Advertisement

ಮೀಸಲಾತಿ: ಪಂಚಮಸಾಲಿ ಶ್ರೀಗಳಿಗೆ ಮಾನಸಿಕ ಹಿಂಸೆ

11:37 PM Apr 03, 2023 | Team Udayavani |

ಬೆಂಗಳೂರು: ಲಿಂಗಾಯತ -ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಈಗ ಮತ್ತೂಂದು ತಿರುವು ಲಭಿಸಿದೆ. ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಬಿಜೆಪಿಯ ಪಂಚಮಸಾಲಿ ಸಚಿವರು ಹಾಗೂ ಶಾಸಕರು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದು, ಕಾಂಗ್ರೆಸ್‌ ನಾಯಕರು ಮದ್ಯಪಾನ ಮಾಡಿ ನಮ್ಮ ಸ್ವಾಮೀಜಿಗಳಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಚಿವರಾದ ಸಿ.ಸಿ. ಪಾಟೀಲ್‌, ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು. ಇದಕ್ಕೆ ಕಾಂಗ್ರೆಸ್‌ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಬೆಲ್ಲದ್‌ ಆರೋಪ
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಶಾಸಕ ಅರವಿಂದ ಬೆಲ್ಲದ್‌, ರಾಜಕೀಯ ಮಾಡುವುದಕ್ಕಾಗಿಯೇ ಕಾಂಗ್ರೆಸ್‌ ನಾಯಕರು ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ್ದರು. ಹೋರಾಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ನ ಮೂರ್‍ನಾಲ್ಕು ನಾಯಕರು ಸ್ವಾಮೀಜಿಗೆ ಕರೆ ಮಾಡಿ ಈಗ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪಂಚಮಸಾಲಿ, ಮರಾಠ, ಒಕ್ಕಲಿಗ, ಹಿಂದುಳಿದ ಸಮುದಾಯಗಳು ಮೀಸಲಾತಿ ಹೋರಾಟ ಪ್ರಾರಂಭಿ ಸಿದ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ತೆಗೆದುಕೊಂಡ ನಿರ್ಧಾರಗಳಿಂದ ಕಾಂಗ್ರೆಸ್‌ ನಾಯಕರಿಗೆ ಗರ ಬಡಿದಂತಾಗಿದೆ. ತಮ್ಮ ನಿರ್ಧಾರದ ಮೂಲಕ ಹಲವು ಸಮುದಾಯಗಳಿಗೆ ಸಿಎಂ ಬೊಮ್ಮಾಯಿ ಗೌರವ ನೀಡಿ ದ್ದಾರೆ. ಆದರೆ ಕಾಂಗ್ರೆಸ್‌ ನಾಯಕರು ಇದಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಿ.ಸಿ. ಪಾಟೀಲ್‌ ಮಾತನಾಡಿ, ಕಾಂಗ್ರೆಸ್‌ನ ಕೆಲವು ನಾಯಕರು ಮದ್ಯಪಾನ ಮಾಡಿ ಜಯ
ಮೃತ್ಯುಂಜಯ ಸ್ವಾಮೀಜಿಗೆ ಕರೆ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ನಮಗೆ ರಾಜಕಾರಣ ಬೇಡ. ನಮ್ಮ ಮಕ್ಕಳಿಗೆ ಮೀಸಲಾತಿ ಸಿಕ್ಕಿದರೆ ಸಾಕೆಂದು ಕಾಂಗ್ರೆಸ್‌ ನಾಯಕರು ಆರಂಭದಲ್ಲಿ ಹೇಳಿದ್ದರು. ಆದರೆ ವಿಜಯಾನಂದ ಕಾಶಪ್ಪನವರ್‌ ಸೇರಿ ಹಲವರ ಭಾವನೆ ಆ ಬಳಿಕ ಬದಲಾಯಿತು. ಸರಕಾರ ಮೀಸಲಾತಿ ಕಲ್ಪಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಭಾವಿಸಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಹೋರಾಟ ನಡೆಸುವ ಯೋಚನೆ ಕಾಂಗ್ರೆಸ್‌ ನಾಯಕರಿಗೆ ಇತ್ತು ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಯಾವ ಕಾಂಗ್ರೆಸ್‌ ನಾಯಕರೂ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತಾಡಿಸಲಿಲ್ಲ. ಇದು ಕಾಂಗ್ರೆಸ್‌ ನಾಯಕರ ಧೋರಣೆ. ಕಾಶಪ್ಪನವರ್‌ ಹಾಗೂ ವಿನಯ್‌ ಕುಲಕರ್ಣಿ ಸೇರಿ ಕಾಂಗ್ರೆಸ್‌ ಮುಖಂಡರು ಮೀಸಲಾತಿ ಆದೇಶದ ಸರಕಾರಿ ಗೆಜೆಟ್‌ ಸುಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಶ್ರೀಗಳಿಗೆ ಭದ್ರತೆ
ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಪೊಲೀಸ್‌ ಭದ್ರತೆ ನೀಡುವಂತೆ ಸೂಚಿಸಲಾಗಿದೆ. ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ಕರೆ ಮಾಡಿರುವ ಸಿಎಂ ಬೊಮ್ಮಾಯಿ ಈ ಬಗ್ಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್‌ ಭದ್ರತೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸಿ.ಸಿ.ಪಾಟೀಲ, ನಿರಾಣಿ ಮದ್ಯ ಸೇವನೆ ಮಾಡಿದ್ದರೇ?
ಬೆಂಗಳೂರು: ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಯನ್ನು ನಿಂದಿಸುವಾಗ ಸಚಿವರಾದ ಸಿ.ಸಿ. ಪಾಟೀಲ ಮತ್ತು ಮುರುಗೇಶ ನಿರಾಣಿ ಮದ್ಯ ಸೇವನೆ ಮಾಡಿದ್ದರೇ ಎಂದು ಕಾಂಗ್ರೆಸ್‌ ಖಾರವಾಗಿ ಕೇಳಿದೆ.

ಕುಡಿದ ಮತ್ತಿನಲ್ಲಿ ಸ್ವಾಮೀಜಿಯವರಿಗೆ “ಕೈ’ ನಾಯಕರು ಕರೆ ಮಾಡುತ್ತಾರೆಂಬ ಆರೋಪಕ್ಕೆ ಟ್ವೀಟ್‌ ಮೂಲಕ ತಿರುಗೇಟು ನೀಡಿರುವ ಕಾಂಗ್ರೆಸ್‌, ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಸ್ವಾಮೀಜಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಬಿಜೆಪಿ ನಾಯಕರು, ಈಗ ಮತ್ತೂಮ್ಮೆ ಸ್ವಾಮೀಜಿಯನ್ನು ಎಳೆದುತಂದು ಅಪಮಾನ ಮಾಡುತ್ತಿದ್ದಾರೆ. ಸ್ವಾಮೀಜಿ ಹೆಸರಿನಲ್ಲಿ ಸುಳ್ಳು ಹೇಳಲು ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದ್ದಾರೆ.

ಯಾರದೋ ಮೀಸಲಾತಿ ಕಿತ್ತು ಕೊಟ್ಟಿದ್ದಾರೆ. ಒಕ್ಕಲಿಗರು ಬೇರೆಯವರ ಅನ್ನ ಕಿತ್ತು ತಿನ್ನುವುದಿಲ್ಲ ಎಂಬ ನಂಜಾವಧೂತ ಸ್ವಾಮೀಜಿಯವರ ಹೇಳಿಕೆ ಆಧರಿಸಿ ಮತ್ತೂಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ನಂಜಾವಧೂತ ಶ್ರೀಗಳ ಈ ಮಾತಿಗೆ ಸರಕಾರದ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next