ನೆಲಮಂಗಲ: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವುದು, ಪಕ್ಷವೇ ಆಡಳಿತದಲ್ಲಿ ಇದ್ರೂ ಹಿಂದೂ ಪರ ಸಂಘಟನೆ, ಬಿಜೆಪಿ ಕಾರ್ಯಕರ್ತರ ಜೀವಕ್ಕೆ ರಕ್ಷಣೆ ಇಲ್ಲದಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರಾಹುಲ್‌ಗೌಡ ನೇತೃತ್ವದಲ್ಲಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದರು.
ಈ ವೇಳೆ ಮಾತನಾಡಿದ ರಾಹುಲ್ ಗೌಡ, ಬಿಜೆಪಿ ಅಧಿಕಾರಕ್ಕೆ ಬಂದರೇ ಜಿಹಾದಿಗಳನ್ನು ಮಟ್ಟ ಹಾಕುವುದರ ಜೊತೆಗೆ ಹಿಂದೂಪರ ಸಂಘಟನೆ, ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡಲಾಗುತ್ತದೆ ಎಂಬ ನಂಬಿಕೆ ಸುಳ್ಳಾಗಿದೆ. ಕಾರ್ಯಕರ್ತರ ಹತ್ಯೆ ನಡೆದಾಗ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳುವ ಸರ್ಕಾರ, ಕ್ರಮಜರುಗಿಸುವಲ್ಲಿ ವಿಫಲವಾಗಿದೆ. ಇದರಿಂದಲೇ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಯುವ ಮೋರ್ಚಾ ಕಾರ್ಯಕರ್ತರು ಸಾಮೂಹಿಕವಾಗಿ ಅಧ್ಯಕ್ಷ ಹೇಮಂತ್‌ಕುಮಾರ್‌ಗೆ ರಾಜೀನಾಮೆ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರದ ಧೋರಣೆ ಖಂಡಿಸಿದರು.
ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಕ್ಷಿತ್ ಮಾತನಾಡಿ, ಪಕ್ಷದ ಕಾರ್ಯಕರ್ತ ಪ್ರವೀಣ್ ಹತ್ಯೆ ನಮಗೆ ಭಯದ ವಾತಾವರಣ ಸೃಷ್ಟಿಸಿದೆ. ಒಬ್ಬ ಕಾರ್ಯಕರ್ತನನ್ನು ಉಳಿಸಿಕೊಳ್ಳದ ಸರ್ಕಾರ, ಆತ ಹತ್ಯೆಆದ ತಕ್ಷಣವಾದರೂ ಮಾತಿನಲ್ಲಿ ಹೇಳುವ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಮೌನವಾಗಿರುವುದು ನಮಗೆ ಬೇಸರ ತರಿಸಿದೆ.
ಹೀಗಾಗಿ ಬಿಜೆಪಿಯಲ್ಲಿ ನೀಡಿರುವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈಗಲೂ ಕ್ರಮತೆಗೆದುಕೊಳ್ಳದಿದ್ದರೇ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಉಪಾಧ್ಯಕ್ಷ ಜಗದೀಶ್ ಚೌಧರಿ, ಕಾರ್ಯದರ್ಶಿ ರಕ್ಷಿತ್, ಜಿಲ್ಲಾ ಖಜಾಂಚಿ ವಿನೋದ್, ತಾಲೂಕು ಉಪಾಧ್ಯಕ್ಷ ರುದ್ರೇಶ್, ಹರೀಶ್, ಪ್ರಸಾದ್, ಸದಸ್ಯರಾದ ರಾಹುಲ್, ಪ್ರಜ್ವಲ್, ವಿನೋದ್, ಮಂಜು, ತೇಜಸ್, ಅರುಣ್, ಪುನೀತ್, ಮಹೇಶ್ ಮತ್ತಿತರರು ರಾಜೀನಾಮೆ ನೀಡಿದರು.