Advertisement

ಜಗತ್ತಿಗೆ ಯೋಗ ಕಲಿಸಿದ ಬಿಕೆಎಸ್‌ ಅಯ್ಯಂಗಾರ್‌

06:30 PM Jun 21, 2022 | Team Udayavani |

ಕೋಲಾರ: ಭಾರತ ಸೇರಿದಂತೆ ವಿಶ್ವದ 56 ರಾಷ್ಟ್ರಗಳಲ್ಲಿ 77 ವರ್ಷಗಳ ಕಾಲ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಯೋಗ ಶಿಕ್ಷಣವನ್ನು ಜನಪ್ರಿಯಗೊಳಿಸುವ ಮೂಲಕ ಜಗತ್ತಿಗೆ ಚಿರಪರಿಚಿತರಾಗಿದ್ದ ಬಿಕೆಎಸ್‌ ಅಯ್ಯಂಗಾರ್‌ ಅವರ ತವರು ಜಿಲ್ಲೆ ಕೋಲಾರ ಎಂದು ಹೇಳಿ ಕೊಳ್ಳಲು ಹೆಮ್ಮೆ ಎನಿಸುತ್ತದೆ. ಬಿಕೆಎಸ್‌ ಅಯ್ಯಂಗಾರ್‌ ರ ತವರು ಕೋಲಾರ ಜಿಲ್ಲೆಯ ನರಸಾಪುರ ಸಮೀಪದ ಬೆಳ್ಳೂರು.

Advertisement

1937ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ 600 ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಪ್ರಾರಂಭಿಸಿ ಆನಂತರ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗದ ಮೂಲಕ ಖ್ಯಾತಿ ಗಳಿಸಿದ್ದು, ಲಕ್ಷಾಂತರ ಮಂದಿ ಶಿಷ್ಯಕೋಟಿಯನ್ನು ಹೊಂದಿದ್ದರು. ಯೋಗಾಚಾರ್ಯರೆಂದೇ ಖ್ಯಾತರಾಗಿ  ಪದ್ಮಭೂಷಣ, ಪದ್ಮವಿಭೂಷಣ, ನಾಡೋಜ ಪ್ರಶಸ್ತಿ ಪಡೆದುಕೊಂಡಿದ್ದ ಬಿಕೆಎಸ್‌ ಅಯ್ಯಂಗಾರ್‌  ಅವರು ವಿಶ್ವದ 56 ರಾಷ್ಟ್ರಗಳಲ್ಲಿ ಯೋಗ ತರಬೇತಿ ಶಾಖೆಗಳನ್ನು ಆರಂಭಿಸಿ ಅಪಾರ ಶಿಷ್ಯವರ್ಗವನ್ನು ಹೊಂದುವ ಮೂಲಕ ಯೋಗವನ್ನು ವಿಶ್ವಮಟ್ಟದ ಖ್ಯಾತಿ ತಂದುಕೊಟ್ಟರು.

ವಜ್ರದೇಹಿಯಾದ ಬಗೆ: ಟೈಪೈಡ್‌ ಮತ್ತು ಮಲೇರಿಯಾದಿಂದ ಬಳಲಿ ಬೆಂಡಾಗಿದ್ದ ಬಾಲ್ಯದ ಅವರ ದಿನಗಳು ಸಂಕಷ್ಟದಲ್ಲಿತ್ತು. ನಂತರ ಬಾಲಕ ಅಯ್ಯಂಗಾರರು, ಮೈಸೂರು ಅರಸರಿಗೆ ಯೋಗ ಕಲಿಸುತ್ತಿದ್ದ ತಮ್ಮ ಬಾವ ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ಛಲದಿಂದ ಯೋಗ ಸಾಧನೆ ಮಾಡಿ ದೇಹ ದಂಡಿಸುವ ಯೋಗ ಕೌಶಲ್ಯದಲ್ಲಿ ವಿಶ್ವಗುರುವಾದರು.

ಯೋಗದಿಂದಾಗಿ ಅನೇಕರು ನಕಾರಾತ್ಮಕ ಚಿಂತನೆಯಿಂದ ಸಕಾರಾತ್ಮಕ ಚಿಂತನೆಯತ್ತ ಬಂದಿದ್ದಾರೆ, ಆತ್ಮಹತ್ಯೆಯತ್ತ ಸಾಗಿದ್ದವರು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದಕ್ಕೆ ಯೋಗವನ್ನು ಪರಿಚಯಿಸಿದ ಯೋಗ ಗುರು ಬಿಕೆಎಸ್‌ ಅವರ ಜೀವನವೇ ಪ್ರೇರಣೆ. ಬಿಕೆಎಸ್‌ ಅಯ್ಯಂಗಾರರು, ಆಚಾರ್ಯ ವಿನೋಬಾಭಾವೆ, ಪ್ರಥಮ ಪ್ರಧಾನಿ ನೆಹರು ಸೇರಿದಂತೆ ಅನೇಕರಿಗೆ ಯೋಗ ಶಿಕ್ಷಣ ನೀಡಿದ ಕೀರ್ತಿಗೆ ಪಾತ್ರರಾಗಿದ್ದರು.

ಬಿಕೆಎಸ್‌ ಅಯ್ಯಂಗಾರ್‌ ಮಕ್ಕಳಾದ ಗೀತಾ, ಪ್ರಶಾಂತ್‌ ಇಬ್ಬರೂ ಸಹಾ ವಿವಾಹವೂ ಆಗದೇ ಯೋಗ ಶಿಕ್ಷಣಕ್ಕೆ ತಮ್ಮ ಜೀವನ ಮುಡಿಪಾಗಿಟ್ಟಿರುವುದು ಅವರ ಇಡೀ ಕುಟುಂಬವೇ ಯೋಗಕ್ಕಾಗಿ ದುಡಿಯುತ್ತಿದೆ. ತಂದೆ ವಿಶ್ವದಾದ್ಯಂತ ಆರಂಭಿಸಿರುವ ಯೋಗ ಕೇಂದ್ರಗಳನ್ನು ಮುನ್ನಡೆಸುತ್ತಿದ್ದಾರೆ.

Advertisement

ಬೆಳ್ಳೂರಿನ ಮರೆಯದ ಅಯ್ಯಂಗಾರರು: ತಮ್ಮ ಹುಟ್ಟೂರಿನ ಋಣ ತೀರಿಸಲು ಅಯ್ಯಂಗಾರರು, ಬೆಳ್ಳೂರು ಕೃಷ್ಣಮಾಚಾರ್ಯ ಶೇಷಮ್ಮ ಸ್ಮಾರಕ ಟ್ರಸ್ಟ್‌ ಸ್ಥಾಪಿಸಿ ಇಲ್ಲಿ ಸುಸಜ್ಜಿತವಾದ ಶಾಲೆ, ಆಸ್ಪತ್ರೆ ಸ್ಥಾಪಿಸಿದ್ದಾರೆ. ಗ್ರಾಮದಲ್ಲಿ ತಾವು ಓದಿದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಬೆಳ್ಳೂರಿನಲ್ಲಿ 2 ಕೋಟಿರೂ ವೆತ್ಛದಲ್ಲಿ ಸುಂದರವಾದ ಪಿಯು ಕಾಲೇಜು ಕಟ್ಟಡವನ್ನು ನಿರ್ಮಿಸಿ ಉಚಿತ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಯೋಗದಲ್ಲಿ ಪರಿಣಿತಿರಾಗುವಂತ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಜನಮಾನಸದಲ್ಲಿ ನೆಲೆಗೊಂಡಿದ್ದ ಬಿಕೆಎಸ್‌ ಅಯ್ಯಂಗಾರರು ವಿಧಿವಶರಾದರೂ ಅವರು ಯೋಗಶಿಕ್ಷಣದ ಮೂಲಕ ಇಡೀ ವಿಶ್ವದಲ್ಲಿ ತಮ್ಮ ನೆನಪನ್ನು ಉಳಿಸಿ ಹೋಗಿದ್ದಾರೆ.

ಯೋಗದಿಂದ ಬದುಕು ಸುಂದರ
ಇಂದಿನ ಆಹಾರ ಪದ್ಧತಿ ನಮ್ಮನ್ನು ರೋಗಗಳೆಡೆಗೆ ನೂಕಿರುವಾಗ ಅದನ್ನು ಮೆಟ್ಟಿನಿಂತು ಸುಂದರ ಬದುಕು ನೀಡುವ ಶಕ್ತಿ ಯೋಗಕ್ಕೆ ಮಾತ್ರವಿದೆ ಎನ್ನುತ್ತಿದ್ದ ಅವರ ಮಾತುಗಳು ಎಂದೆಂದಿಗೂ ಪ್ರಸ್ತುತ. ನೈತಿಕ, ಮಾನಸಿಕ, ಪ್ರಾಣಿಕ, ಭೌದ್ದಿಕ ಅಹಂಕಾರ, ಚಿತ್ತ, ದಿವ್ಯದ ಏಳು ಮೆಟ್ಟಿಲುಗಳನ್ನು ಏರಿದಾಗಲೇ ಬದುಕು ಸಾರ್ಥಕವೆಂದು ಬಿಕೆಎಸ್‌ ಅಯ್ಯಂಗಾರರು ಯೋಗ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತೀಯ ಸಂಸ್ಕೃತಿಯ ಯೋಗಕ್ಕೆ ಮಾರು ಹೋಗಿದ್ದಾರೆ.

ನಾವು ಅವರ ಸಂಸ್ಕೃತಿಯತ್ತ ಸಾಗುತ್ತಿರುವುದು ವಿಷಾದದ ಸಂಗತಿ ಎಂದು ಹೇಳುತ್ತಿದ್ದ ಅವರ ಮಾತುಗಳನ್ನು ಮರೆಯದೇ ಯೋಗದತ್ತ ಮನಸ್ಸನ್ನು ಕೇಂದ್ರೀಕರಿಸುವುದೇ ಅವರಿಗೆ ನೀಡುವ ಗೌರವವಾಗಿದೆ. ರೂಪ ಲಾವಣ್ಯ, ಉತ್ತಮ ಆರೋಗ್ಯ, ವಜ್ರದೇಹಕ್ಕಾಗಿ ಯೋಗಸಾಧನೆ ಮಾಡುವಂತೆ ಸಲಹೆ ನೀಡುತ್ತಿದ್ದ ಅವರು, ಯೋಗ ಶಿಕ್ಷಣದಿಂದ ಉತ್ತಮ ಆರೋಗ್ಯ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತೆ ಅನೇಕ ಸಂದರ್ಭಗಳಲ್ಲಿ ಸಮಾಜಕ್ಕೆ ಕವಿಮಾತು ಹೇಳಿದ್ದರು.

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next