ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2010ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಅಪರಾಧಿ ಗೌಹರ್ ಅಜೀಜ್ ಖುಮಾನಿಯನ್ನು ಅಕ್ರಮ ಬಂಧನದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿ ಆತನ ಸಹೋದರ ಹಸನ್ ಅಜೀಜ್ ಅಮೀರ್ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾನೆ.
ಅಕ್ರಮ ಬಂಧನದಲ್ಲಿರುವ ತನ್ನ ಸಹೋಹದರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅಮೀರ್ ಸಲ್ಲಿಸಿದ ಈ ಹೇಬಿಯಸ್ ಕಾರ್ಪಸ್ ಅರ್ಜಿಯು ಗುರುವಾರ ನ್ಯಾ. ಕೆ.ಎನ್. ಫಣೀಂದ್ರ ಹಾಗೂ ನ್ಯಾ. ಎಚ್.ಬಿ. ಪ್ರಭಾಕರ ಶಾಸಿŒ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿಗೆ ಸಂಬಂಧಿಸಿದಂತೆ ಪ್ರಾಥಮಿಕ ವಾದ ಆಲಿಸಿದ ನ್ಯಾಯಪೀಠ, ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನೋಟಿಸ್ ಜಾರಿಗೆ ಆದೇಶಿಸಿತು. ಅಲ್ಲದೇ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹೈಕೋರ್ಟ್ ಆದೇಶದಂತೆ ಅರ್ಜಿದಾರ ದಂಡವನ್ನು ಪಾವತಿಸಿದ್ದಾನೆ. ಆದರೆ, ಶಿಕ್ಷೆಯ ಅವಧಿ ಕಡಿತವಾದ ಹಾಗೂ ಬಂಧಿಸಿದ ದಿನಾಂಕದ ಬಗ್ಗೆ ಇರುವ ಗೊಂದಲಗಳ ಬಗ್ಗೆ ಜೈಲು ಅಧಿಕಾರಿಗಳು ಅಧೀನ ನ್ಯಾಯಾಲಯಕ್ಕೆ ವಿವರಣೆ ಕೇಳಿದ್ದರು. ಅಧೀನ ನ್ಯಾಯಾಲಯ ಸ್ಪಷ್ಟನೆ ನೀಡಿ, ಬಿಡುಗಡೆ ಆದೇಶ ಸಹ ನೀಡಿದೆ. ಆದರೆ, ಜೈಲು ಅಧಿಕಾರಿಗಳು ಬಿಡುಗಡೆ ಮಾಡದೇ ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಬಿಡುಗಡೆಗೆ ಆದೇಶಿಸುವಂತೆ ಕೋರಿದರು.
ಪ್ರಕರಣವೇನು?: 2010ರ ಏ. 17ರಂದು ಮಧ್ಯಾಹ್ನ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ಸಂಖ್ಯೆ 12ರಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 15ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಯಾಸೀನ್ ಭಟ್ಕಳ್ ಸೇರಿದಂತೆ 14 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದ ಗೌಹರ್ ಅಜೀಜ್ ಖುಮಾನಿಯನ್ನು 2012ರಲ್ಲಿ ಬಂಧಿಸಲಾಗಿತ್ತು. ವಿಚಾರಣೆ ಬಳಿಕ ಎನ್‌ಐಎ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.