Advertisement

ಬಿಜೆಪಿಯ 3 ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆ: ಅರುಣ್ ಸಿಂಗ್ ವಿಶ್ವಾಸ

01:41 PM Jun 05, 2022 | Team Udayavani |

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಎಲ್ಲ 3 ಅಭ್ಯರ್ಥಿಗಳು ವಿಜೇತರಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಟ್ಟಿದೆ. ಕೇಂದ್ರದ ಬಿಜೆಪಿ ಸರಕಾರ ಮತ್ತು ಬಸವರಾಜ ಬೊಮ್ಮಾಯಿ ಅವರ ಸರಕಾರ ಮಾಡಿದ ಉತ್ತಮ ಕಾರ್ಯಗಳನ್ನು ಗಮನದಲ್ಲಿಟ್ಟು ಶಾಸಕರು ಬಿಜೆಪಿ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ 8 ವರ್ಷಗಳನ್ನು ಪೂರೈಸಿದೆ. ಬಡವರು, ರೈತರು, ಶೋಷಿತರು ಮತ್ತು ದಲಿತರು ಸೇರಿದಂತೆ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.

ಬಿಜೆಪಿ ವತಿಯಿಂದ 15 ದಿನಗಳ ಕಾಲ ಮೋದಿಯವರ ಸಾಧನೆಯನ್ನು ಜನರಿಗೆ ತಿಳಿಸುವ ಅಭಿಯಾನವನ್ನು ನಡೆಸಲಾಗುತ್ತಿದೆ. ಪ್ರತಿ ಗ್ರಾಮದ ಪ್ರತಿಯೊಂದು ಮನೆಯನ್ನು ಸಂಪರ್ಕಿಸಿ ಸಾಧನೆಯನ್ನು ತಿಳಿಸುವ ಕಾರ್ಯ ನಡೆಯುತ್ತಿದೆ ಎಂದರು. ಇದರ ಜೊತೆಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದ ಸಾಧನೆಗಳು ಮತ್ತು ಯೋಜನೆಗಳ ಕುರಿತು ಜನರಿಗೆ ಮಾಹಿತಿ ಕೊಡಲಾಗುತ್ತದೆ ಎಂದು ತಿಳಿಸಿದರು.

ಸಿದ್ದರಾಮಯ್ಯರಿಗೆ ರಾಜಕೀಯ ತಿಕ್ಕಲುತನ: ಛಲವಾದಿ ನಾರಾಯಣಸ್ವಾಮಿ

Advertisement

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಸಂಪೂರ್ಣವಾಗಿ ತಿಕ್ಕಲುತನದಿಂದ (ತಲೆ ಕೆಟ್ಟವರು) ಮಾತನಾಡುತ್ತಿದ್ದಾರೆ. ಅವರಿಗೆ ಎಲ್ಲಿ ಚಿಕಿತ್ಸೆ ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಸಿದ್ದರಾಮಯ್ಯರಿಗೆ ರಾಜಕೀಯ ತಿಕ್ಕಲುತನ ಹಿಡಿದಿದೆ. ಈಗ ಅವರು ಸಂಪೂರ್ಣವಾಗಿ ತಲೆ ಕೆಡಿಸಿಕೊಂಡು ಕುಳಿತಿದ್ದಾರೆ. ಬಹಳ ಚೆನ್ನಾಗಿ ಆಡಳಿತ ಕೊಟ್ಟವರೆಂದು ಅವರು ಹೇಳಿಕೊಂಡಿದ್ದರು. ಹಾಗಿದ್ದರೆ ಜನರು ಅವರನ್ನು ಯಾಕೆ ಸೋಲಿಸಿದ್ದಾರೆ? ಅದಿನ್ನೂ ಅವರಿಗೆ ಅರ್ಥ ಆಗಿಲ್ಲವೇ ಎಂದು ಪ್ರಶ್ನಿಸಿದರು.

ಎಂಟ್ಹತ್ತು ಬಜೆಟ್ ಕೊಟ್ಟಿದ್ದೇನೆ ಎಂದು ಹೆಗ್ಗಳಿಕೆಯಿಂದ ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ಏನು ಕೊಟ್ಟಿದ್ದರು? ಜನರಿಗೆ ಅರ್ಥವಾಗದ ಬಜೆಟ್ ಕೊಟ್ಟಿದ್ದರೇ? ಐಎಎಸ್ ಅಧಿಕಾರಿಗಳು ಅಥವಾ ಹಣಕಾಸು ತಜ್ಞರು ಬರೆದುಕೊಟ್ಟಿದ್ದನ್ನು ನಿಂತು ಓದಿದ್ದರೇ? ಎಂದು ಕೇಳಿದರು. ಸಿದ್ದರಾಮಯ್ಯರಿಗೆ ಅರ್ಥವಾಗುವುದು ಚಡ್ಡಿ. ಇನ್ನೂ ಏನೇನಿದೆಯೋ ಅಂಥವು ಮಾತ್ರ ಅವರಿಗೆ ಅರ್ಥವಾಗುತ್ತದೆ ಎಂದು ಟೀಕಿಸಿದರು.

ಚಡ್ಡಿ ಸುಡುವ ಆಂದೋಲನ ಮಾಡುವುದಾಗಿ ಸಿದ್ದರಾಮಯ್ಯ ನಿನ್ನೆ ಹೇಳಿಕೊಂಡಿದ್ದಾರೆ. ಅವರು ಯಾಕೆ ಚೆಡ್ಡಿ ವರೆಗೆ ಹೋದರು? ಅವರ ಚಡ್ಡಿಯನ್ನು ಕಿತ್ತುಕೊಂಡು ಚಾಮುಂಡೇಶ್ವರಿ ಕ್ಷೇತ್ರದ ಜನತೆ ಕಿತ್ತುಕೊಂಡು ಕಳುಹಿಸಲಿಲ್ಲವೇ? ಈಗ ಅವರಿಗೆ ಅಲ್ಲಿ ಲುಂಗಿ- ಪಂಚೆ ಮಾತ್ರ ಉಳಿದಿದೆ ಎಂದು ವ್ಯಂಗ್ಯವಾಗಿ ತಿಳಿಸಿದರು.

ಸಿದ್ದರಾಮಯ್ಯರಿಗೆ ಬೇರೇನೂ ಕೆಲಸ ಇಲ್ಲವೇ? ಕಾಂಗ್ರೆಸ್‍ನವರಿಗೆ ಉಳಿದಿರುವುದು ಕೇವಲ ಚಡ್ಡಿ ಮಾತ್ರ. ಅದನ್ನೂ ಯಾಕೆ ಸುಡ್ತೀರಿ? ಎಂದು ಪ್ರಶ್ನಿಸಿದರು. ಚಡ್ಡಿ ಸುಡುವುದಕ್ಕೆ ಡಿ.ಕೆ.ಶಿವಕುಮಾರ್ ಅವರ ಬೆಂಬಲವಿದೆಯೇ ಎಂದು ಕೇಳಿದರು. ಸಿದ್ದರಾಮಯ್ಯರಿಗೆ ಚಡ್ಡಿ ಕಳುಹಿಸಿಕೊಡಲು ಎಸ್.ಸಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಸಿದ್ದರಾಮಯ್ಯರವರು ಚಡ್ಡಿ ಸುಡುವ ಮೊದಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು. ಈಗಾಗಲೇ ನಾವು ಕೋವಿಡ್ ಸಂಕಷ್ಟ ಎದುರಿಸುತ್ತಿದ್ದೇವೆ. ಚಡ್ಡಿ ಸುಡುವ ಮೂಲಕ ಆಗುವ ಮಾಲಿನ್ಯದಿಂದ ಜನರಿಗೆ ತೊಂದರೆ ಆಗಬಾರದು ಎಂದು ಮನವಿ ಮಾಡಿದರು. ಮೋರ್ಚಾದ ಜಿಲ್ಲಾ ಅಧ್ಯಕ್ಷರು ಸಂಗ್ರಹಿಸಿದ ಚಡ್ಡಿಗಳನ್ನು ನಮ್ಮ ಮುಖಂಡರು ಸಿದ್ದರಾಮಯ್ಯರಿಗೆ ತಲುಪಿಸಲಿದ್ದಾರೆ ಎಂದರು.

ಅಂಬೇಡ್ಕರ್ ಎಂದರೆ ಸಂವಿಧಾನ, ಸಾಮಾಜಿಕ ನ್ಯಾಯ, ಹೋರಾಟಗಳಿಂದ ದೇಶಕ್ಕೆ ಚಿರಪರಿಚಿತರು. ಅಂಬೇಡ್ಕರ್ ಎಂದರೆ ನಮಗೆ ಪ್ರಾಣಕ್ಕಿಂತ ಪ್ರಿಯರಾದವರು. ಆದರೆ, “ಒಲ್ಲದವನಿಗೆ ಮೊಸರಿನಲ್ಲೂ ಕಲ್ಲು” ಎಂಬಂತಾಗಿದೆ. ಅಂಬೇಡ್ಕರ್ ಹೆಸರಿನಲ್ಲೇ ಸರ್ವವೂ ಇದೆ. ಬಾಬಾ ಸಾಹೇಬ, ಡಾಕ್ಟರ್, ಸಂವಿಧಾನಶಿಲ್ಪಿ ಎಂಬುದು ಅವರ ಹೆಸರಿನಲ್ಲೇ ಅಡಗಿವೆ ಎಂದು ಪಠ್ಯಪುಸ್ತಕ ಸಂಬಂಧದ ಪ್ರಶ್ನೆಗೆ ಅವರು ಉತ್ತರ ನೀಡಿದರು.

ರಾಷ್ಟ್ರದಲ್ಲಿ ಮಾನ್ಯ ಮೋದಿಜಿಯವರ 8ನೇ ವರ್ಷದ ಆಡಳಿತಾತ್ಮಕ ಸಾಧನೆಗಳ ಸಂಬಂಧದಲ್ಲಿ ಇವತ್ತು ಕೇವಲ ರಾಷ್ಟ್ರ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಮೋದಿಯವರನ್ನು ಪ್ರಶಂಸೆ ಮಾಡುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಸಂತೋಷ ಪಡುವ ಸಂದರ್ಭದಲ್ಲಿ ನಮ್ಮ ದೇಶದವರೇ ಆದ ಕಾಂಗ್ರೆಸ್ ನಾಯಕರಿಗೆ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್‍ನವರು ಸಂಪೂರ್ಣವಾಗಿ ಧೈರ್ಯಗೆಟ್ಟಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next