ಮಾನ್ವಿ: ಕೋವಿಡ್ ನಂತಹ ಸಂದರ್ಭದಲ್ಲಿ, ಗರ್ಭಿಣಿಯರಿಗೆ, ಅಪಘಾತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನ ಮಾಡಬೇಕು. ಇದರಿಂದ ಅಮೂಲ್ಯವಾದ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ನಗರೇಶ್ವರ ಆರ್ಯವೈಶ್ಯ ಸಂಘ ತಾಲೂಕಾಧ್ಯಕ್ಷ ಆರ್.ಮುತ್ತುರಾಜ ಶೆಟ್ಟಿ ತಿಳಿಸಿದರು.
ಪಟ್ಟಣದ ವಾಸವಿ ನಗರೇಶ್ವರ ದೇವಸ್ಥಾನದಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ವಾಸವಿ ಜಯಂತಿ ಅಂಗವಾಗಿ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಿಮ್ಸ್ ವೈದ್ಯರಾದ ಡಾ| ಅಭಿಷೇಕ ಜವಾಳಿ, ಡಾ| ಸುಜಾತ, ಡಾ| ಮುಗ್ನಿ, ಡಾ| ಅಭಿಷೇಕ್ ಚವಗಲ್, ಮುಖಂಡರಾದ ಎಂ.ಆರ್. ವೆಂಕಯ್ಯ ಶೆಟ್ಟಿ, ಆರ್.ದ್ವಾರಕಾನಾಥ ಶೆಟ್ಟಿ, ಜಿ.ರಾಮಾಂಜನೇಯ್ಯ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು. 40ಕ್ಕೂ ಹೆಚ್ಚು ಜನರಿಂದ ರಕ್ತದಾನ ನಡೆಯಿತು.