ಮಂಗಳೂರು: ಮತ ಎಣಿಕೆಯೊಂದಿಗೆ ಫಲಿತಾಂಶದ ಬಗ್ಗೆ ಇದ್ದ ಕುತೂಹಲ, ಲೆಕ್ಕಾಚಾರಗಳಿಗೆ ತೆರೆ ಬಿದ್ದಿದೆ. ಆದರೆ ಹೊರ ಬಿದ್ದಿರುವ ಫಲಿತಾಂಶದ ಬಗ್ಗೆ ಎಲ್ಲೆಡೆ ವಿಶ್ಲೇಷಣೆ ಆರಂಭಗೊಂಡಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಗೆಲುವಿನೊಂದಿಗೆ ಬೀಗುತ್ತಿರುವ ಬಿಜೆಪಿ ಲೆಕ್ಕಾಚಾರ ಮೀರಿ ದೊರಕಿರುವ ಮತಗಳು ಬಂದದ್ದೆಲ್ಲಿಂದ, ಕಾರಣಗಳೇನಿರಬಹುದು ಎಂಬ ಬಗ್ಗೆ ವಿಶ್ಲೇಷಣೆಯಲ್ಲಿ ತೊಡಗಿದೆ. ಇದೇವೇಳೆ ಈ ಬಾರಿ ಜನರ ವಿಶ್ವಾಸ ಅಥವಾ ಮತಗಳನ್ನು ಕಳೆದುಕೊಂಡದ್ದೆಲ್ಲಿ ಎಂಬುದನ್ನು ವಿಮರ್ಶಿಸುವ ಕಾರ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.
ಜಿಲ್ಲೆಯಲ್ಲಿ ಮೇ 29ರಂದು ಮೂಲ್ಕಿ, ಮೂಡುಬಿದಿರೆ, ಸುಳ್ಯ ನಗರಾಡಳಿತ ಸಂಸ್ಥೆಗಳಿಗೆ ಚುನಾವಣೆನಡೆಯಲಿದೆ. ಮುಂದಿನ ನವೆಂಬರ್ ವೇಳೆಗೆ ಮಂಗಳೂರು ಮನಪಾ ಚುನಾವಣೆ ಎದುರಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತುಕಾಂಗ್ರೆಸ್ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಹೆಚ್ಚುಗಂಭೀರವಾಗಿ ಪರಿಗಣಿಸಿವೆ. ಚುನಾವಣೆಯಲ್ಲಿ ತೋರಿರುವ ನಿರ್ವಹಣೆಯನ್ನು ವಿಶ್ಲೇಷಿಸಿ ನಗರಾಡಳಿತ ಚುನಾವಣೆಯ ಫಲಿತಾಂಶದ ಜಾಡು ಅಂದಾಜಿಸುವ ಕಾರ್ಯದಲ್ಲಿ ಬಿಜೆಪಿ ತೊಡಗಿದ್ದು, ಪ್ರಚಾರ ಕಾರ್ಯತಂತ್ರವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕಾಂಗ್ರೆಸ್, ಫಲಿತಾಂಶದ ಅಂಕಿಅಂಶಗಳನ್ನು ವಿಶ್ಲೇಷಿಸಿ ನಗರಾಡಳಿತ ಚುನಾವಣೆಯಲ್ಲಿ ತನ್ನ ಜನಾದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾದ ಸಂದರ್ಭ ಎದುರಾಗಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಮತ ಗಳಿಕೆಯಲ್ಲಿ ಬಿಜೆಪಿ ಒಟ್ಟು 8 ಕ್ಷೇತ್ರಗಳಲ್ಲಿ 7,15,208 ಮತ್ತು ಕಾಂಗ್ರೆಸ್ 5,77,935 ಮತಗಳನ್ನು ಗಳಿಸಿದೆ. ಅಂದರೆ, ಕಾಂಗ್ರೆಸ್‌ಗಿಂತ ಬಿಜೆಪಿ 1,37,273 ಅಧಿಕ ಮತ ಪಡೆದಿತ್ತು.
ವಿಧಾನಸಭಾ ಚುನಾವಣೆಯ ವರ್ಷದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮುನ್ನಡೆ ಮತ ಪ್ರಮಾಣದಲ್ಲಿ ಮತ್ತೆ 1.37 ಲಕ್ಷ ಹೆಚ್ಚಳವಾಗಿದ್ದು, 2.74 ಲಕ್ಷ ಮತಗಳ ಲೀಡ್ ದಾಖಲಿಸಿದೆ. ಮಂಗಳೂರು ಕ್ಷೇತ್ರ ಹೊರತುಪಡಿಸಿ ಇನ್ನುಳಿದಂತೆ ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯ ಮತ ಮುನ್ನಡೆ ದ್ವಿಗುಣಗೊಂಡಿದೆ. ಇದು ಬಿಜೆಪಿಯಲ್ಲಿ ಹರ್ಷ ತಂದಿದೆ.
ಕಾಂಗ್ರೆಸ್ ಮತ ಗಳಿಕೆಯಲ್ಲಿ ಕುಸಿತ ಕಂಡಿದ್ದು, ಇದರ ಕಾರಣ ಕಂಡುಹಿಡಿಯುವ ಕಾರ್ಯದಲ್ಲಿ ನಿರತವಾಗಿದೆ. ಈ ಬಾರಿ ಇಷ್ಟು ಪ್ರಮಾಣದ ಹಿನ್ನಡೆ ಆಗಲು ಕಾರಣ, ಕೈತಪ್ಪಿರುವ ಮತಗಳು ಮತ್ತು ಎಲ್ಲಿ ವೈಫಲ್ಯ ಆಗಿದೆ ಎಂಬ ಬಗ್ಗೆ ಆಂತರಿಕ ವಿಶ್ಲೇಷಣೆ ಆರಂಭಗೊಂಡಿದೆ.