ಬಳ್ಳಾರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬಳ್ಳಾರಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ, ರಾಹುಲ್ ಅವರು ಬಳ್ಳಾರಿಯಿಂದ ಸ್ಪರ್ಧಿಸಿದರೆ ಅವರ ವಿರುದ್ಧ ಶ್ರೀರಾಮುಲು ಒಂದು ಲಕ್ಷ ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಜರುಗಿದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅಡ್ರೆಸ್ ಕಳೆದುಕೊಂಡ ಎಐಸಿಸಿ ಅಧ್ಯಕ್ಷರು, ಬಳ್ಳಾರಿಗೆ ಬಂದು ಇಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಬಳ್ಳಾರಿ ಜನರು ಅವರನ್ನು ತಿರಸ್ಕರಿಸಬೇಕು ಎಂದರು.
ಈ ಹಿಂದೆ ಅವರ ತಾಯಿ ಸೋನಿಯಾ ಗಾಂಧಿ ಅವರೂ ಬಳ್ಳಾರಿ ಮತ್ತು ಅಮೇಥಿಯಿಂದ ಸ್ಪ ರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬಳ್ಳಾರಿಯನ್ನು ತ್ಯಜಿಸಿ ಅಮೇಥಿ ಉಳಿಸಿಕೊಂಡರು. ಈ ರೀತಿ ಬಳ್ಳಾರಿ ಮತದಾರರನ್ನು ವಂಚಿಸಿದ ಅವರು, ಈ ಪ್ರದೇಶದ ಅಭಿವೃದ್ಧಿಗೆ ಎಂದು 3,100 ಕೋಟಿ ರೂ.ವಿಶೇಷ ಪ್ಯಾಕೇಜ್ ಘೋಷಿಸಿದರು. ಆದರೆ, ಅದ್ಯಾವುದೂ ಜಾರಿಯಾಗದೇ ಆ ಹಣ ದುರ್ಬಳಕೆಯಾಗಿದೆ ಎಂದರು.
ಸಿಎಂ ವಿರುದ್ಧ 67 ಕೇಸ್: ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು, ಸಿಎಂ ವಿರುದ್ಧ 67 ಕೇಸ್‌ಗಳಿವೆ. ಅವುಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ಎಚ್ಚರದಿಂದಿರಿ, ನಮ್ಮ ಸರ್ಕಾರ ಅಧಿ ಕಾರಕ್ಕೆ ಬಂದ ಕೂಡಲೇ ಈ ಪ್ರಕರಣಗಳ ತನಿಖೆಗೆ ಆದೇಶಿಸಲಾಗುವುದು ಎಂದರು. ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಸಿದ್ದರಾಮಯ್ಯ ರಾಜ್ಯದ ತೆರಿಗೆದಾರರ ಹಣದಿಂದ ಸರ್ಕಾರದ ಸಾಧನಾ ಸಮಾವೇಶ ನಡೆಸುತ್ತಿದ್ದಾರೆ. ಕೋಟ್ಯಂತರ ರೂ.ಜಾಹೀರಾತುಗಳಿಗೆ ವ್ಯಯಿಸಿ ತಮ್ಮ ಸರ್ಕಾರ ಸಾಕಷ್ಟು ಶ್ರಮಿಸಿದೆ ಎಂಬ ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ ಎಂದರು.