ಮೈಸೂರು: ಒಂದು ಕಾಲದಲ್ಲಿ ಚಂಪಾ ಅವರ ಗೆಳೆಯರೇ ಆಗಿ,”ಸಂಕ್ರಮಣ’ ಪತ್ರಿಕೆಯ ಸ್ಥಾಪನೆಯ ಕಾರಣೀಕರ್ತರಲ್ಲಿ ಒಬ್ಬರಾಗಿದ್ದ ವಿಮರ್ಶಕ ಗಿರಡ್ಡಿ ಗೋವಿಂದರಾಜು ಅವರು ಚಂಪಾ ಅವರ ಸಮ್ಮೇಳನ ಅಧ್ಯಕ್ಷ ಭಾಷಣಕ್ಕೆ ತೀವ್ರ ಆಕ್ಷೇಪ ಎತ್ತಿದ್ದಾರೆ.
ಚಂಪಾ ಅವರ ಅಧ್ಯಕ್ಷೀಯ ಮಾತುಗಳು ರಾಜಕೀಯ ಕಮಟಿನಿಂದ ಕೂಡಿವೆ. ಒಂದು ಪಕ್ಷದ ಪರವಾಗಿ ನಿಂತಿದ್ದು ಸಮ್ಮೇಳನದ ದೊಡ್ಡ ದುರಂತ. ವೈಯಕ್ತಿಕವಾಗಿ ನಾವು ಯಾವುದೇ ಪಕ್ಷದ ಪರ ಇದ್ದಿರಬಹುದು. ಆದರೆ, ಸಮ್ಮೇಳನದಲ್ಲಿ ಅದನ್ನು ಬಿಂಬಿಸಬಾರದು.
ಮೈಸೂರು ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಬಂದಿದ್ದರಲ್ಲಿ ಬಹುಪಾಲು ರಾಜಕಾರಣಿಗಳೇ. ಸರ್ಕಾರವೇ 8 ಕೋಟಿ ರೂ.ಕೊಟ್ಟಿದೆ. ಆ ಋಣಕ್ಕೆ ತಕ್ಕುನಾಗಿ ಇವರು ಸಮ್ಮೇಳನ ರೂಪಿಸಿದ್ದಾರೆ. ಬೇರೆ ಕಡೆಯಿಂದ ಎಲ್ಲೂ ಹಣವನ್ನು ಸಂಗ್ರಹಿಸಿಯೇ ಇಲ್ಲ. ಹೀಗಾಗಿ, ಇದು ಸರ್ಕಾರಿ ಪ್ರಾಯೋಜಿತ ಸಮ್ಮೇಳನ ಎಂದು ‘ಉದಯವಾಣಿ’ಗೆ ಹೇಳಿದರು.
ರಾಜಕೀಯ ಭಾಷಣ ವಿಪರ್ಯಾಸ: ಹೆಸರಾಂತ ಸಾಹಿತಿಗಳು ಯಾರೂ ಸಮ್ಮೇಳನಕ್ಕೆ ಹೋಗುತ್ತಿಲ್ಲ. ಅಲ್ಲಿಗೆ ಹೋಗಿ ಉಳಿಯುವುದು, ಆ ಖರ್ಚು ಅನೇಕರಿಗೆ ಹೊರೆಯೂ ಆಗಿರಬಹುದು. ಹಾಗಾಗಿ, ಕರೆದವರಷ್ಟೇ ಅಲ್ಲಿಗೆ ಹೋಗುತ್ತಿದ್ದಾರೆ. ಇದೆಲ್ಲದರ ನಡುವೆ ಚಂಪಾರಂಥವರು ಹೀಗೆ ಮಾತಾಡುವಾಗ, ಸಮ್ಮೇಳನದ ಬಗ್ಗೆ ಅಭಿಪ್ರಾಯವೇ ಬೇರೆಯಾಗುತ್ತದೆ.
ಚಂಪಾ ಅವರಿಂದ ಇವನ್ನೆಲ್ಲ ನಿರೀಕ್ಷೆ ಮಾಡಬಹುದು ಎಂದು ನಗುತ್ತಾರೆ ಗಿರಡ್ಡಿಯವರು. ಈ ಹಿಂದೆ ಯಾರೂ ಹೀಗೆ ರಾಜಕೀಯ ಭಾಷಣ ಮಾಡಿರಲಿಲ್ಲ. ಇದು ಐತಿಹಾಸಿಕ ಸಮ್ಮೇಳನಕ್ಕೆ ಕಪ್ಪು ಚುಕ್ಕೆ. ಸರ್ಕಾರ ಕನ್ನಡದ ಪರ ನಿಲುವು ತೆಗೆದುಕೊಳ್ಳದೇ ಇದ್ದರೆ ಅದನ್ನು ಅನೇಕರು ಟೀಕಿಸಿದ್ದಾರೆ. ಆದರೆ, ರಾಜಕೀಯವನ್ನೇ ಉಸಿರು ಮಾಡಿಕೊಂಡಂತೆ ಅಧ್ಯಕ್ಷೀಯ ಭಾಷಣ ಮಾಡಿದ್ದು ವಿಪರ್ಯಾಸ.
ರಾಜಕೀಯ ನಿಲುವು ತೆಗೆದುಕೊಂಡು,ಅದರ ಬಗ್ಗೆಯೇ ಪ್ರಸ್ತಾಪಿಸಿದ್ದು ಇದೇ ಮೊದಲು ಎನ್ನುತ್ತಾರೆ ಅವರು. ಕಳೆದ ಏಳೆಂಟು ಸಮ್ಮೇಳನಗಳು ಬಂಡಾಯಗಾರರ ಸಮ್ಮೇಳನವೇ ಆಗಿವೆ. ಬರೀ ಎಡಪಂಥೀಯ ಗೋಷ್ಠಿಗಳೇ ಅಲ್ಲಿ ತುಂಬಿಕೊಂಡಿವೆ. ರಾಯಚೂರಿನದ್ದು ಸಂಪೂರ್ಣ ಬಂಡಾಯ ಸಮ್ಮೇಳನ, ಇದು ಕೂಡ ಪರಿಪೂರ್ಣ ಬಂಡಾಯ ಸಮ್ಮೇಳನವೇ ಎಂದು ಬೇಸರ ವ್ಯಕ್ತಪಡಿಸಿದರು.