ಮುದ್ದೇಬಿಹಾಳ: ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯ ರಕ್ತದಾನ ಮಾಡಲು ಅರ್ಹನಾಗಿರುತ್ತಾನೆ. ನಾವು ಮಾಡುವ ರಕ್ತದಾನ ಇನ್ನೊಬ್ಬರ ಜೀವ ಉಳಿಸಲು ಬಳಕೆ ಆಗುತ್ತದೆ. ಎಲ್ಲೆಡೆ ರಕ್ತದಾನ ಶಿಬಿರಗಳು ಹೆಚ್ಚಬೇಕು. ಯುವಜನತೆ ರಕ್ತದಾನಕ್ಕೆ ಮುಂದಾಗಬೇಕು ಎಂದು ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಡಾ| ಪರಶುರಾಮ ಪವಾರ ಹೇಳಿದರು.
ಇಲ್ಲಿನ ತಂಗಡಗಿ ರಸ್ತೆಯ ಡಿಸಿಸಿ ಬ್ಯಾಂಕ್ ಹತ್ತಿರ ಇರುವ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಪ್ರಮುಖ ಡಾ| ಆರ್. ಎಸ್.ಮಸೂತಿಯವರ ಋತಿಕಾ ಕ್ಲಿನಿಕ್‌ನಲ್ಲಿ ಮುದ್ದೇಬಿಹಾಳ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಘಟಕ ಹಾಗೂ ಭಾಜಪ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನ ನಿಮಿತ್ತ ಆಯೋಜಿಸಿದ್ದ ರಕ್ತದಾನ ಶಿಬಿರದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಕಾಶೀಬಾಯಿ ರಾಂಪುರ ಅವರು ಮಾತನಾಡಿ ಪ್ರಧಾನಿ ಮೋದಿ ಅವರು ಅಪ್ರತಿಮ ದೇಶಭಕ್ತರಾಗಿದ್ದಾರೆ. ಅವರ ಜನುಮ ದಿನವನ್ನು ಸಾರ್ಥಕಗೊಳಿಸಲು ಅವರ ಅಭಿಮಾನಿಗಳು ರಕ್ತದಾನ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಪಘಾತದಲ್ಲಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುವವರಿಗೆ ಮಾತ್ರವಲ್ಲದೆ ರಕ್ತದ ಅಗತ್ಯ ಇರುವ ಅನೇಕರಿಗೆ ರಕ್ತದಾನದಿಂದ ಬಂದ ರಕ್ತ ಜೀವ ಉಳಿಸಲು ನೆರವಾಗುತ್ತದೆ. ರಕ್ತದ ಅವಶ್ಯಕತೆ ತುಂಬಾ ಇರುವುದನ್ನು ಮನಗಂಡು ಯುವಜನರು ರಕ್ತದಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಜಯಪುರ ರಕ್ತ ನಿಧಿ ಕೇಂದ್ರದ ಡಾ| ಆಕಾಶ ಮಾತನಾಡಿ ಅಪಘಾತದಂತಹ ಸಂದರ್ಭದಲ್ಲಿ ರೋಗಿಗಳೂಂದಿಗೆ ಬಂದವರಿಗೆ ರಕ್ತದಾನ ಮಾಡಲು ಆಗುವುದಿಲ್ಲ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ತದಾನ ಶಿಬಿರಗಳಿಂದ ಪಡೆದು ಸೂಕ್ತ ರೀತಿಯಲ್ಲಿ ಸಂರಕ್ಷಿಸಲ್ಪಟ್ಟ ದಾನಿಗಳ ರಕ್ತವನ್ನು ನೀಡಿ ಜೀವವನ್ನು ಉಳಿಸಲಾಗುತ್ತದೆ. ರಕ್ತದಾನದಿಂದ ನಮ್ಮ ದೇಹದ ಕೊಲೆಸ್ಟರಾಲ್ ಕಡಿಮೆ ಆಗಲು ನೆರವಾಗುತ್ತದೆ. ಹೊಸ ರಕ್ತ ಉತ್ಪತ್ತಿಯಾಗಿ ಜೀವ ಕಳೆ ಹೆಚ್ಚುತ್ತದೆ ಎಂದರು.
ಈ ವೇಳೆ 40ಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ರಕ್ತದಾನ ಮಾಡಿದರು. ಎಲ್ಲರಿಗೂ ರಕ್ತ ನಿ ಕೇಂದ್ರದಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಯುವ ಮೋರ್ಚಾ ಅಧ್ಯಕ್ಷ ಪುನೀತ್ ಹಿಪ್ಪರಗಿ ಮತ್ತು ಡಾ| ಆರ್.ಎಸ್.ಮಸೂತಿ ಮತ್ತು ಅವರ ಗೆಳೆಯರ ಬಳಗದ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜಶೇಖರ ಹೊಳಿ, ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷ ಲಕ್ಷ್ಮಣ ಬಿಜ್ಜೂರ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಮಣಿಕಂಠ ಅಮರೋದಗಿ, ಈಶ್ವರ ಹೂಗಾರ, ಹನುಮಂತ ನಲವಡೆ, ಶೇಖರ ಢವಳಗಿ, ಉದಯಸಿಂಗ್ ರಾಯಚೂರ, ಸಾಯಿನಾಥ ಕುಂಬಾರ ಸೇರಿ ಹಲವರು ಪಾಲ್ಗೊಂಡಿದ್ದರು. ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾ| ಚಂದ್ರಶೇಖರ ಶಿವಯೋಗಿಮಠ, ಡಾ| ವಿಜಯಕುಮಾರ ನಾಯಕ ಇದ್ದರು.