ಬೆಳಗಾವಿ: ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಒಡೆದು ಆಳುವ ನೀತಿಗೆ ಮತದಾರರು ಮನ್ನಣೆ ನೀಡಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಅವರು ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಚುನಾವಣೆಯಲ್ಲಿ ನಮ್ಮ ಕಡೆಯಿಂದ ಪ್ರಯತ್ನ ಆಗಿದೆ. ಮತದಾರರ ತೀರ್ಪು ಗೌರವಿಸುತ್ತೇವೆ ಎಂದರು.
ಧರ್ಮದ ಹೆಸರಿನಲ್ಲಿ ಬಿಜೆಪಿ ಪ್ರಚಾರ ಮಾಡಿತ್ತು. ಆದರೆ ಇದಕ್ಕೆ ಯಶಸ್ಸು ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಯತ್ನಿಸಿದ್ದರು ಎಂದು ಟೀಕಿಸಿದರು.
ಕಾಂಗ್ರೆಸ್ ಸೋಲಿನ ಬಗ್ಗೆ ವರ್ಕಿಂಗ್ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ನಾನು ಕಲಬುರ್ಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಶೇಷ ಸ್ಥಾನಮಾನ ಕೊಡಿಸಿದ್ದೇನೆ. ರೈಲ್ವೆ ಮಾರ್ಗ, ಬೋಗಿ ಕಾರ್ಖಾನೆ ಆರಂಭಿಸಿದ್ದೇನೆ. ಯಾವುದೇ ಕಳಂಕ ಇಲ್ಲದೇ ಕೆಲಸ ಮಾಡಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುಪ್ರೀಂ ಕೋರ್ಟ್ ಮೀಸಲಾತಿ ಬಗ್ಗೆ ಟಿಪ್ಪಣಿ ವಿಚಾರ ಪ್ರಸ್ತಾಪಿಸಿದ ಅವರು ಸುಪ್ರೀಂ ಕೋರ್ಟ್ ನಿರ್ಧಾರ ತಪ್ಪು ಇದೆ ಎಂದು ಹೇಳಿದ್ದೇನೆ. ಮೂಲಭೂತವಾಗಿ ಮೀಸಲಾತಿ ಸಂವಿಧಾನದಲ್ಲಿ ಇರೋ ಹಕ್ಕು. ಹೀಗಾಗಿ ಟಿಪ್ಪಣಿಯನ್ನು ನಾನು ಖಂಡಿಸುತ್ತೇನೆ ಎಂದರು
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ನೇಮಕ ಆಗಲಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಹೇಳಿದರು.