ದಾವಣಗೆರೆ: ಆ ಬಾಲಕಿಗೆ ವೈದ್ಯಳಾಗಿ ಜನಸೇವೆ ಮಾಡಬೇಕು ಎಂಬ ಅದಮ್ಯ ಬಯಕೆ ಇತ್ತು. ಕಂಡಂತಹ ಕನಸು ನನಸಾಗಿಸಿಕೊಳ್ಳಲು ಪರಿಶ್ರಮಪಟ್ಟು ಓದುತ್ತಿದ್ದಳು. ಅದಕ್ಕೆ ತಕ್ಕಂತೆ ಅಂಕ ಗಳಿಕೆ. ದ್ವಿತೀಯ ಪಿಯುಸಿಯ 5 ವಿಷಯದಲ್ಲಿ ಬಹಳ ಚೆನ್ನಾಗಿಯೇ ಬರೆದಿದ್ದಳು. ಆದರೆ ಅಂತಿಮ ಪರೀಕ್ಷೆ ಬರೆಯಲು, ಗಳಿಸಿದ ಅಂಕಗಳನ್ನು ನೋಡುವುದಕ್ಕೆ ಅವಳೇ ಇರಲಿಲ್ಲ!
ಕರುಣಾಜನಕ ಕಥೆಯ ದುರಂತ ನಾಯಕಿ ದಾವಣಗೆರೆಯ ಸಿದ್ಧಗಂಗಾ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ಬಿ. ಅನುಷಾ. ಹಾಸ್ಟೆಲ್‌ನಲ್ಲಿದ್ದುಕೊಂಡು ಅಭ್ಯಾಸ ಮಾಡುತ್ತಿದ್ದಳು. ಬಹಳ ಮೃದು ಸ್ವಭಾವದ ಹುಡುಗಿ. ಯಾರೊಡನೆಯೂ ಹೆಚ್ಚು ಮಾತಿಲ್ಲ. ತಾನಾಯಿತು, ತನ್ನ ಓದಾಯಿತು ಎಂಬಂತೆ ಇದ್ದಳು. ಎಲ್ಲಾ ಟೆಸ್ಟ್ ಮತ್ತು ಪೂರ್ವಭಾವಿ ಪರೀಕ್ಷೆಯಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆಯುತ್ತಿದ್ದಳು.
ಮಾ.18ರಿಂದ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5 ವಿಷಯಗಳಿಗೆ ಹಾಜರಾದಳು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂಗ್ಲಿಷ್ ಪರೀಕ್ಷೆ ನಡೆಯದ ಕಾರಣ ಹಾಸ್ಟೆಲ್ ಮಕ್ಕಳು ಅವರವರ ಊರಿಗೆ ಹೊರಟರು. ಅನುಷಾ ತನ್ನ ಊರಾದ ಚನ್ನಗಿರಿಯ ತಾಳಿಕಟ್ಟೆಗೆ ತೆರಳಿದಳು. ಏಪ್ರಿಲ್ ತಿಂಗಳಲ್ಲಿ ಅನುಷಾಳ ಆರೋಗ್ಯದಲ್ಲಿ ಏರುಪೇರಾಯಿತು. ರೈತಾಪಿ ಕುಟುಂಬದ ಬಸವರಾಜಪ್ಪ ಮತ್ತು ಮಂಜಮ್ಮ ದಂಪತಿ ಕಂಗಾಲಾದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತೋರಿಸಿದರು. ಎಲ್ಲಾ ಪರೀಕ್ಷೆ ನಡೆಸಿದ ವೈದ್ಯರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ವಿವಿಧ ಪರೀಕ್ಷೆಗಳ ನಂತರ ಅನುಷಾಗೆ ಬ್ಲಿಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.
ಅನಾರೋಗ್ಯದಲ್ಲೂ ಪರೀಕ್ಷೆಗೆ ಸಿದ್ಧತೆ: ಬ್ಲಡ್ ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಸಿದ್ಧಗಂಗಾ ಯೂಟ್ಯೂಬ್ ಚಾನೆಲ್ ಮೂಲಕ ಕಳಿಸುತ್ತಿದ್ದ ಆನ್‌ಲೈನ್ ತರಗತಿಗಳನ್ನು ಬಿಡದೆ ವೀಕ್ಷಿಸುತ್ತಿದ್ದಳು. ಕಾಲೇಜು ನಿರ್ದೇಶಕ ಡಾ| ಡಿ.ಎಸ್. ಜಯಂತ್ ಅವರೊಡನೆ ದೂರವಾಣಿ ಸಂಪರ್ಕದಲ್ಲಿದ್ದಳು. ಅವರೂ ಸಾಕಷ್ಟು ಧೈರ್ಯ ತುಂಬುತ್ತಿದ್ದರು. ಬ್ಲಡ್ ಕ್ಯಾನ್ಸರ್ ನಡುವೆಯೂ ಪರೀಕ್ಷೆ ಬರೆಯುವ ಅದಮ್ಯ ಆಸೆ ಅವಳಲ್ಲಿತ್ತು. ನೀಟ್ ಪರೀಕ್ಷೆಗೂ ಸಿದ್ಧವಾಗುತ್ತಿದ್ದಳು. ಆರೋಗ್ಯವೂ ತುಸು ಚೇತರಿಕೆ ಕಂಡಿತ್ತು. ಜೂ.18ಕ್ಕೆ ಇಂಗ್ಲಿಷ್ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆ ಮುನ್ನಾ ದಿನವೇ ಅನುಷಾ ಅಸುನೀಗಿದಳು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ವೈದ್ಯಕೀಯ ಕೋರ್ಸ್ ಸೇರಿ ಮುಂದೆ ಒಳ್ಳೆಯ ಡಾಕ್ಟರ್ ಆಗಬೇಕು. ಸಮಾಜ ಸೇವೆ ಮಾಡಬೇಕು ಎಂಬ ಅನುಷಾ ಕನಸು ಕಮರಿ ಹೋಗಿದೆ. ಅಸುನೀಗುವ ಮುನ್ನ ಅನುಷಾ ಬರೆದಿದ್ದ ಪರೀಕ್ಷೆಯಲ್ಲಿ ಕನ್ನಡದಲ್ಲಿ 92, ಭೌತಶಾಸ್ತ್ರದಲ್ಲಿ 91, ರಸಾಯನಶಾಸ್ತ್ರದಲ್ಲಿ 89, ಗಣಿತದಲ್ಲಿ 100ಕ್ಕೆ 100, ಜೀವಶಾಸ್ತ್ರದಲ್ಲಿ 95 ಅಂಕಗಳು ಬಂದಿವೆ. ಆದರೆ ಅದನ್ನು ಕಣ್ತುಂಬಿಕೊಳ್ಳಲು ಅನುಷಾಳೇ ಇಲ್ಲ
ಬೆಳೆಯುತ್ತಿದ್ದ ಸಿರಿ ಮುರುಟಿ ಹೋಯ್ತು : ವೈದ್ಯಳಾಗುವ ಕನಸು ಕಾಣುತ್ತಿದ್ದ ಅನುಷಾಳ ಕನಸು ಅರ್ಧದಲ್ಲೇ ಮುರುಟಿ ಹೋಯಿತು. ಹೆತ್ತವರ ಒಡಲಿಗೆ ಕೊಳ್ಳಿ ಇಟ್ಟಂತಾಯಿತು. ಬಾರದ ಮಗಳಿಗಾಗಿ ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ತಂದೆ-ತಾಯಿಯನ್ನು ಸಮಾಧಾನಿಸುವ ಶಬ್ದಗಳು ಯಾರಲ್ಲೂ ಇಲ್ಲ. ಬೆಳೆಯುತ್ತಿದ್ದ ಸಿರಿಯನ್ನು ಮೊಳಕೆಯಲ್ಲೇ
ಚಿವುಟಿ ಹಾಕಿದ ವಿಧಿಯ ಅಟ್ಟಹಾಸಕ್ಕೆ ಎಲ್ಲರೂ ತಲೆಬಾಗಬೇಕು. ಅನುಷಾಳ ಆತ್ಮಕ್ಕೆ ಶಾಂತಿ ಸಿಗಲಿ. ತಂದೆ-ತಾಯಿ ದುಃಖ ಶಮನವಾಗಲಿ ಎಂದು ಎಲ್ಲರ ಪರವಾಗಿ ಆಶಿಸೋಣ ಎನ್ನುತ್ತಾರೆ ಸಿದ್ಧಗಂಗಾ ವಿಜ್ಞಾನ ಪಿಯು ಕಾಲೇಜಿನ ಅನುಷಾ ಜಸ್ಟಿನ್ ಡಿಸೋಜಾ.