Advertisement

ಪಾಲಿಕೆ: ಬ್ಲ್ಯಾಕ್‌ಸ್ಪಾಟ್‌ ಜಾಗವಿನ್ನು ಮಿನಿ ಗಾರ್ಡನ್‌!

11:21 AM Apr 04, 2022 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದರೂ ಕೆಲವು ಕಡೆಗಳಲ್ಲಿ ಕಸ ರಾಶಿ ಬಿದ್ದು, ಬ್ಲ್ಯಾಕ್‌ಸ್ಪಾಟ್‌ ಆಗಿ ಪರಿವರ್ತನೆಯಾಗುತ್ತಿದೆ. ಆ ಪ್ರದೇಶವನ್ನು ಸುಂದರೀಕರಣ, ಮಿನಿ ಗಾರ್ಡನ್‌ ನಿರ್ಮಿಸುವ ಮುಖೇನ ಸ್ವಚ್ಛತೆಗೆ ಗಮನ ನೀಡಲು ಪಾಲಿಕೆ ಮುಂದಾಗಿದೆ.

Advertisement

ಇತ್ತೀಚಿನ ಕೆಲವು ದಿನಗಳಲ್ಲಿ ನಗರದ 11 ಕಡೆಗಳಲ್ಲಿ ಬ್ಲ್ಯಾಕ್‌ಸ್ಪಾಟ್‌ ಸುಂದರೀಕರಣ ಗೊಳಿಸಲಾಗಿದೆ. ಮುಖ್ಯವಾಗಿ ಮಣ್ಣಗುಡ್ಡೆ ವಾರ್ಡ್‌, ಕನಕರಬೆಟ್ಟು, ಅಳಪೆ ಮಾರುಕಟ್ಟೆ ಪ್ರದೇಶದ ತಲಾ ಎರಡು ಕಡೆಗಳಲ್ಲಿ ಜಪ್ಪು, ಡೊಂಗರಕೇರಿ, ಬಾಬುಗುಡ್ಡೆ ಮೆಸ್ಕಾಂ ರಸ್ತೆ, ಅತ್ತಾವರದ ಕೆಎಂಸಿ ಆಸ್ಪತ್ರೆ ಹಿಂಭಾಗ, ರಥಬೀದಿ ಹೂವಿನ ಮಾರುಕಟ್ಟೆಯ ತಲಾ ಒಂದು ಕಡೆಯಲ್ಲಿ ವಿವಿಧ ಪರಿಕಲ್ಪನೆಯ ಮುಖೇನ ಸುತ್ತಲಿನ ಪ್ರದೇಶ ಸುಂದರಗೊಳಿಸಲಾಗಿದೆ.

ಕಸ ರಾಶಿ ಬಿದ್ದು, ಬ್ಲ್ಯಾಕ್‌ಸ್ಪಾಟ್‌ ಆಗಿರುವ ಪ್ರದೇಶವನ್ನು ಸ್ವತ್ಛಗೊಳಿಸಿ ಆ ಜಾಗದಲ್ಲಿ ಸ್ವತ್ಛತೆಯ ಅರಿವು ಮೂಡಿಸುವ ಬ್ಯಾನರ್‌ ಅಳವಡಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಗೋಡೆ ಬರಹದ ಮುಖೇನ ಸ್ವಚ್ಛತೆಯ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನೂ ಕೆಲವೆಡೆ ಮಿನಿ ಪಾರ್ಕ್‌ ನಿರ್ಮಿಸುವ ಮೂಲಕ ನಿರ್ವಹಣೆಗೂ ಒತ್ತು ನೀಡಲಾಗುತ್ತದೆ. ಈ ರೀತಿಯಾಗಿ ನಗರದ ಸ್ವಚ್ಛತೆಯ ಕಡೆ ಗಮನ ನೀಡಲು ಪಾಲಿಕೆ ಮುಂದಾಗಿದೆ.

12 ಕಡೆ ಸೋಲಾರ್‌ ಸಿಸಿ ಕೆಮರಾ

ಬ್ಲ್ಯಾಕ್‌ಸ್ಪಾಟ್‌’ಗಳನ್ನು ನಿಯಂತ್ರಿಸಲು ನಗರದ 12 ಕಡೆಗಳಲ್ಲಿ ಸೋಲಾರ್‌ ಚಾಲಿತ ಸಿಸಿ ಕೆಮರಾ ಅಳವಡಿಸಲಾಗಿದೆ. ಈ ಸಿಸಿ ಕೆಮರಾಕ್ಕೆ ಸೋಲಾರ್‌ ವ್ಯವಸ್ಥೆ ಅಳವಡಿಸಿರುವ ಕಾರಣ ಯಾವುದೇ ರೀತಿಯ ಕೇಬಲ್‌ ಸಂಪರ್ಕ ಅಳವಡಿಸುವ ಆವಶ್ಯಕತೆ ಇರುವುದಿಲ್ಲ. ಇದೇ ಕಾರಣಕ್ಕೆ ಈ ಕೆಮರಾ ಕಂಬವನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸ್ಥಳಾಂತರ ಮಾಡಲೂ ಸಾಧ್ಯವಿದೆ. ಇದೇ ಕಾರಣಕ್ಕೆ ನಗರದಲ್ಲಿ ಯಾವ ಪ್ರದೇಶಕ್ಕೆ ಸಿಸಿ ಕೆಮರಾ ಅಗತ್ಯವಿದೆ ಎಂಬುವುದನ್ನು ತಿಳಿದು ಸ್ಥಳಾಂತರಿಸುವ ಕೆಲಸವೂ ನಡೆಯುತ್ತಿದೆ.

Advertisement

ಆರು ತಿಂಗಳಲ್ಲಿ 65,000 ರೂ. ದಂಡ ವಸೂಲಿ

ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆ ಬದಿಗಳಲ್ಲಿ ಕಸ ಎಸೆದಿರುವುದು ಕಾಣುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಮನಪಾ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ದುಬಾರಿ ದಂಡ ಪ್ರಯೋಗಕ್ಕೆ ಮುಂದಾಗಿದೆ. ಆರು ತಿಂಗಳಿನಲ್ಲಿ ಪಾಲಿಕೆ ವ್ಯಾಪ್ತಿ ಸುಮಾರು 65,000 ರೂ. ದಂಡ ವಸೂಲಿ ಮಾಡಲಾಗಿದೆ. ಒಂದು ವೇಳೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಎಸೆಯುವುದು/ಹಾಕುವುದು ಕಂಡುಬಂದಲ್ಲಿ ಅವರ ಮೇಲೆ 10,000 ರೂ.ದಿಂದ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ‘ಉದಯವಾಣಿ ಸುದಿನ’ ಕ್ಕೆ ತಿಳಿಸಿದ್ದಾರೆ.

ಬ್ಲ್ಯಾಕ್‌ಸ್ಪಾಟ್‌  ನಿರ್ಮೂಲನೆಗೆ ಒತ್ತು

ಬ್ಲ್ಯಾಕ್‌ಸ್ಪಾಟ್‌ ಪ್ರದೇಶ ನಿರ್ಮೂಲನೆ ನಿಟ್ಟಿನಲ್ಲಿ ಪಾಲಿಕೆ ಕ್ರಮಕೈಗೊಂಡಿದ್ದು, ಆ ಪ್ರದೇಶದಲ್ಲಿ ಸುಂದರೀಕರಣಗೊಳಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿದೆ. ರಸ್ತೆ ಬದಿಗಳಲ್ಲಿ ಕಸ ಎಸೆಯದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ನಗರದ 12 ಕಡೆಗಳಲ್ಲಿ ಸೋಲಾರ್‌ ಸಿಸಿ ಕೆಮರಾ ಅಳವಡಿಸಲಾಗಿದ್ದು, ಕಸ ಎಸೆಯುವವರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸಲಾಗುತ್ತಿದೆ. -ಶಬರೀನಾಥ್‌, ಪಾಲಿಕೆ ಪರಿಸರ ಅಭಿಯಂತ

Advertisement

Udayavani is now on Telegram. Click here to join our channel and stay updated with the latest news.

Next