಆಸ್ಪತ್ರೆಯ ಬಳಿ ನೂತನವಾಗಿ ಆರಂಭವಾಗಿರುವ ಬೆಳ್ಳಿ ರಕ್ತ ನಿಧಿ ಕೇಂದ್ರಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಈಗಾಗಲೇ ರೆಡ್‌ ಕ್ರಾಸ್‌ ಸಂಸ್ಥೆ ನೇತೃತ್ವದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತ ಸಂಗ್ರಹ ಕೇಂದ್ರದಲ್ಲಿ ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಿಸಲು ಅಸಾಧ್ಯ. ನಿರ್ವಹಣೆ ಕೊರತೆಯಿಂದ ಹೆಚ್ಚಿನ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕೊರತೆಯನ್ನು ನೀಗಿಸಲು ರಕ್ತನಿಧಿಯನ್ನು ಸ್ಥಾಪಿಸಿರುವುದಾಗಿ ತಿಳಿಸಿದರು.

ತಾಲೂಕು ಕೇಂದ್ರದಲ್ಲಿ ರಕ್ತನಿಧಿಗಳಿಲ್ಲ: ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಮಾಗಡಿಯಲ್ಲೂ ರಕ್ತನಿಧಿಗಳಿಲ್ಲ. ವಿವಿಧ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾಗಿರುವ ರಕ್ತಕ್ಕಾಗಿ ಜನ ಬೆಂಗಳೂರು, ಮಂಡ್ಯ ಎಂದು ಅಲೆದಾಡಬೇಕಿತ್ತು. ಇದೀಗ ತಮ್ಮಲ್ಲೇ ಈ ವ್ಯವಸ್ಥೆ ಸಿಗಲಿದೆ. ರಕ್ತನಿಧಿಯಲ್ಲಿ ರಕ್ತದಿಂದ ಪ್ಲೇಟ್ಲೆಟ್, ಪ್ಲಾಸ್ಮ ಮುಂತಾದ ಕಾಂಪೋನೆಂಟ್‌ಗಳನ್ನು ವಿಭಜಿಸುವ ವ್ಯವಸ್ಥೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ರಕ್ತನಿಧಿಯಲ್ಲಿ ಈ ವ್ಯವಸ್ಥೆ ಇರಲಿಲ್ಲ. ಹೀಗಾಗಿ ತಮ್ಮ ಸಂಸ್ಥೆ ಸ್ಥಾಪಿಸಿರುವ ಬೆಳ್ಳಿ ರಕ್ತ ನಿಧಿ ಸಾರ್ವಜನಿಕರಿಗೆ ತುರ್ತುಸ್ಥಿತಿಯಲ್ಲಿ ಉಪಯೋಗವಾಗಲಿದೆ ಎಂದರು.

850 ರೂ.ಗೆ ಒಂದು ಯೂನಿಟ್ ರಕ್ತ: ಬೆಳ್ಳಿ ರಕ್ತನಿಧಿ ಕೇಂದ್ರ ಟೆಕ್ನಿಕಲ್ ಸೂಪರ್‌ವೈಸರ್‌ ರಾಮು ಮಾತನಾಡಿ, ಸರ್ಕಾರದ ನಿಯಮದ ಪ್ರಕಾರವೇ ತಮ್ಮಲ್ಲಿ ಒಂದು ಯೂನಿಟ್ ರಕ್ತ 850 ರೂ. ಗೆ ದೊರೆಯಲಿದೆ. ಆರೋಗ್ಯವಂತ ವ್ಯಕ್ತಿಗಳಿಂದ ಸಂಗ್ರಹಿಸಿದ ರಕ್ತವನ್ನು ಎಚ್ಐವಿ, ಜಾಂಡಿಸ್‌, ಮಲೇರಿಯಾ ಮುಂತಾದ ಸೋಂಕು ಇಲ್ಲ ಎಂದು ದೃಢಪಡಿಸಿಕೊಳ್ಳಲು ನಡೆಸುವ ಪರೀಕ್ಷೆಗಳಿಗೆ ಆಗುವ ವೆಚ್ಚವನ್ನು ಮಾತ್ರ ಪಡೆದು ರಕ್ತವನ್ನು ನೀಡಲಾಗುತ್ತದೆ ಎಂದರು.

ಸುಸಜ್ಜಿತ ರಕ್ತಕೇಂದ್ರ ಸ್ಥಾಪನೆ: ಕೇಂದ್ರದ ವೈದ್ಯ ಡಾ.ಅನುಪಮ ಮಾತನಾಡಿ, ಸಂಗ್ರಹದಲ್ಲಿರುವ ರಕ್ತವನ್ನು ಸಾಮಾನ್ಯ ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸುವುದು ಸರಿಯಲ್ಲ. ಇದಕ್ಕೆಂದ ವಿಶೇಷ ರೆಫ್ರಿಜರೇಟರ್‌ಗಳನ್ನು ಬಳಸಬೇಕಾಗಿದೆ. ಬೆಳ್ಳಿ ರಕ್ತನಿಧಿಯಲ್ಲಿ ಈ ಎಲ್ಲಾ ಸೂಕ್ಷ್ಮ ಅಂಶಗಳನ್ನು ಗಮನಿಸಿ ಸುಸಜ್ಜಿತವಾಗಿ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

Advertisement

ಕೇಂದ್ರ ಆರಂಭ ಸಂತಸದ ವಿಚಾರ: ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ತಮ್ಮ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ರಕ್ತದಾನ ಶಿಬಿರಗಳು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುತ್ತಿವೆ. ತಮ್ಮ ಸಂಸ್ಥೆ ಆಯೋಜಿಸಿದ್ದ ರಕ್ತದಾನ ಶಿಬಿರಗಳಲ್ಲಿ ಇಲ್ಲಿಯವರೆಗೆ 1 ಸಾವಿರಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಆದರೆ, ಈ ರಕ್ತವನ್ನು ಸಂಗ್ರಹಿಸಿಡುವ ವ್ಯವಸ್ಥೆ ರಾಮನಗರದಲ್ಲಿ ಇಲ್ಲದ ಕಾರಣ ಬೆಂಗಳೂರು ರಕ್ತ ನಿಧಿಯ ಮೊರೆ ಹೋಗಬೇಕಾಗಿತ್ತು. ಇದೀಗ ಸುಸಜ್ಜಿತ ರಕ್ತ ನಿಧಿ ಕೇಂದ್ರ ಆರಂಭವಾಗಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಅನ್ನದಾನೇಶ್ವರ ಸಾಮೀಜಿಗಳಿಂದ ಉದ್ಘಾಟನೆ: ರಕ್ತನಿಧಿ ಕೇಂದ್ರವನ್ನು ಆದಿಚುಂಚನಗಿರಿ ಮಠದ ರಾಮನಗರ ಶಾಖೆಯ ಮುಖ್ಯಸ್ಥ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಕನಕಪುರದ ಲಯನ್‌ ಮರಸಪ್ಪ ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಹಕಾರಕ್ಕಾಗಿ ಸಂಪರ್ಕಿಸಿ: ರಕ್ತದಾನ ಶಿಬಿರ ಆಯೋಜಿಸುವ ಸಂಘ-ಸಂಸ್ಥೆಗಳು ಸಹಕಾರಕ್ಕಾಗಿ 080-29782345, 9845235648, 7892215917 ಸಂಪರ್ಕಿಸಬಹುದು ಎಂದು ಕೇಂದ್ರದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next