ಮಂಗಳೂರು: ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ರೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ನಿರಂಕುಶಾಧಿಪತ್ಯದ ದಾರಿಯಲ್ಲಿ ಸಾಗುತ್ತಿರುವುದು ಸಾಬೀತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಮೇಲ್ಮನವಿಗೆ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ ಆದೇಶ ಪ್ರಕಟಿಸಿದ ಒಂದೇ ದಿನದಲ್ಲಿ ಈ ರೀತಿಯ ಸೇಡಿನ ರಾಜಕೀಯ ಮಾಡಿರುವುದು ರಾಹುಲ್ ಗಾಂಧಿ ಕುರಿತಾದ ಭಯವನ್ನು ಸಾಬೀತು ಪಡಿಸಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದರ ಬಗ್ಗೆ ಕಾಂಗ್ರೆಸ್ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಧ್ವನಿ ಎತ್ತಲಿದೆ ಎಂದರು.
ರಾಹುಲ್ ಗಾಂಧಿ ಮೇಲಿನದ್ದು ಭ್ರಷ್ಟಾಚಾರ ಆರೋಪ ಅಲ್ಲ. ಗುಜರಾತ್‌ನಲ್ಲಿ ಬಿಲ್ಕಿàಸ್ ಬಾನು ಪ್ರಕರಣದಲ್ಲಿ ಯಾವ ರೀತಿ ನ್ಯಾಯ ದೊರಕಿದೆ ಎಂಬುದು ಎಲ್ಲರಿಗೂ ಅರಿವಿದೆ. ಸೌಹಾರ್ದವನ್ನು ಕೆಡಿಸುವ ಹೇಳಿಕೆ ನೀಡಿದಾಗ, ನರಮೇಧಕ್ಕೆ ಕರೆ ಕೊಟ್ಟವರ ಬಗ್ಗೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಾದ ಸರಕಾರ ಏನೂ ಮಾಡಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
2 ಬಿ ಮೀಸಲಾತಿಯಿಂದ ಮುಸ್ಲಿಂ ಸಮುದಾಯವನ್ನು ಕೈಬಿಡುವ ರಾಜ್ಯ ಸರಕಾರದ ನಿರ್ಣಯದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಸಂಪೂರ್ಣ ಮೀಸಲಾತಿಯನ್ನೇ ರದ್ದುಗೊಳಿಸುವ ಹುನ್ನಾರ ಎಂದರು.
Related Articles
ದ.ಕ.ದ 8 ಸ್ಥಾನಗಳಲ್ಲಿ 3 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಲ್ಲಿ ಪಕ್ಷದಲ್ಲಿ ಕಗ್ಗಂಟು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ, ಮುಖಂಡರಾದ ಶಶಿಧರ ಹೆಗ್ಡೆ, ಜೆ.ಆರ್. ಲೋಬೋ, ಸಂತೋಷ್ ಕುಮಾರ್, ಇಬ್ರಾಹಿಂ ಕೋಡಿಜಾಲ್, ಲಾರೆನ್ಸ್, ಅನ್ವಿತ್ ಉಪಸ್ಥಿತರಿದ್ದರು.