Advertisement

ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ 16 ಸ್ಥಾನ ನಿಶ್ಚಿತ: ಕಾರಜೋಳ

02:30 PM Nov 30, 2021 | Shwetha M |

ವಿಜಯಪುರ: ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ವಿಜಯಪುರ ಸೇರಿದಂತೆ ರಾಜ್ಯದಲ್ಲಿ 16 ಸ್ಥಾನ ಗೆಲ್ಲಲಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿ ಸದಸ್ಯತ್ವದ ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಒಬ್ಬರನ್ನೇ ಕಣಕ್ಕಿಳಿಸಿದ್ದು, ಬಿಜೆಪಿ ಸದಸ್ಯ ಮತದಾರರು ಶೇ. 60ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಪಕ್ಷದಿಂದ ನಮ್ಮ ಅಭ್ಯರ್ಥಿ ಪಿ.ಎಚ್‌. ಪೂಜಾರ ಅವರ ಗೆಲುವು ನಿಶ್ಚಿತ ಎಂದರು.

ವಿಜಯಪುರ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯಲ್ಲಿ 2200, ಬಾಗಲಕೋಟೆ ಜಿಲ್ಲೆಯಲ್ಲಿ 2100 ಸದಸ್ಯರು, 9 ಶಾಸಕರು, ಎರಡೂ ಜಿಲ್ಲೆಯ ಇಬ್ಬರು ಸಂಸದರು ಸೇರಿ ಸುಮಾರು 4300 ಮತದಾರರಿದ್ದಾರೆ. ಅವಳಿ ಜಿಲ್ಲೆಯ 7300 ಮತದಾರರಲ್ಲಿ 4300 ಮತದಾರರು ಬಿಜೆಪಿಗೆ ಸೇರಿದ್ದು, ನಮ್ಮ ಶಕ್ತಿಯ ಆಧಾರದಲ್ಲಿ ಗೆಲ್ಲುವ ಸಾಮರ್ಥ್ಯಕ್ಕೆ ತಕ್ಕಂತೆ ಬಿಜೆಪಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಸರ್ಕಾರಗಳ ಸಾಧನೆಗಳು ಮೇಲ್ಮನೆ ಚುನಾವಣೆಯಲ್ಲಿ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗಲಿದೆ. ಅಲ್ಲದೇ ಗೆಲ್ಲುವ ಶಕ್ತಿಯನ್ನು ಮನವರಿಕೆ ಮಾಡಿಕೊಂಡೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ವಿಜಯ ನಮ್ಮದೇ ಎಂದರು.

ಇನ್ನು ವಿಜಯಪುರ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಮ್ಮ ಪಕ್ಷದ ಇನ್ನೋರ್ವ ವ್ಯಕ್ತಿಯನ್ನು ಕಣದಿಂದ ಹಿಂದೆ ಸರಿಸಿದ್ದೇವೆ. ಆದರೆ ವಿರೋಧಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯ ಭೀತಿಯಲ್ಲಿದೆ ಹಾಗೂ ಸೋಲುವ ಆತಂಕ ಎದುರಿಸುತ್ತಿದೆ ಎಂದರು.

Advertisement

ಕಾಂಗ್ರೆಸ್‌ ಬಂಡುಕೋರ ಮಲ್ಲಿಕಾರ್ಜುನ ಲೋಣಿ ಅವರನ್ನು ಕಣದಿಂದ ಹಿಂದೆ ಸರಿದು ಅವಿರೋಧ ಆಯ್ಕೆಗೆ ಸಹಕರಿಸಿ ಎಂದು ಮನವಿ ಮಾಡಿದ್ದೆವು. ನಾನು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಲೋಣಿ ಅವರಿಗೆ ಕರೆ ಮಾಡಿದ್ದು ಸತ್ಯ. ಲೋಣಿ ಅವರು ತಾವು ಕಾಂಗ್ರೆಸ್‌ ನಿಷ್ಠನಾಗಿದ್ದು, ನಿಮ್ಮ ಮನವಿಗೆ ಸ್ಪಂದಿಸುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ ಈ ಹಂತದಲ್ಲಿ ಬಿಜೆಪಿ ಮತ್ತೂಂದು ಮತವನ್ನು ಲೋಣಿ ಅವರಿಗೆ ಕೊಡುವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಸುನೀಲಗೌಡ ಅವರಿಗೆ ಸೋಲಿನ ಭೀತಿ ಆವರಿಸಿದೆ. ಪಕ್ಷದ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇರುವುದು ಅವರಲ್ಲಿ ಸೋಲಿನ ಭೀತಿ ಹುಟ್ಟುವಂತೆ ಮಾಡಿದೆ. ಕೈ ಪಕ್ಷದ ಆಂತರಿಕ ಸಂಘರ್ಷ ನಮ್ಮ ಬಿಜೆಪಿ ಅಭ್ಯರ್ಥಿ ಸುಲಭ ಗೆಲುವಿಗೆ ಸಹಕಾರಿ ಆಗಲಿದೆ ಎಂದರು.

ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಎಚ್‌. ಪೂಜಾರ, ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಶಾಸಕ ರಮೇಶ ಭೂಸನೂರ, ಮಾಜಿ ಸಚಿವ ಜಿ.ಎಸ್‌. ನ್ಯಾಮಗೌಡ, ಪಕ್ಷದ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next