ಕಪ್ಪು ಶಿಲೀಂಧ್ರವು ನಮ್ಮ ಸುತ್ತಮುತ್ತಲಿನ ವಾತಾವರಣಗಳಲ್ಲಿ, ಕೆಲವೊಮ್ಮೆ ನಮ್ಮೆಲ್ಲರ ಮೈ ಮೇಲೆಯೂ ಇರುತ್ತದೆ. ಆದರೆ ಯಾರಿಗೆ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಕಾಯಿಲೆ ಬಂದು ಬಹಳ ದಿನಗಳು ಆಸ್ಪತ್ರೆಯಲ್ಲಿ (ಸ್ಟಿರಾಯ್ಡ) ಚಿಕಿತ್ಸೆ ಪಡೆದಿರುತ್ತಾರೆಯೋ ಅವರಿಗೆ ಮಾತ್ರ ತಗಲುತ್ತದೆ. ಆರೋಗ್ಯ ವಂತರಿಗೆ ಶೇ 100ಕ್ಕೆ 100ರಷ್ಟು ತಗಲುವುದಿಲ್ಲ. ಹೀಗಾಗಿಯೇ ಕಪ್ಪು ಶಿಲೀಂಧ್ರವನ್ನು ಒಂದು ಅವಕಾಶವಾದಿ ಶಿಲೀಂಧ್ರ ಎಂದು ಕರೆಯಲಾಗುತ್ತದೆ.
ಕೊರೊನಾ ಪೂರ್ವದಲ್ಲಿ ಎಚ್‌ಐವಿಯಿಂದ ಬಳಲುತ್ತಿರುವವರು, ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಸೇರಿದಂತೆ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಕಾಯಿಲೆಗೊಳಗಾದವರಲ್ಲಿ ಈ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಸಾಮಾನ್ಯ ಸಂದರ್ಭದಲ್ಲಿ ಒಂದು ವರ್ಷಕ್ಕೆ ಬೆಳೆಣಿಕೆಯಷ್ಟು ಪ್ರಕರಣಗಳು ನಮ್ಮ ಆಸ್ಪತೆಯಲ್ಲಿ ವರದಿಯಾಗುತ್ತಿದ್ದವು. ಕೊರೊನಾ ಕೂಡಾ ರೋಗನಿರೋಧಕ ಶಕ್ತಿ ಕುಗ್ಗಿಸುವ ಕಾಯಿಲೆ ಆಗಿದೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾದಂತೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಳವಾಗಿವೆ.
ಕೊರೊನಾ ಸೋಂಕಿನಿಂದ ತೀವ್ರ ಹಾನಿ ಯಾಗಿ ದೀರ್ಘಕಾಲದ ಐಸಿಯು ಚಿಕಿತ್ಸೆ ಪಡೆ ದವರು, ಚಿಕಿತ್ಸೆ ವೇಳೆ ಸ್ಟಿರಾಯ್ಡ ಪಡೆದವರು, ಅನಿಯಂತ್ರಿತ ಮಧುಮೇಹ ಉಳ್ಳವರಿಗೆ ಸಾಮಾನ್ಯ ಸೋಂಕಿತರಿಗಿಂತ ರೋಗನಿರೋಧಕ ಶಕ್ತಿ ತೀರಾ ಕಡಿಮೆ ಇರುತ್ತದೆ. ಅಂತಹವರ ದೇಹವನ್ನು ಬ್ಲ್ಯಾಕ್ ಫಂಗಸ್ ಸೇರಿರುತ್ತಿದೆ.
ಈ ಶಿಲೀಂಧ್ರ ಮೂಗಿನ ಮೂಲಕ ದೇಹ ಸೇರುತ್ತದೆ. ಅನಂತರ ತಲೆಯ ಭಾಗಕ್ಕೆ ಹೋಗಿ ಮೆದುಳನ್ನು ಸೇರಿ ಜೀವಕ್ಕೆ ಅಪಾಯವನ್ನು ತರುತ್ತದೆ. ಆರಂಭದಲ್ಲಿ ಮೂಗನ್ನು ಸೇರಿದಾಗ ಮೂಗಿನಲ್ಲಿ ಕಪ್ಪು ದ್ರವ, ರಕ್ತ ಬರುತ್ತದೆ. ಅನಂತರ ತಲೆಯ ಭಾಗಕ್ಕೆ ಹೋದರೆ ದವಡೆ ನೋವು, ಹಲ್ಲುಗಳು ಸಡಿಲವಾಗುತ್ತದೆ. ಕಣ್ಣಿಗೆ ಹೋದರೆ ಕಣ್ಣಿನ ಪಕ್ಕದಲ್ಲಿ ಕಪ್ಪು ಕಲೆ, ಕಣ್ಣಿಗೆ ಹಾನಿ ಯಾಗುತ್ತದೆ. ಕೊನೆಯದಾಗಿ ಮೆದುಳಿಗೆ ತಲು ಪಿದಾಗ ಸೋಂಕಿತ ಸಾವಿಗೀಡಾಗುತ್ತಾನೆ. ಹೀ ಗಾಗಿ, ಕೊರೊನಾ ಸೋಂಕಿತರು ಮತ್ತು ಗುಣ ಮುಖರಲ್ಲಿ ಶಿಲೀಂಧ್ರ ಲಕ್ಷಣ ಕಂಡು ಬಂದರೆ ಶೀಘ್ರದಲ್ಲಿಯೇ ಕಣ್ಣಿನ ಅಥವಾ ಕಿವಿ ಮೂಗು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.
ಮುಂಜಾಗ್ರತೆ ಏನು?: ಕೊರೊನಾ ಸೋಂಕಿತರು ಮತ್ತು ಅವರಿಗೆ ಚಿಕಿತ್ಸೆ ನೀಡುವವರು ಮಧುಮೇಹವನ್ನು ನಿಯಂತ್ರಣದಲ್ಲಿಡ ಬೇಕು. ಗುಣಮುಖವಾದ ಬಳಿಕ ಅನಗತ್ಯ ಓಡಾಟ ಮಾಡಬಾರದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಅಗತ್ಯವಿದ್ದಲ್ಲಿ ಸೀಮಿತ ಸ್ಟಿರಾಯ್ಡ ಬಳಸಬೇಕು. ಮನೆ ಆರೈಕೆಯಲ್ಲಿರುವವರು ಸ್ಟಿರಾಯ್ಡ ಬಳಸಬಾರದು.
ಚಿಕಿತ್ಸೆ ಏನು?: ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಆಂಪೊಟೆರಿಸಿನ್ ಬಿ ಎಂಬ ಔಷಧ ನೀಡಲಾಗುತ್ತದೆ. ಒಬ್ಬ ರೋಗಿಗೆ 40-60 ಸೀಸೆಗಳು ಬೇಕಾಗುತ್ತವೆ. ದೀರ್ಘಕಾಲದ ಚಿಕಿತ್ಸೆಯಾಗಿದ್ದು, ಲಕ್ಷಣಗಳು ಕಾಣಿಸಿಕೊಂಡ ತತ್‌ಕ್ಷಣ ಬಂದರೇ ಶೀಘ್ರ ಗುಣಮುಖರಾಗುತ್ತಾರೆ.
ಕೊರೊನಾ ಸೋಂಕಿನಂತೆ ಹರಡುವುದಿಲ್ಲ: ಇದು ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ ಎಂಬ ಗಾಬರಿ ಬೇಡ. ಫಂಗಸ್ ಸೋಂಕಿತ ವ್ಯಕ್ತಿ ಯಿಂದ ಆರೋಗ್ಯವಂತರಿಗೆ ಹರಡುವುದಿಲ್ಲ.
– ಡಾ| ಭುಜಂಗ ಶೆಟ್ಟಿ, ಖ್ಯಾತ ನೇತ್ರ ತಜ್ಞರು