ಶಹಾಬಾದ: ರಾಷ್ಟ್ರದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ದೇಶದ ಪ್ರಧಾನಿಯನ್ನಾಗಿ ನೋಡಬೇಕಾದರೆ ಮೇರಾ ಬೂತ್ ಸಬಸೆ ಮಜಬೂತ್ ಎನ್ನುವ ಪರಿಕಲ್ಪನೆಯಲ್ಲಿ ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ನಮೋಶಿ ಹೇಳಿದರು.
ನಗರದ ಹಳೆಶಹಾಬಾದನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಶಕ್ತಿ ಕೇಂದ್ರ 239 ಹಾಗೂ 243ರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಸದಾಕಾಲ ದುಡಿಯುತ್ತಿರುವ ಮೋದಿ ಅವರನ್ನು ಜನತೆಯೂ ಪ್ರಧಾನಿಯಾಗಿ ನೋಡುವ ಕಾತುರತೆ ಇದೆ. ಕೋಟ್ಯಂತರ ಜನರ ಹೃದಯದಲ್ಲಿ ಭದ್ರವಾಗಿ ನೆಲೆಸಿರುವ ಮೋದಿ ಅವರ ಜನಪ್ರಿಯ ಯೋಜನೆಗಳನ್ನು ಜನರ ಬಾಗಿಲಿಗೆ ಮುಟ್ಟಿಸುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನು ಆರ್ಥಿಕವಾಗಿ ಬಲಾಡ್ಯವಾಗಲು ಎಲ್ಲ ವರ್ಗಗಳಿಗೆ ಅನುಕೂಲವಾಗುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದೆ.
ಅಲ್ಲದೇ ಪ್ರತಿಯೊಬ್ಬ ಕಾರ್ಯಕರ್ತರು ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು.ಬಿಜೆಪಿ ಶಕ್ತಶಾಲಿಯಾಗಲು ಕಾರ್ಯಕರ್ತರ ತ್ಯಾಗ ಪರಿಶ್ರಮವೇ ಕಾರಣವೆಂದು ಹೇಳಿದರು.
ಮಂಡಲ ಉಪಾಧ್ಯಕ್ಷ ಅನೀಲ ಭೋರಗಾಂವಕರ್ ಮಾತನಾಡಿ, ನರೇಂದ್ರ ಮೋದಿ ಅವರ ಜನಪ್ರಿಯ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರಿಂದ ಇತರರಿಗೆ ಯೋಜನೆಯ ಬಗ್ಗೆ ತಿಳಿಸುವಲ್ಲಿ ಶ್ರಮಿಸಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಪ್ರಧಾನಿಯಾಗಿ ನೋಡಬೇಕೆಂದು ಹೇಳಿದರು.
ಆನಂದ ಚವ್ಹಾಣ, ಓಂಕಾರ, ಕನಕಪ್ಪ ದಂಡಗುಲಕರ್, ಭೀಮರಾವ ಸಾಳುಂಕೆ, ಶ್ರೀಶೈಲ ಬೆಳಮಗಿ, ಶಿವುಗೌಡ ಪಾಟೀಲ, ಶರಣು ಭೋಗಶೆಟ್ಟಿ, ಸಾಯಿಬಣ್ಣ ಬೆಳಗುಂಪಿ, ಬಸವರಾಜ ಬಿರಾದಾರ, ದೇವದಾಸ ಜಾಧವ್ ಹಾಗೂ ಮತ್ತಿತರರು ಇದ್ದರು.