Advertisement

ಎಚ್‌ಡಿಕೆ “ದಂಗೆ’ಗೆ ಪ್ರತಿಭಟನೆಯ ತಿರುಗೇಟು

06:00 AM Sep 22, 2018 | |

ಬೆಂಗಳೂರು: ಬಿಜೆಪಿ ವಿರುದ್ಧ ಜನರು “ದಂಗೆ’ ಏಳಬೇಕು ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿಯಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ. ಕುಮಾರಸ್ವಾಮಿ ಹೇಳಿಕೆ ವಿರುದ್ಧ  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ವಜುಭಾಯಿ ವಾಲಾಗೆ ದೂರು ಸಲ್ಲಿಸಿದರೆ, ಪಕ್ಷದ ಕಾರ್ಯಕರ್ತರು ಸಿಎಂ ವಿರುದ್ಧ ಬೀದಿಗಿಳಿದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.

Advertisement

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಕುಮಾರಸ್ವಾಮಿ, ಕಾಂಗ್ರೆಸ್‌, ಜೆಡಿಎಸ್‌ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ವಿರುದ್ಧ  ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಸಂಸದೆ
ಶೋಭಾ ಕರಂದ್ಲಾಜೆ, ಮಾಜಿ ಸಚಿವ ಬಿ.ಸೋಮಶೇಖರ್‌, ರವಿಕುಮಾರ್‌ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.
ಮೈಸೂರಿನ ಗಾಂಧಿಚೌಕದಲ್ಲಿ ಶಾಸಕರಾದ ರಾಮದಾಸ್‌, ನಾಗೇಂದ್ರ,ಹರ್ಷವರ್ಧನ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಡ್ಯದ ಸರ್‌ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬಿಜೆಪಿ ಜಿಲ್ಲಾಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗದ ಗೋಪಿವೃತ್ತದಲ್ಲಿ ಶಾಸಕ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ದಂಗೆ ಏಳಬೇಕೆಂದು ಕರೆ ನೀಡಿದ ಕುಮಾರಸ್ವಾಮಿಯನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.

ನರಗುಂದದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಿ.ಸಿ.ಪಾಟೀಲ,ಕುಮಾರಸ್ವಾಮಿ ಹೇಳಿಕೆ ಆಧರಿಸಿ ರಾಜ್ಯಪಾಲರು ಕೂಡಲೇ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಉಡುಪಿ, ಮಂಗಳೂರು, ಕಲಬುರಗಿ, ರಾಯಚೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ,ಬೆಳಗಾವಿ, ಚಿಕ್ಕಬಳ್ಳಾಪುರ, ಕೋಲಾರ, ಕೊಪ್ಪಳ, ಯಾದಗಿರಿ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next