ಮಾಲೂರು: ತಾಲೂಕು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಜಿಲ್ಲಾಧ್ಯಕ್ಷರ ಮುಂದೆಯೇ ಪಕ್ಷದ 2 ಬಣದ ಕಾರ್ಯಕರ್ತರು ಕೈ ಕೈ ಮೀಲಾಯಿಸಿಕೊಂಡ ಘಟನೆ ನಡೆಯಿತು.
ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯು ಸಂಪೂರ್ಣ ಗೊಂದಲಮಯವಾಗಿತ್ತು. ತಾಲೂಕು ಅಧ್ಯಕ್ಷರ ಹೆಸರನ್ನು ಪ್ರಸ್ತಾಪಿಸದ ಹಿರಿಯ ಮುಖಂಡ ಹನುಮಪ್ಪ ಅವರ ಭಾಷಣದಿಂದಲೇ ಗೊಂದಲ ಆರಂಭವಾಯಿತು. ಸಭೆ ಉದ್ದೇಶಿಸಿ ಜಿಲ್ಲಾಧ್ಯಕ್ಷರು ಮಾತನಾಡುವ ವೇಳೆ ಮುಖಂಡ ಕೂರಿ ಮಂಜುನಾಥ್ ಅವರು ಟಿಕೆಟ್ ಯಾರಿಗೆ ಎಂದು ಫೈನಲ್ ಮಾಡಿ ಗೊಂದಲ ನಿವಾರಣೆ ಮಾಡಿ ಎಂದು ಒತ್ತಡ ಹಾಕಿದರು.
ಈ ವೇಳೆ, ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡ, ಹೂಡಿ ವಿಜಯಕುಮಾರ್ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟಿತು. ಒಂದು ಹಂತದಲ್ಲಿ ಉಭಯ ಬಣದ ನಡುವೆ ಜೋರು ಗಲಾಟೆ ನಡೆದು ಕೈಕೈ ಮಿಸಲಾಯಿಸಿದರು.
ಪೊಲೀಸರ ಮಧ್ಯ ಪ್ರವೇಶ: ಚುನಾವಣಾ ಉಸ್ತುವಾರಿ ಹಾಗೂ ಜಿಲ್ಲಾ ನಾಯಕರ ಮುಂದೆಯೇ 2 ಬಣದ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡು ಜಿಲ್ಲಾ ನಾಯಕರಿಗೆ ಮುಜುಗರ ತಂದಿದ್ದಲ್ಲದೆ, ಪೊಲೀಸರು ಮಧ್ಯ ಪ್ರವೇಶ ಮಾಡುವವರೆಗೂ ಗೊಂದಲ ಬಿಗುವಿ ನಿಂದ ಕೂಡಿತ್ತು. ಇನ್ಸ್‌ಪೆಕ್ಟರ್ ಚಂದ್ರದರ್ ಮಧ್ಯ ಪ್ರವೇಶಿಸಿ ಗೊಂದಲ ತಿಳಿಗೊಳಿಸಿದರು.
Related Articles
ನಡತೆ ಬದಲಿಸಿಕೊಳ್ಳದಿದ್ದರೆ ಕ್ರಮ: ಬಿಜೆಪಿ ಚುನಾ ವಣಾ ಉಸ್ತುವಾರಿ ನರೇಂದ್ರ ರಂಗಪ್ಪ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ರೀತಿಯ ನಡೆ ಸರಿಯಾದುದ್ದಲ್ಲ, ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸುವ ಮಟ್ಟಕ್ಕೆ ಕಾರ್ಯಕರ್ತರು ಇಳಿದಿದ್ದು ಒಪ್ಪಲು ಸಾಧ್ಯವಿಲ್ಲ. ನಿಮ್ಮ ನಡತೆಗಳನ್ನು ಬದಲಾಯಿಸಿ ಕೊಳ್ಳದೇ ಹೋದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.
ಯಾರಿಗೇ ಟಿಕೆಟ್ ಕೊಟ್ರೂ ಕೆಲಸ ಮಾಡಿ: ಮಾಲೂರು ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ನಿಮ್ಮ ಈ ನಡೆಯಿಂದಾಗಿ ನಾವು ಕ್ಷೇತ್ರವನ್ನು ಕಳೆದುಕೊಳ್ಳ ಬೇಕಾಗುತ್ತದೆ. ಟಿಕೆಟ್ ನೀಡುವುದು ಪಕ್ಷದ ಹೈಕಮಾಂಡ್, ಅವರು ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ತಾಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ ಮಾತನಾಡಿ, ಮಾ.12ರಂದು ತಾಲೂಕಿಗೆ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದ್ದು, ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಯಶಸ್ವಿಯಾಗಿ ಕಳುಹಿಸಿಕೊಡಿ: ಮಾಜಿ ಶಾಸಕ ಕೆ. ಎಸ್.ಮಂಜುನಾಥ್‌ಗೌಡ ಮಾತನಾಡಿ, ಕೋಲಾರ ಜಿಲ್ಲೆಯ ವಿಜಯ ಸಂಕಲ್ಪ ಯಾತ್ರೆ ತಾಲೂಕಿನಿಂದ ಆರಂಭಗೊಳ್ಳಲಿದ್ದು, ಹೊಸಕೋಟೆ ರಸ್ತೆಯ ಮೂಲಕ ಪಟ್ಟಣಕ್ಕೆ ಆಗಮಿಸಿ, ನಂತರ ಕೋಲಾರಕ್ಕೆ ತೆರಳಲಿದೆ. ಯಾತ್ರೆಯನ್ನು ಕಾರ್ಯಕರ್ತರು ಯಶಸ್ವಿಯಾಗಿ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಜಯ ಸಂಕಲ್ಪ ಯಾತ್ರೆ ಜಿಲ್ಲಾ ಉಸ್ತುವಾರಿ ಕೆ.ಚಂದ್ರಾರೆಡ್ಡಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಹೂಡಿ ವಿಜಯಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ರಾಮಮೂರ್ತಿ, ಟಿಕೆಟ್ ಆಕಾಂಕ್ಷಿ ಆರ್ .ವಿ.ಭೂತಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಆರಾಧ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಅಂಬರೀಶ್ ರೆಡ್ಡಿ, ವೆಂಕಟೇಶ್, ಮಾಜಿ ಅಧ್ಯಕ್ಷ ಬಿ.ಆರ್.ವೆಂಕಟೇಶ್, ತಿಮ್ಮನಾಯಕನಹಳ್ಳಿ ನಾರಾಯಣ ಸ್ವಾಮಿ, ಗೋಪಾಲಕೃಷ್ಣ, ಅಮುದಾ ವೇಣು, ಪದ್ಮಾವತಿ, ಅನಿತಾ ನಾಗರಾಜ್, ಮುಖಂಡ ರಾದ ದೇವರಾಜ್ ರೆಡ್ಡಿ, ರಾಜಾರಾಂ, ಆರ್.ಪ್ರಭಾಕರ್, ಆಗ್ರಿನಾರಾಯಣಪ್ಪ, ಪಿ.ನಾರಾಯಣ ಸ್ವಾಮಿ, ಚಿನ್ನಸ್ವಾಮಿಗೌಡ, ಟಿ.ಬಿ.ಕೃಷ್ಣಪ್ಪ, ದಿಬ್ಬಯ್ಯ, ಹರೀಶ್‌ಗೌಡ, ವೇಮನ, ಭಾನುತೇಜಾ, ಸಿ.ಪಿ.ನಾಗರಾಜ್, ಆಲೂಗಡ್ಡೆ ಮಂಜುನಾಥ್, ಪ್ರಸನ್ನ, ಭಾರತಮ್ಮ, ನೀಲಾಚಂದ್ರ ಮುಖಂಡರು ಇದ್ದರು.