ಬೆಂಗಳೂರು: ಮದ್ಯ ಮತ್ತು ಮಾದಕ ವಸ್ತು ಖರೀದಿಸಲು ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಲ್ಲೇಶ್ವರದ ನಿವಾಸಿಯಾಗಿರುವ 24 ವರ್ಷದ ಮಹಿಳೆ ಕೊಟ್ಟ ದೂರಿನ ಮೇರೆಗೆ ರಾಜಾಜಿನಗರ ನಿವಾಸಿ ನಾಗಸೋಮೇಶ್(27) ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಮಗಳೂರಿನ ಮೂಲದ ಆರೋಪಿ ನಾಗಸೋಮೇಶ್ 2021ರಲ್ಲಿ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದ.
ನಂತರ ಕೆಲ ದಿನಗಳಲ್ಲೇ ಕುಡಿದು ಬಂದು ಪತ್ನಿಗೆ ಕಿರುಕುಳ ಕೊಡಲಾರಂಭಿಸಿದ್ದ. ಕುಡಿಯುವುದರ ಜತೆಗೆ ಡ್ರಗ್ಸ್ ಸೇವನೆ ಹಾಗೂ ಬೇರೆ ಮಹಿಳೆಯರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಸಂಗತಿ ಪತ್ನಿಗೆ ಗೊತ್ತಾಗಿದೆ. ಅದನ್ನು ಪ್ರಶ್ನಿಸಿದಾಗ, ಪತ್ನಿಗೂ ಡ್ರಗ್ಸ್ ಸೇವಿಸುವಂತೆ ಒತ್ತಾಯ ಮಾಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ನಡುವೆ ಡ್ರಗ್ಸ್ ಖರೀದಿಸಲು ಹಣದ ಕೊರತೆ ಉಂಟಾದಾಗ ವರದಕ್ಷಿಣೆ ತರುವಂತೆ ಪತ್ನಿಗೆ ಹಲ್ಲೆ ನಡೆಸಿ ಬೆದರಿಸಿದ್ದ. ಅಲ್ಲದೆ, ಆಕೆ ಜತೆ ಏಕಾಂತದಲ್ಲಿದ್ದಾಗ, ಆಕೆಯ ಗಮನಕ್ಕೆ ಬಾರದೆ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದ. ಅದು ತನ್ನ ಗಮನಕ್ಕೆ ಬರುತ್ತಿದ್ದಂತೆ ಪತಿಯ ಮೊಬೈಲ್ ಕಸಿದುಕೊಂಡು ಪರಿಶೀಲಿಸಿ ಅದರಲ್ಲಿ ಹಲವು ಅಶ್ಲೀಲ ವಿಡಿಯೋಗಳು ಡಿಲೀಟ್ ಮಾಡಿಸಿದ್ದಾಳೆ.
Related Articles
ಇದಾದ ಕೆಲ ದಿನಗಳ ಬಳಿಕ ವರದಕ್ಷಿಣೆ ತರದಿದ್ದರೆ ನಿನ್ನ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಪತಿ ಬೆದರಿಸಿ ಮನೆಯಿಂದ ಹೊರ ಹಾಕಿದ್ದಾನೆ. ಅಲ್ಲದೆ, ಪರಸ್ತ್ರೀ, ವಿದೇಶಿ ಮಹಿಳೆಯರ ಜತೆ ಆತ ಅಶ್ಲೀಲವಾಗಿ ವಿಡಿಯೋ ಚಾಟಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಆತನ ಪೋಷಕರಿಗೆ ಹೇಳಿದರೆ, ಮೊದಲಿನಿಂದಲೂ ಆತ ಅದೇ ರೀತಿ ಇದ್ದಾನೆ. ಅನುಸರಿಸಿಕೊಂಡು ಹೋಗುವಂತೆ ಹೇಳುತ್ತಾರೆ. ಅಲ್ಲದೆ, ಪತಿಯ ವರದಕ್ಷಿಣೆ ಕಿರುಕುಳ ಕೊಡಲು ಅವರು ಪ್ರೋತ್ಸಾಹ ನೀಡಿದ್ದಾರೆ ಎಂದು ಅತ್ತೆ-ಮಾವನ ವಿರುದ್ಧ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.