Advertisement

ಕರಿಮೆಣಸು, ಕಾಫಿಯಿಂದ ಕೈ ತುಂಬಾ ಕಾಸು

04:00 AM Oct 29, 2018 | |

ಒಂದು ಕಾಲದಲ್ಲಿ ಎಸ್ಟೇಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅಮಾನುಲ್ಲಾ-ಕಲೀಂ ಉಲ್ಲಾ ಸೋದರರು, ಆನಂತರ ಕೃಷಿಯ ಗುಟ್ಟುಗಳನ್ನು ಅರ್ಥಮಾಡಿಕೊಂಡರು. ಈಗ, 20 ಎಕರೆ ತೋಟದಲ್ಲಿ ಅಡಿಕೆ, ಕರಿಮೆಣಸು, ಕಾಫಿ  ಬೆಳೆಯುತ್ತಿದ್ದಾರೆ. 15 ಮಂದಿಗೆ ಕೆಲಸ ಕೊಟ್ಟಿದ್ದಾರೆ. ಸಾಂದ್ರ ಕೃಷಿಯಲ್ಲಿ ಹೊಸ ಮಾದರಿಯೊಂದನ್ನು ಹುಟ್ಟು ಹಾಕಿರುವ ಅವರ ಸಾಹಸ ಹಲವರಿಗೆ ಮಾರ್ಗದರ್ಶಿ ಆಗುವಂಥದು…

Advertisement

ಶಿವಮೊಗ್ಗ ಜಿಲ್ಲೆಯ ಸಾಗರದಿಂದ 2 ಕಿ.ಮೀ ದೂರ ವಿರುವ ಮಂಕಲಳೆ ಗ್ರಾಮದ ಅರಳಿಕಟ್ಟೆಯಲ್ಲಿ ನಮ್ಮನ್ನು ಎದುರುಗೊಂಡವರು ಅಮಾನುಲ್ಲಾ. ಅವರ ಇಪ್ಪತ್ತು ಎಕರೆ ತೋಟದ ಒಳಕ್ಕೆ ಹೋದಾಗ, ಈವರೆಗೆ ಎಲ್ಲೂ ಕಾಣದಿದ್ದ ಸಾಂದ್ರ ಕೃಷಿಯ ತೋಟದ ದರ್ಶನವಾಯಿತು. ಅಲ್ಲಿ ಅಡಿಕೆ ಗಿಡಗಳ ಸಾಲುಗಳ ನಡುವೆ ಕಾಫಿ ಗಿಡಗಳನ್ನು ಮತ್ತು ಸಿಲ್ವರ್‌ ಗಿಡಗಳ ಆಧಾರದಲ್ಲಿ ಕರಿಮೆಣಸಿನ ಬಳ್ಳಿಗಳನ್ನು ಬೆಳೆದಿದ್ದಾರೆ . ಮೊದಲ ನೋಟಕ್ಕೇ ಅವರು ವಾಡಿಕೆಯ ವಿಧಾನದ ಬದಲಾಗಿ ತಮ್ಮದೇ ವಿಧಾನ ಆವಿಷ್ಕಾರ ಮಾಡಿರುವುದು ಕಾಣಿಸುತ್ತದೆ. ಅಡಿಕೆ ಸಸಿಗಳನ್ನು 9-9 ಅಡಿ ಅಂತರದಲ್ಲಿ ಬೆಳೆಸುವುದು ವಾಡಿಕೆ.

ಆದರೆ ಅಮಾನುಲ್ಲಾ ಮತ್ತು  ಸೋದರ ಕಲೀಮುಲ್ಲಾ, ಅಡಿಕೆ ಸಸಿಗಳನ್ನು 20 ಅಡಿ ಅಂತರದ ಸಾಲುಗಳಲ್ಲಿ, ಪ್ರತೀ ಸಾಲಿನಲ್ಲಿ ಸಸಿಯಿಂದ ಸಸಿಗೆ 6 ಅಡಿ ಅಂತರದಲ್ಲಿ ಬೆಳೆಸಿದ್ದಾರೆ. ಈ ಅಂತರದಲ್ಲಿ ನೆಟ್ಟಾಗ, ಒಂದು ಎಕರೆಯಲ್ಲಿ ಕೇವಲ 360 ಅಡಿಕೆ ಸಸಿಗಳ ನಾಟಿ ಸಾಧ್ಯ. ಇದುವೇ ಇವರ ತೋಟದ ಮೊದಲನೇ ವಿಶೇಷ. ಹಾಗೆಯೇ, ಕಾಫಿ ಗಿಡಗಳ ನಾಟಿಯಲ್ಲಿಯೂ ತಮ್ಮದೇ ವಿಧಾನ ಅನುಸರಿಸಿದ್ದಾರೆ. ಕಾಫಿ ತೋಟಗಳಲ್ಲಿ, ಅರೇಬಿಕಾ ಕಾಫಿ ಗಿಡಗಳನ್ನು 6-6 ಅಡಿ ಅಂತರದಲ್ಲಿ ನೆಡುವುದು ವಾಡಿಕೆ.

ಈ ಅಂತರದಲ್ಲಿ ನೆಟ್ಟಾಗ ಎಕರೆಗೆ 1,200 ಕಾಫಿ ಗಿಡಗಳ ನಾಟಿ ಸಾಧ್ಯ. ಇವರ ತೋಟದ ಅಡಿಕೆ ಗಿಡಗಳ ಸಾಲುಗಳ ನಡುವಿನ 20 ಅಡಿಗಳ ಅಂತರದಲ್ಲಿ ಜಿಗ್‌-ಜಾಗ್‌ ಮಾದರಿಯಲ್ಲಿ ಎಕರೆಗೆ ಅಷ್ಟೇ ಸಂಖ್ಯೆಯ ಅರೇಬಿಕಾ ಕಾಫಿ ಗಿಡಗಳನ್ನು ನೆಟ್ಟು ಬೆಳೆಸಿರುವುದು ಎರಡನೇ ವಿಶೇಷ. ಇವರ ತೋಟದ ಮತ್ತೂಂದು ವಿಶೇಷ, ಅಡಿಕೆ ಗಿಡಗಳ ಸಾಲುಗಳ ನಡುವಣ ಅಂತರದಲ್ಲಿ ನಟ್ಟನಡುವೆ (ಅಂದರೆ ಅಡಿಕೆ ಸಾಲಿನಿಂದ 10 ಅಡಿಗಳ ಅಂತರದಲ್ಲಿ) ಸಿಲ್ವರ್‌ ಗಿಡಗಳನ್ನು ಬೆಳೆಸಿ, ಅವಕ್ಕೆ ಪಣಿಯೂರು ತಳಿಯ ಕರಿಮೆಣಸಿನ ಬಳ್ಳಿಗಳನ್ನು ಹಬ್ಬಿಸಿರುವುದು.

ಚೆನ್ನಾಗಿ ಗೊಬ್ಬರ ಕೊಟ್ಟು ಬೆಳೆಸಿದ ಸಿಲ್ವರ್‌ ಸಸಿಗಳಿಗೆ ಒಂದು ವರ್ಷ ಆಗುತ್ತಿದ್ದಂತೆಯೇ, ಅವುಗಳ ಬುಡದಲ್ಲಿ ಕರಿಮೆಣಸಿನ ಬಳ್ಳಿಗಳನ್ನು ನೆಟ್ಟು ಬೆಳೆಸಿದ್ದು ಅಲ್ಲಿನ ಮಗದೊಂದು ವಿಶೇಷ. ಈಗ 5ನೇ ವರ್ಷದಲ್ಲಿರುವ ಕರಿಮೆಣಸಿನ ಬಳ್ಳಿಗಳು ಸುಮಾರು 15 ಅಡಿ ಎತ್ತರಕ್ಕೆ ಸೊಂಪಾಗಿ ಬೆಳೆದು, ಸಮೃದ್ಧವಾಗಿ ಕಾಯಿಕಡ್ಡಿಗಳನ್ನು ಬಿಟ್ಟಿರುವುದನ್ನು ನೋಡಿಯೇ ನಂಬಬೇಕು. ಇವರು ಮೊದಲು ಅಡಿಕೆ ಸಸಿಗಳನ್ನು ನೆಟ್ಟದ್ದು 10 ಎಕರೆಯಲ್ಲಿ.  ಆ ಸಸಿಗಳಿಗೆ ಈಗ ಏಳು ವರ್ಷಗಳು ತುಂಬಿದೆ.  ಅದಾಗಿ ಎರಡು ವರ್ಷಗಳ ನಂತರ, ಇನ್ನೂ 10 ಎಕರೆಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ತೋಟ ಎಬ್ಬಿಸಿದ್ದಾರೆ.

Advertisement

ಮೊದಲನೆಯ ತೋಟದಲ್ಲಿ ಕಳೆದ ಮೂರು ವರ್ಷಗಳಿಂದ ಇಳುವರಿ ಸಿಗುತ್ತದೆ. ಮೊದಲ ವರುಷ ದೊರಕಿದ್ದು ಇಳುವರಿ ಕಡಿಮೆ. ಈ ವರ್ಷ 562 ಕ್ವಿಂಟಾಲ್ ಹಸಿ ಅಡಿಕೆ ಕೊಯ್ಲು; ಅದರಿಂದ ಸಿಕ್ಕಿದ ಸುಲಿದ ಅಡಿಕೆಯ ತೂಕ 60 ಕ್ವಿಂಟಾಲ್. ಕರಿಮೆಣಸಿನ ಬಳ್ಳಿಗಳಿಂದ  ಸಿಕ್ಕಿದ ಫ‌ಸಲಿನ ಬಗ್ಗೆ ಅಮಾನುಲ್ಲಾ ನೀಡಿದ ಮಾಹಿತಿ: ಮೊದಲ ವರ್ಷ 50 ಕಿ.ಗ್ರಾಂ, ಎರಡನೇ ವರ್ಷ 30 ಕ್ವಿಂಟಾಲ್, ಇದೀಗ 2018ರಲ್ಲಿ 150 ಕ್ವಿಂಟಾಲ್.  ನಾಲ್ಕು ವರ್ಷಗಳ ಅರೇಬಿಕಾ ಕಾಫಿ ಗಿಡಗಳು 2016ರಿಂದ ಫ‌ಸಲು ನೀಡುತ್ತಿವೆ.

ಈ ವರ್ಷ ಪ್ರತಿಯೊಂದು ಗಿಡದಿಂದ ಪಡೆದಿರುವ ಸರಾಸರಿ ಇಳುವರಿ ಎರಡು ಕಿ.ಗ್ರಾಂ. ಸಿದ್ಧ ಮಾದರಿಗಳನ್ನು ಬದಿಗಿಟ್ಟು, ತಮ್ಮದೇ ಹೊಸ ವಿಧಾನದಲ್ಲಿ ಮೂರು ಬಹುವಾರ್ಷಿಕ ಬೆಳೆಗಳನ್ನು ಸಾಂದ್ರವಾಗಿ 20 ಎಕರೆ ತೋಟದಲ್ಲಿ ಬೆಳೆಸುತ್ತಿರುವುದು ಅಮಾನುಲ್ಲಾ – ಕಲೀಮುಲ್ಲಾ ಸೋದರರ ಸಾಧನೆ. ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಕೇಳಿದಾಗ, ಈ ಸಾಧನೆಯ ಹಿಂದಿನ ಅನುಭವಗಳನ್ನು ಹಂಚಿಕೊಂಡರು. 1964ರಿಂದ 1978ರವರೆಗೆ ಚಿಕ್ಕಮಗಳೂರಿನ ಬಸರಿಕಟ್ಟೆಯ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದೆವು. ಅಲ್ಲಿ ಕಾಫಿ ಮತ್ತು ಪೆಪ್ಪರ್‌ ಕೃಷಿಯ ಅನುಭವ ಚೆನ್ನಾಗಿ ಆಯಿತು.

ಎಸ್ಟೇಟುಗಳಲ್ಲಿ ನೆರಳಿಗಾಗಿ ಬೆಳೆಸುವ ಸಿಲ್ವರ್‌ ಮರಗಳು ವೇಗವಾಗಿ ಬೆಳೆಯೋದನ್ನು  ನೋಡಿದ್ದೆ. ಅಡಿಕೆ ಗಿಡಗಳಿಗೆ ಪೆಪ್ಪರ್‌ ಬಳ್ಳಿ ಹಬ್ಬಿಸಿದಾಗ, ಅವಕ್ಕೆ ರೋಗ ಬರೋದನ್ನು ಗಮನಿಸಿದ್ದೆ. ಹಾಗಾಗಿ, ನಮ್ಮ ತೋಟದಲ್ಲಿ ಅಡಿಕೆ ಗಿಡಗಳ ಬದಲಾಗಿ ಸಿಲ್ವರ್‌ ಗಿಡಗಳಿಗೆ ಪೆಪ್ಪರ್‌ ಬಳ್ಳಿ ಹಬ್ಬಿಸುವ ನಿರ್ಧಾರ ಮಾಡಿದೆ ಎಂದು ವಿವರಿಸಿದರು. ಎಸ್ಟೇಟಿನ ಕೆಲಸ ತೊರೆದ ನಂತರ ಶಿವಮೊಗ್ಗ ಜಿಲ್ಲೆಯ ಹಲವೆಡೆ ಲೀಸಿಗೆ ಜಮೀನು ಪಡೆದು ಅನಾನಸ್‌ ಮತ್ತು ಶುಂಠಿ ಕೃಷಿ ಮಾಡಿದರು ಈ ಸೋದರರು. ಹಾಗೆಯೇ, ಅನಾನಸ್‌ ಕೃಷಿ ಮಾಡುವಾಗ, ರೌಫ್ ಸಾಹೇಬರ ಮಾರ್ಗದರ್ಶನ ಪಡೆದದ್ದನ್ನು ನೆನಪು ಮಾಡಿಕೊಂಡರು.

ಕೃಷಿಯಿಂದ ಗಳಿಸಿದ ಹಣದಿಂದಲೇ 2004ರಲ್ಲಿ ಈ ಜಮೀನು ಖರೀದಿಸಿ, ಇಲ್ಲಿ ಎರಡು ಸಲ ಅನಾನಸ್‌ ಬೆಳೆಸಿ, ಅನಂತರ ಸಾಂದ್ರ ಕೃಷಿಯ ತೋಟವನ್ನು ಅಭಿವೃದ್ಧಿಪಡಿಸಿದ್ದಾರೆ. ತಮ್ಮ ತೋಟದ ಬೆಳೆಗಳಿಗೆ ಸಮೃದ್ಧ ಗೊಬ್ಬರ ನೀಡುತ್ತಾರೆ ಅಮಾನುಲ್ಲಾ. 200 ಲೀಟರ್‌ ನೀರಿನಲ್ಲಿ ಐದು ಕಿ.ಗ್ರಾಂ ರಾಸಾಯನಿಕ ಗೊಬ್ಬರ (2 ಕಿ.ಗ್ರಾಂ. ಡಿಎಪಿ, 1.5 ಕಿಗ್ರಾ ಯೂರಿಯಾ ಮತ್ತು 1.5 ಕಿ.ಗ್ರಾಂ ಮ್ಯುರೇಟ್‌ ಆಫ್ ಪೊಟ್ಯಾಷ್‌) ಕರಗಿಸಿ ದ್ರಾವಣ ತಯಾರಿಸುತ್ತಾರೆ. ಈ ದ್ರಾವಣವನ್ನು ಕರಿಮೆಣಸಿನ ಬಳ್ಳಿಗಳಿಗೆ ವಯಸ್ಸಿಗೆ ಅನುಗುಣವಾಗಿ ಹೆಚ್ಚೆಚ್ಚು ನೀಡುತ್ತಾರೆ:

ಅಂದರೆ, ಒಂದು ವರ್ಷದ ಬಳ್ಳಿಗೆ ಒಂದು ಲೀಟರ್‌, ಅನಂತರ ಪ್ರತಿಯೊಂದು ವರ್ಷದ ಬೆಳವಣಿಗೆಗೆ ಹೆಚ್ಚುವರಿ ಒಂದು ಲೀಟರ್‌ ದ್ರಾವಣ ಸುರಿದಿದ್ದಾರೆ. ಅಡಿಕೆ ಮತ್ತು ಕಾಫಿ ಗಿಡಗಳಿಗೂ ಹೀಗೆ ದ್ರಾವಣದ ರೂಪದಲ್ಲಿ ರಾಸಾಯನಿಕ ಗೊಬ್ಬರ ಒದಗಿಸಲಾಗುತ್ತದೆ. ಅಡಿಕೆ ಗಿಡಗಳಿಗೆ ತಲಾ ಅರ್ಧ ಕಿ.ಗ್ರಾಂ ರಾಸಾಯನಿಕ ಗೊಬ್ಬರ ವರುಷಕ್ಕೆ ಎರಡು ಸಲ ನೀಡಿಕೆ. ಇದಲ್ಲದೆ, ತೋಟಕ್ಕೆ ಹಟ್ಟಿಗೊಬ್ಬರ ಹಾಕುತ್ತಾರೆ – ಎಕರೆಗೆ 10 ಕ್ವಿಂಟಾಲ್ ಪ್ರಮಾಣದಲ್ಲಿ. ತಾನು ಹಸುಗಳನ್ನು ಸಾಕಿರುವುದೇ ಹಟ್ಟಿಗೊಬ್ಬರಕ್ಕಾಗಿ ಎನ್ನುವ ಅಮಾನುಲ್ಲಾ,

ಅವುಗಳ ಸೆಗಣಿಯಿಂದ ತಯಾರಿಸುವ ಗೊಬ್ಬರ ಸಾಕಾಗದಿದ್ದರೆ, ಹಟ್ಟಿಗೊಬ್ಬರ ಖರೀದಿಸಿ ತೋಟಕ್ಕೆ ಹಾಕುತ್ತೇನೆಂದು ತಿಳಿಸಿದರು. ಅಮಾನುಲ್ಲಾರ ತೋಟದ ಇನ್ನೊಂದು ಗಮನಾರ್ಹ ಅಂಶ ನೀರಿನ ನಿರ್ವಹಣೆ. ಅವರ ಜಮೀನಿನಲ್ಲಿರುವ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದೆ. ಎರಡು ಕೊಳವೆ ಬಾವಿಗಳ ನೀರನ್ನು ದೊಡ್ಡ ಟ್ಯಾಂಕಿಯಲ್ಲಿ ಸಂಗ್ರಹಿಸಿ, ಅದರಿಂದ ಹನಿ ನೀರಾವರಿ  ಮೂಲಕ ಗಿಡಗಳಿಗೆ ನೀರಿನ ಹಾಯಿಸಲಾಗುತ್ತದೆ. ಅಡಿಕೆ, ಕರಿಮೆಣಸು ಮತ್ತು ಕಾಫಿ ಗಿಡಗಳಿಗೆ ಎಷ್ಟು ಬೇಕೋ ಅಷ್ಟೇ ನೀರು ಒದಗಿಸಿ, ಗರಿಷ್ಠ ಇಳುವರಿ ಪಡೆಯುತ್ತಿದ್ದಾರೆ. 

ಅವರ ತೋಟದಲ್ಲಿ ಮೂರು ಬಹುವಾರ್ಷಿಕ ಬೆಳೆಗಳಿರುವ ಕಾರಣ, ಪ್ರತಿ ದಿನ 15 ಕೆಲಸಗಾರರಿಗೆ ಕೆಲಸವಿದೆ. ಹೀಗೆ ವರ್ಷ ವಿಡೀ ಕೆಲಸವಿದ್ದರೆ ತೋಟದ ಕೆಲಸಕ್ಕೆ ಆಳುಗಳು ಸಿಗುತ್ತಾರೆ ಎಂಬುದು ಅವರ ಅನುಭವ. ಕೆಲಸಗಾರರಿಗೆ ವಾಸಕ್ಕೆ ಜಮೀನಿನಲ್ಲಿ ಕೋಣೆಗಳನ್ನು ನೀಡಿದ್ದಾರೆ. ಮುಂದೊಮ್ಮೆ ಕೆಲಸದಾಳುಗಳು ಸಿಗದಿದ್ದರೆ, ಪ್ರತಿಯೊಂದು ಅಂತರದಲ್ಲಿ ಒಂದು ಸಾಲು ಕಾಫಿ ಗಿಡಗಳನ್ನು ಕಿತ್ತು, ಅಲ್ಲಿ ಯಂತ್ರಗಳನ್ನು ಓಡಾಡಿಸಿ, ತೋಟದ ಕೆಲಸಕಾರ್ಯ ಮುಂದುವರಿಸುವ ವಿಶ್ವಾಸ ಅವರಿಗಿದೆ. ತಮ್ಮದೇ ಅನುಭವದ ಬಲದಿಂದ, ಸಾಂದ್ರ ಕೃಷಿಯಲ್ಲಿ ಹೊಸ ಮಾದರಿಯೊಂದನ್ನು ರೂಪಿಸಿ, ಅದು ಕಾರ್ಯಸಾಧ್ಯವೆಂದು ಸಾಧಿಸಿ ತೋರಿಸಿರುವುದು ಅಮಾನುಲ್ಲಾ – ಕಲೀಮುಲ್ಲಾ ಸೋದರರ ಹೆಗ್ಗಳಿಕೆ. (ಮಾಹಿತಿಗೆ- 9448977097) 

* ಅಡ್ಡೂರು ಕೃಷ್ಣರಾವ್

Advertisement

Udayavani is now on Telegram. Click here to join our channel and stay updated with the latest news.

Next