ರಕ್ತದಾನ ಮಾಡಿ ಮಾನವೀಯತೆ ಮೆರೆದರು
Team Udayavani, Apr 3, 2020, 1:18 PM IST
ಹಾವೇರಿ: ಕೋವಿಡ್ 19 ನಿಯಂತ್ರಣಕ್ಕಾಗಿ ಲಾಕ್‌ಡೌನ್ ಆದೇಶ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಎದುರಾಗಿರುವ ರಕ್ತದ ಕೊರತೆ ನೀಗಿಸಲು ಶಿಗ್ಗಾವಿ ತಾಲೂಕು ಕ್ಯಾಲಕೊಂಡ ಗ್ರಾಮದ ಏಳು ಜನ ದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಶಿಗ್ಗಾವಿ ತಾಲೂಕು ವೈದ್ಯಾಧಿಕಾರಿ ಡಾ| ಹನುಮಂತಪ್ಪ ಪಿ.ಎಚ್. ಅವರ ಸಲಹೆಯಂತೆ ಕ್ಯಾಲಕೊಂಡ ಗ್ರಾಮದ ರಕ್ತದಾನಿಗಳು ಅಂಬ್ಯುಲೆನ್ಸ್‌ನಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಆಗಮಿಸಿ ರಕ್ತದಾನ ಮಾಡಿದರು. ರಕ್ತದಾನದ ನೇತೃತ್ವವನ್ನು ಆಡೂರಿನ ರಕ್ತದಾನಿ ನೇತಾಜಿ ಘೋರ್ಪಡೆ ವಹಿಸಿದ್ದರು. ಸದಾನಂದ ಆರೇರ, ವಿನಾಯಕ ಬಿ.ಎಚ್, ಬಸವರಾಜ ಉಕ್ಕುಂದ, ಪರಮೇಶ ಎಫ್.ಎಂ., ಮಲ್ಲಿಕಾರ್ಜುನ ಸಿ.ಜಿ,ಖಾಜಾಪೀರ್ ಮುಲ್ಲಾ, ರವಿರಾಜ ನಲವಾಡ ರಕ್ತದಾನ ಮಾಡಿದರು.
ರಕ್ತ ಅಭಾವದ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವದಾನಿಯಾದವರೆಲ್ಲರಿಗೂ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ| ಬಸವರಾಜ ತಳವಾರ ಹಾಗೂ ಆರೋಗ್ಯ ಇಲಾಖೆ ಎಲ್ಲ ಅಧಿಕಾರಿಗಳು ಅಭಿನಂದಿಸಿದ್ದಾರೆ. ಲಾಕ್ ಡೌನ್‌ನಿಂದಾಗಿ ರಕ್ತನಿಧಿ ಕೇಂದ್ರಕ್ಕೆ ರಕ್ತದ ಕೊರತೆಯಾಗಿದೆ ಎಂದು “ಉದಯವಾಣಿ’ ಮಾರ್ಚ್ 24ರಂದು ವಿಶೇಷ ವರದಿ ಪ್ರಕಟಿಸಿತ್ತು.
ರಕ್ತ ತೀವ್ರ ಅಭಾವ: ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿತಿಂಗಳು ರಕ್ತ ವಿದಳನ ಘಟಕದಿಂದ 8-10 ರಕ್ತದಾನ ಶಿಬಿರಗಳನ್ನು ಮಾಡಿ ಸರಾಸರಿ 500 ಯುನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು. ಸಂಗ್ರಹಿಸಿದ ರಕ್ತವನ್ನು 35 ದಿನಗಳಲ್ಲಿ ತುರ್ತು ಅಗತ್ಯವಿದ್ದ ರೋಗಿಗಳಿಗೆ ನೀಡಲಾಗುತ್ತಿತ್ತು. ಈಗ ಜಿಲ್ಲಾಸ್ಪತ್ರೆಯ ಅಗತ್ಯತೆ ತೀರಿಸಲು ಸಹ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.