Advertisement

ಬಿಜೆಪಿಗೆ “ಸಿಡಿ’ಸಂಕಟ : ಶಾಸಕರಿಗೆ ಆತಂಕ; ಕೋರ್ಟ್‌ ಮೊರೆ ಹೋದ ರೇಣುಕಾಚಾರ್ಯ

10:18 AM Jul 31, 2021 | Team Udayavani |

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾವುದೇ ಆರೋಪ ಇರದವರನ್ನು ಸೇರಿಸಿಕೊಳ್ಳಬೆಂಕೆಂಬ ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದ್ದು, ಇದರಿಂದ “ಸಿಡಿ ಭಯ’ದಲ್ಲಿರುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕೈ ತಪ್ಪುತ್ತದೆ ಎಂಬ ಆತಂಕ ಶುರುವಾಗಿದೆ. ಆದರೆ, ಅವರನ್ನು ಬಿಟ್ಟು ಸಂಪುಟ ರಚಿಸುವುದೂ ಕಷ್ಟ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ಇದನ್ನೂ ಓದಿ:ಕಾಳಾವರ: ಫೈನಾನ್ಸ್ ಕಚೇರಿಯಲ್ಲೇ ಮಾಲಿಕನ ಕಡಿದು ಕೊಲೆ! ಹಣಕಾಸು ವಿಚಾರ ಶಂಕೆ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ಹೊರ ಬರುತ್ತಿದ್ದಂತೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಕೆಲವು ವಲಸಿಗರು ತಮ್ಮ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.

ಅಲ್ಲದೇ ಮೂಲ ಬಿಜೆಪಿಯ ಕೆಲವು ಸಚಿವರು ಹಾಗೂ ಶಾಸಕರು ಬೆರೆ ಬೇರೆ ಕಾರಣಗಳಿಗೆ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದಿದ್ದಾರೆ. ಈ ಬೆಳವಣಿಗೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿತ್ತು. ಆ ರೀತಿಯ ಬೆಳವಣಿಗೆ ಮುಂಬರುವ ದಿನಗಳಲ್ಲಿ ಮರುಕಳಿಸದಂತೆ ಸಿಡಿ ಆತಂಕದಲ್ಲಿರುವವರಿಗೆ ಸಂಪುಟದಲ್ಲಿ ಅವಕಾಶ ನೀಡಬಾರದು ಎಂದು ಆರ್‌ಎಸ್‌ಎಸ್‌ ನಾಯಕರು ಸಲಹೆನೀಡಿದ್ದಾರೆ ಎಂಬ ಮಾತುಗಳುಕೇಳಿ ಬರುತ್ತಿವೆ.

ಸಿಡಿ ಆತಂಕದಲ್ಲಿರುವ ಶಾಸಕರನ್ನು ಸಚಿವರನ್ನಾಗಿ ಮಾಡಿದರೆ, ನಂತರ ಅವರ ವಿರುದ್ಧ ಸಿಡಿ ಬಿಡುಗಡೆಯಾದರೆ ಪಕ್ಷ ಹಾಗೂ ಸರ್ಕಾರ ಮತ್ತೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಯಾವುದೇ ಆರೋಪ ಇರದವರನ್ನು ನೂತನ ಸಂಪುಟಕ್ಕೆ ಪರಿಗಣಿಸಬೇಕೆಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ ಹೊಂದಿದೆ ಎನ್ನಲಾಗುತ್ತಿದೆ.

Advertisement

ಆದರೆ, ಬಹುತೇಕ ವಲಸೆ ಶಾಸಕರು ಕೋರ್ಟ್‌ನಿಂದ ಸ್ಟೇ ತಂದಿರುವುದರಿಂದ ಅವರನ್ನು ಹೊರಗಿಟ್ಟು ಸಂಪುಟ ರಚಿಸಿದರೆ, ಸುಗಮ ಸರ್ಕಾರ ನಡೆಸುವುದು ಕಷ್ಟ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಮಾಜಿ ಸಿಎಂ ಯಡಿಯೂರಪ್ಪ ವಲಸಿಗರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿರುವುದರಿಂದ ಬಿಜೆಪಿ ಹೈಕಮಾಂಡ್‌ ಹಾಗೂ ನೂತನ ಸಿಎಂ ಬೊಮ್ಮಾಯಿ ಅವರಿಗೆ ಸಿಡಿ ಶಾಸಕರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬ ಮಾತುಗಳುಕೇಳಿ ಬರುತ್ತಿವೆ.

ಕೋರ್ಟ್‌ ಮೊರೆ ಹೋದ ರೇಣುಕಾಚಾರ್ಯ
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಮಾಜಿ ಸಚಿವ, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಸುದ್ದಿಗಳು, ಚಿತ್ರಗಳು ಅಥವಾ ವಿಡಿಯೊ ತುಣುಕುಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆಕೋರ್ಟ್‌ ಮೊರೆ ಹೋಗಿದ್ದಾರೆ.

ಈ ಸಂಬಂಧ ವಿಚಾರಣೆ ನಡೆಸಿದ ನಗರ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ. ಅವಹೇಳನಕಾರಿಯಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆಕೋರಿ ರೇಣುಕಾಚಾರ್ಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ 20ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಅರ್ಜಿದಾರರಿಗೆ ಅಪಮಾನ ವಾಗುವಂತಹ ಯಾವುದೇ ಸುದ್ದಿ ಬಿತ್ತರಿಸದಂತೆ ನಿರ್ಬಂಧಕಾಜ್ಞೆ ನೀಡಿ ಆದೇಶಿಸಿದೆ.

ಅರ್ಜಿದಾರರು ಹಲವು ವರ್ಷಗಳ ಕಾಲ ಸಾರ್ವಜನಿಕ ಸೇವೆ ಸಲ್ಲಿಸಿದ್ದು, ವಿಧಾನ ಸಭಾ ಕ್ಷೇತ್ರವೊಂದರ ಜನ ಪ್ರತಿನಿಧಿ ಯಾಗಿದ್ದಾರೆ. ಹೀಗಾಗಿ ಆಧಾರ ರಹಿತವಾದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next