ಬೆಂಗಳೂರು: ರಾಜ್ಯದಲ್ಲಿ 125 ರಿಂದ 130 ಸ್ಥಾನ ಗಳಿಸುವ ಮೂಲಕ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದ್ದು,ಮೇ 15ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ಚರ್ಚಿಸಲಿದ್ದೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬ ಮತದಾನೋತ್ತರ ಸಮೀಕ್ಷೆಗಳ ಕುರಿತಂತೆ ತಮ್ಮ ಡಾಲರ್
ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗಳು ಏನೇ ಹೇಳಲಿ. ಬಿಜೆಪಿಗೆ ಅಂತಹ ಯಾವುದೇ ಭಯವಿಲ್ಲ. ಸ್ವಂತ ಬಲದಲ್ಲೇ ಸರ್ಕಾರ ರಚಿಸಲಿದ್ದೇವೆ. ಸ್ಪಷ್ಟ ಬಹುಮತ ಸಿಗಲಿದ್ದು, ಯಾವುದೇ ಪಕ್ಷದ ಸಹಕಾರವೂ ಬೇಕಾಗಿಲ್ಲ. 125ರಿಂದ 130 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದರು.
ರಾಜ್ಯದ ಜನತೆ ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದ್ದು, ಶೇ.72ರಷ್ಟು ಮತ ದಾನವಾಗಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯಿದ್ದು, ಇದರಿಂದಾಗಿಯೇ ಜನ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ. ಇದರ ಮುನ್ಸೂಚನೆ ತಿಳಿದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಐದು ದಿನಗಳಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂದರು.
ಯಾರ್ಯಾರಿಗೆ ಎಸ್ಟೆಷ್ಟು ಸೀಟು?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದ್ದು ಭ್ರಷ್ಟ ಹಾಗೂ ರೈತವಿರೋಧಿ
ಸರ್ಕಾರವಾಗಿತ್ತು. ಹೀಗಾಗಿ ಕಾಂಗ್ರೆಸ್ 70ಕ್ಕೂ ಹೆಚ್ಚು ಸೀಟು ಗೆಲ್ಲುವುದಿಲ್ಲ. ಜೆಡಿಎಸ್ 22ರಿಂದ 23 ಸೀಟು ಪಡೆ
ಯಬಹುದು. ಪಕ್ಷೇತರರು ಮತ್ತು ಇತರರು 2ರಿಂದ 4 ಸ್ಥಾನಗಳಲ್ಲಿ ಆರಿಸಿ ಬರಲಿದ್ದಾರೆ. ಆದರೆ, ಬಿಜೆಪಿ 125ರಿಂದ 130 ಸೀಟುಗಳನ್ನು ಗೆಲ್ಲಲಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಯುಪಿ ಸಿಎಂ ಆದಿತ್ಯನಾಥ್ ಸೇರಿ ಎಲ್ಲರ ಆಶೀರ್ವಾದವೂ ಬಿಜೆಪಿ ಮೇಲಿದೆ ಎಂದು ಹೇಳಿದರು.
ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಯಾವುದೇ ಮಾತನಾಡುವುದಿಲ್ಲ. ನನ್ನ ಹಿಂದಿನ ಯಾವುದೇ ಲೆಕ್ಕಾಚಾರ ತಪ್ಪಾಗಿಲ್ಲ. ಇಡೀ ರಾಜ್ಯ ಸುತ್ತಿದ್ದೇನೆ. ಜನರ ನಾಡಿಮಿಡಿತ ಅರಿತಿದ್ದೇನೆ. ಸಿಎಂ ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ.ಹೀಗಾಗಿ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ ಎಂದರು.