ಮಡಿಕೇರಿ: ಮಾಲ್ದಾರೆ ಬಾಡಗ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಕರಿಮೆಣಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಸಹಕಾರ ಇಲಾಖೆಯ ಮೂಲಕ ತನಿಖೆ ಪ್ರಗತಿಯಲ್ಲಿದ್ದು, ಕಾವೇರಿ ಸೇನೆಯು ಸಂಘದ ವಿರುದ್ಧ ಮಾಡುತ್ತಿರುವ ಆರೋಪ ಖಂಡನೀಯವೆಂದು ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಇತಿಹಾಸದಲ್ಲೇ ಸಹಕಾರ ಸಂಘವೊಂದರಲ್ಲಿ ನಡೆದಿರುವ ದುರುಪಯೋಗ ಪ್ರಕರಣವನ್ನು ಡಿಸಿಐಬಿಗೆ ಒಪ್ಪಿಸಲಾಗಿದೆ. ಆದ್ದರಿಂದ ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ಸಹಕಾರ ಕಾಯ್ದೆಯ ಬಗ್ಗೆ ಅರಿವಿಲ್ಲದ ಕಾವೇರಿಸೇನೆಯ ಕೆಲ ವರು ತೇಜೋವಧೆಗಾಗಿ ಹೇಳಿಕೆ ನೀಡಿದ್ದಾರೆ. ಸಂಘ ತನ್ನ ಜವಾಬ್ದಾರಿ ಯನ್ನು ಅರಿತು ಈಗಾಗಲೆ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ತನಿಖೆೆ ಅಂತಿಮ ಹಂತದಲ್ಲಿದೆ. ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಲಿದೆ ಎಂದರು.
ಬ್ಲಾಕ್ ಮೇಲ್ ತಂತ್ರಗಳಿಗೆ ಸಂಘ ಬಗ್ಗುವುದಿಲ್ಲವೆಂದ ಅವರು, ನೈಜ ಚಿತ್ರಣ ಶೀಘ್ರ ಹೊರ ಬರಲಿದೆ ಎಂದರು. ತಪ್ಪಿತಸ್ಥರನ್ನು ಒಂದು ಹಂತದಲ್ಲಿ ಅಮಾಯಕರೆಂದು ಗುರುತಿಸಿದವರು ಇದೀಗ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ಜಾಮೀನಿನ ಮೇಲೆ ಬಿಡಿಸುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ ಎಂದು ನಂದಾ ಸುಬ್ಬಯ್ಯ ಆರೋಪಿಸಿದರು.
ಸಂಘದ ಜೀವಾಳವಾಗಿರುವ ಕರಿಮೆಣಸು ದಾಸ್ತಾನು ಸುಮಾರು 6ರಿಂದ 7 ಸಾವಿರ ಚೀಲಗಳಿರುತ್ತದೆ. ಇದರ ಲೆಕ್ಕಾಚಾರದ ಬಗ್ಗೆ ಒಂದೆರಡು ದಿನಗಳಲ್ಲಿ ಸ್ಪಷ್ಟತೆ ತಿಳಿಯಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಗೊಬ್ಬರ ದಾಸ್ತಾನಿನಲ್ಲು ಕೊರತೆ ಉಂಟಾಗಿದೆಯೆಂದು ಒಪ್ಪಿಕೊಂಡ ನಂದಾ ಸುಬ್ಬಯ್ಯ, ಸುಮಾರು 4 ಲಕ್ಷ ರೂ. ಮೌಲ್ಯದ ಗೊಬ್ಬರ ದುರುಪಯೋಗವಾಗಿದ್ದು, ಈ ಬಗ್ಗೆ ಸಹಕಾರ ಇಲಾಖೆಯಿಂದ ತನಿಖೆೆ ನಡೆಯುತ್ತಿದೆ ಎಂದರು. ದಾಸ್ತಾನು ಪ್ರಕ್ರಿಯೆಯಲ್ಲಿ ಎಲ್ಲೂ ಕಾನೂನು ಮೀರಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಬಿ.ಡಿ. ರಾಮಕೃಷ್ಣ, ನಿರ್ದೇಶಕರಾದ ಸಿ.ಎ. ಹಂಸ, ಮೊಟ್ಟನ ರಾಮಪ್ಪ, ಎಂ.ಎ. ನಂಜಪ್ಪ ಹಾಗೂ ಪ್ರಮೀಳಾ ನಾಚಪ್ಪ ಉಪಸ್ಥಿತರಿದ್ದರು.