Advertisement

ರಾಜ್ಯದಲ್ಲಿ ಬಿಜೆಪಿ ಪರ ರಾಜಕೀಯ ದ್ರುವೀಕರಣ: ಎಸ್‌ಎಂಕೆ

03:45 AM Mar 25, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪರವಾದ ರಾಜಕೀಯ ದ್ರುವೀಕರಣ ಆರಂಭವಾಗಿದ್ದು, ಅದು ಬಿಜೆಪಿಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲಿದೆ ಎಂಬ ಸ್ಪಷ್ಟ ಚಿತ್ರಣ ಇನ್ನು ಐದಾರು ತಿಂಗಳಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ತಮ್ಮ ಬಳಿಕ ಅನ್ಯ ಪಕ್ಷಗಳಿಂದ ಇನ್ನಷ್ಟು ಮುಖಂಡರು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂಬ ಸೂಚನೆ ನೀಡಿದ್ದಾರೆ.

Advertisement

ಬುಧವಾರ ದೆಹಲಿಯಲ್ಲಿ ಬಿಜೆಪಿಗೆ ಸೇರಿದ ಬಳಿಕ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಅವರಿಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಉಜ್ವಲ ಭವಿಷ್ಯವಿದೆ ಎಂದು ತಿಳಿಸಿದರು.

ಬಿಜೆಪಿ ಸೇರುವ ಕುರಿತು ನಾನು ತೆಗೆದುಕೊಂಡ ತೀರ್ಮಾನ ತಕ್ಷಣದ್ದೂ ಅಲ್ಲ ಮತ್ತು ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಿಂದಲೂ ಅಲ್ಲ. 8-9 ತಿಂಗಳ ಹಿಂದೆಯೇ ಈ ಬಗ್ಗೆ ತೀರ್ಮಾನಿಸಿದ್ದೆ. ಕಾಂಗ್ರೆಸ್‌ನಲ್ಲಿ ನನ್ನನ್ನು ನಡೆಸಿಕೊಂಡ ರೀತಿಯಿಂದ ಮಾನಸಿಕವಾಗಿ ಹಿಂಸೆಯಾದಾಗ ಪರ್ಯಾಯ ಸಂಘಟನೆ ಸೇರುವ ಬಗ್ಗೆ ಯೋಚನೆ ಮಾಡಿದ್ದೆ. ಆಗ ಪ್ರಧಾನಿ ನರೇಂದ್ರ ಮೋದಿಯೇ ಸೂಕ್ತ ವ್ಯಕ್ತಿ ಎಂದು ಅನಿಸಿ ಬಿಜೆಪಿ ಸೇರುವ ತೀರ್ಮಾನ ಕೈಗೊಂಡೆ ಎಂದು ಹೇಳಿದರು.

ಸಾರ್ವಜನಿಕ ಜೀವನದಲ್ಲಿ ನಾನು ಸಾಕಷ್ಟು ಅನುಭವ ಹೊಂದಿದ್ದೇನೆ. ಸಾಕಷ್ಟು ಪ್ರಧಾನಿಗಳನ್ನು ನೋಡಿದ್ದು, ಕೆಲವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎರಡೂವರೆ ವರ್ಷದ ಅವಧಿಯಲ್ಲಿ ಏನೆಲ್ಲಾ ಸ್ಥಿತ್ಯಂತ್ರಗಳು ನಡೆದವು ಎಂಬುದನ್ನೂ ಅವಲೋಕಿಸಿದ ಬಳಿಕ ಶುದ್ಧ ಮನಸ್ಸು ಮತ್ತು ಯಾವುದೇ ಆಸೆ, ಆಕಾಂಕ್ಷೆ ಇಲ್ಲದೆ ಬಿಜೆಪಿ ಸೇರಿದ್ದೇನೆ ಎಂದು ಹೇಳಿದ ಅವರು, ಒಳ್ಳೆಯ ನಾಯಕತ್ವಕ್ಕೆ ಸಮರ್ಥನೆ ಕೊಡುವುದು ನಮ್ಮ ಕರ್ತವ್ಯ. ಇದೀಗ ಅದನ್ನು ದೃಢೀಕರಿಸಿದ್ದೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ನೋಟು ಅಮಾನ್ಯ, ಸರ್ಜಿಕಲ್‌ ಸ್ಟ್ರೈಕ್‌, ಸ್ವತ್ಛ ಭಾರತ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನೋಟು ಅಮಾನ್ಯ, ಸರ್ಜಿಕಲ್‌ ಸ್ಟ್ರೈಕ್‌ನಂತಹ ನಿರ್ಧಾರ ಕೈಗೊಳ್ಳಲು ಗುಂಡಿಗೆ ಬೇಕು. ಮೋದಿ ಅವರ ಈ ಕಾರ್ಯಕ್ರಮಗಳು ತಮ್ಮನ್ನು ತುಂಬಾ ಆಕರ್ಷಿಸಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಹಿಂದೆ ತಮ್ಮನ್ನು ಕೇಂದ್ರ ಸಂಪುಟದಿಂದ ಕೈಬಿಟ್ಟ ಕ್ರಮಕ್ಕೆ ಮತ್ತೆ ಬೇಸರ ವ್ಯಕ್ತಪಡಿಸಿದ ಅವರು, ಯಾವುದೇ ಮುನ್ಸೂಚನೆ, ಕಾರಣಗಳನ್ನು ನೀಡದೆ ನನ್ನನ್ನು ಸಂಪುಟದಿಂದ ಕೈಬಿಡಲಾಯಿತು. ಯೋಗ್ಯರು, ಯೋಗ್ಯರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಾಡಿಕೊಂಡ ಮನವಿಗೆ ಪ್ರತಿಕ್ರಿಯಿಸಿದ ಅವರು, ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡುವುದಾಗಿ ಘೋಷಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫ‌ಲಿತಾಂಶವೇ ಕರ್ನಾಟಕದಲ್ಲೂ ಪುನರಾವರ್ತನೆಯಾಗಲಿದ್ದು, ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿಷನ್‌-150 ಕಾರ್ಯಕ್ರಮಕ್ಕೆ ಎಸ್‌.ಎಂ.ಕೃಷ್ಣ ಅವರ ಸೇರ್ಪಡೆ ಹೆಚ್ಚು ಬಲ ತಂದುಕೊಟ್ಟಿದೆ. ನಾವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಎಸ್‌.ಎಂ.ಕೃಷ್ಣ ಅವರ ನೆರವೂ ಸಿಗಲಿದೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕರಾದ ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ವಿಧಾನ ಪರಿಷತ್‌ ಸದಸ್ಯ ರಾಮಚಂದ್ರಗೌಡ ಮತ್ತಿತರರು ಹಾಜರಿದ್ದರು.ಇದಕ್ಕೂ ಮುನ್ನ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಎಸ್‌.ಎಂ.ಕೃಷ್ಣ ಅವರನ್ನು ರಾಜ್ಯ ಬಿಜೆಪಿ ವತಿಯಿಂದ ಸ್ವಾಗತಿಸಿ ಮಲ್ಲೇಶ್ವದರಲ್ಲಿರುವ ಪಕ್ಷದ ಕಚೇರಿಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಪಟಾಸಿ ಸಿಡಿಸಿ ಅವರನ್ನು ಬರಮಾಡಿಕೊಳ್ಳಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಬಿಜೆಪಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಖರ್ಗೆ ಪಕ್ಷದ ಉಪಾಧ್ಯಕ್ಷರ ವಯಸ್ಸೆಷ್ಟು?
ಈ ವಯಸ್ಸಿನಲ್ಲಿ ಅಮಿತ್‌ ಶಾ ಅವರ ಕೈಕೆಳಗೆ ಕೆಲಸ ಮಾಡುವ ಪರಿಸ್ಥಿತಿ ಎಸ್‌.ಎಂ.ಕೃಷ್ಣ ಅವರಿಗೆ ಏಕೆ ಎಂಬ ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಎಸ್‌.ಎಂ.ಕೃಷ್ಣ, ಖರ್ಗೆ ಅವರ ವಯಸ್ಸು ಎಷ್ಟು ಎಂಬುದು ನನಗೆ ಗೊತ್ತು. ಅವರಿಗೆ 73, 74 ವರ್ಷ ವಯಸ್ಸಾಗಿದೆ. ಆದರೆ, ಅವರ ಪಕ್ಷದ ಉಪಾಧ್ಯಕ್ಷರಿಗೆ ಎಷ್ಟು ವಯಸ್ಸು? ಬೇರೆಯವರನ್ನು ಬೊಟ್ಟು ಮಾಡುವ ಮುನ್ನ ತಾವೇನು ಎಂಬುದನ್ನು ತಿಳಿದುಕೊಳ್ಳಬೇಕು. ನಾಯಕರಲ್ಲಿ ಈ ದ್ವಂದ್ವಗಳು ಇರುವುದರಿಂದಲೇ ಕಾಂಗ್ರೆಸ್‌ ಹಳಿತಪ್ಪಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ ಮೂಡ್‌ನಿಂದ ಹೊರಬರದ ಕೃಷ್ಣ
ಬಿಜೆಪಿ ಸೇರಿದರೂ ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ ಮೂಡ್‌ನಿಂದ ಹೊರಬಂದಿಲ್ಲ ಎಂಬುದಕ್ಕೆ ಶುಕ್ರವಾರ ಅವರ ಮಾತೇ ಸಾಕ್ಷಿಯಾಯಿತು. ಅಲ್ಲದೆ, ಕಾಂಗ್ರೆಸ್‌ನಲ್ಲಿ ತಾವು ಮಾಡಿದ ಸುದೀರ್ಘ‌ ರಾಜಕಾರಣವೇ ಇದಕ್ಕೆ ಕಾರಣ ಎಂಬುದನ್ನು ಅವರೂ ಒಪ್ಪಿಕೊಂಡರು.

ಡೈನಾಸ್ಟಿ ರಾಜಕಾರಣದ ಕುರಿತು ಮಾತನಾಡುತ್ತಾ, ಅಂತಹ ರಾಜಕಾರಣಕ್ಕೆ ನಿಮ್ಮಲ್ಲಿ (ಬಿಜೆಪಿಯಲ್ಲಿ) ಅವಕಾಶ ಇಲ್ಲ ಎಂದು ಕೃಷ್ಣ ಹೇಳಿದರು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ವಿಧಾನ ಪರಿಷತ್‌ ಸದಸ್ಯ ರಾಮಚಂದ್ರಗೌಡ, ನಿಮ್ಮಲ್ಲಿ ಎಂದು ಹೇಳಬೇಡಿ, ನಮ್ಮಲ್ಲಿ ಎಂದು ಹೇಳಿ ಎಂದು ಮೆತ್ತಗಿನ ಧ್ವನಿಯಲ್ಲಿ ಹೇಳಿದರು.ನಂತರ ತಪ್ಪು ತಿದ್ದಿಕೊಂಡ ಎಸ್‌.ಎಂ.ಕೃಷ್ಣ, ಸುಮಾರು 46 ವರ್ಷ ಕಾಂಗ್ರೆಸ್‌ನಲ್ಲಿ ಇದ್ದೆ. ಹೀಗಾಗಿ ಅಲ್ಲಿಂದ ಹೊರಬರುವುದು ಕಷ್ಟವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next