Advertisement

ಎರಡು ದಶಕಗಳ ಬಳಿಕ ಅರಳಿದ ಕಮಲ!

05:06 PM May 14, 2023 | Team Udayavani |

ಸಕಲೇಶಪುರ: ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 19 ವರ್ಷಗಳ ನಂತರ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಿಗೆ ಶಾಸಕ ಸ್ಥಾನಕ್ಕೆರುವ ಅದೃಷ್ಟ ಒಲಿದು ಬಂದಿದೆ.

Advertisement

ಸಿಮೆಂಟ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ನಂತರ ಸಿಮೆಂಟ್‌ ಅಂಗಡಿ ತೆರೆಯುವ ಮುಖಾಂತರ ಉದ್ಯಮಿಯಾಗಿ ಬೆಳೆದು ನಂತರ ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2016ರಲ್ಲಿ ಕ್ಯಾಮನಹಳ್ಳಿ ತಾ.ಪಂ ಕ್ಷೇತ್ರದಿಂದ ತಾ.ಪಂ ಸದಸ್ಯನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್‌ ಘೋಷಣೆ ಮಾಡಿದಾಗ ಬಹುತೇಕರು ಮೂಗು ಮುರಿದವರೆ ಹೆಚ್ಚು, ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಬಂದಿದ್ದ ಉದ್ಯಮಿ ನಾರ್ವೆ ಸೋಮಶೇಖರ್‌ ಕ್ಷೇತ್ರದೆಲ್ಲೆಡೆ ಬಳ್ಳಾರಿ ಶೈಲಿಯ ರಾಜಕಾರಣ ಮಾಡಿ ಬಿಜೆಪಿ ಹವಾ ಎಬ್ಬಿಸಿದ್ದರು ಸಹ ಅಂತಿಮ ಕ್ಷಣದಲ್ಲಿ ಮೈಮರೆತಿದ್ದರಿಂದ ಪರಾಜಿತಗೊಂಡಿದ್ದರು. ಆದರೆ ಇದಾದ ನಂತರ ಕ್ಷೇತ್ರದಲ್ಲಿ ಅವರು ಅಷ್ಟಾಗಿ ಸುಳಿಯದಿದ್ದ ಹಿನ್ನೆಲೆಯಲ್ಲಿ ಕೋವಿಡ್‌ ಲಾಕ್‌ ಡೌನ್‌ ಸಂರ್ಧಭದಲ್ಲಿ ನಿರಂತರವಾಗಿ ಜನರಿಗೆ ಸೇವೆ ಸಲ್ಲಿಸಿದಲ್ಲದೆ ಹಾಸನದ ಮಾಜಿ ಶಾಸಕ ಪ್ರೀತಮ್‌ ಗೌಡರವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಸಮಾಜಸೇವೆ ಹಾಗೂ ಪಕ್ಷ ಸಂಘಟನೆ ಮಾಡಿದರು.

ಟಿಕೆಟ್‌ ಪಡೆಯಲು ಪ್ರೀತಂ ಕೃಪಾಕಟಾಕ್ಷ: ನಾರ್ವೆ ಸೋಮಶೇಖರ್‌ಗೆ ಹೈಕಮಾಂಡ್‌ ಮೂಲಕ ಬಿಜೆಪಿ ಟಿಕೇಟ್‌ ದೊರಕುವುದು ಬಹುತೇಕ ಖಚಿತವಾದಾಗ ಪ್ರೀತಮ್‌ ಗೌಡ ಶಿಷ್ಯನ ಬೆನ್ನಿಗೆ ನಿಂತು ಹೈಕಮಾಂಡ್‌ಗೆ ತಾನೇ ಗೆಲ್ಲಿಸುವ ಭರವಸೆ ನೀಡಿದರು ಮತ್ತು ಸಂಘ ಪರಿವಾರ ಸಹ ಸಿಮೆಂಟ್‌ ಮಂಜು ಪರ ಟಿಕೇಟ್‌ ಬೇಡಿಕೆಯಿಟ್ಟಿದ್ದರಿಂದ ಸಿಮೆಂಟ್‌ ಮಂಜುಗೆ ಟಿಕೆಟ್‌ ಪಡೆಯಲು ಸುಲಭವಾಯಿತು.

ಟಿಕೆಟ್‌ ದೊರೆತಾಗ ಕೈ ಕೊಟ್ಟ ನಾಯಕರು ಜೊತೆಗೆ ನಿಂತ ಕಾರ್ಯಕರ್ತರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೆ ಸಿಮೆಂಟ್‌ ಮಂಜುಗೆ ಟಿಕೇಟ್‌ ದೊರಕಿದರು ಬಹುತೇಕ ಘಟಾನುಘಟಿ ನಾಯಕರು ಸಿಮೆಂಟ್‌ ಮಂಜು ಪರ ಕೆಲಸ ಮಾಡಲು ಮುಂದಾಗಲಿಲ್ಲ. ಬಹುತೇಕ ನಾಯಕರು ಸಿಮೆಂಟ್‌ ಮಂಜು ವಿರುದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪರ ಕೆಲಸ ಮಾಡಿದರೆ ಇನ್ನು ಕೆಲವು ಮುಖಂಡರು ತಟಸ್ಥರಾದರು.ಆದರೆ ಇದ್ಯಾವುದಕ್ಕೂ ಅಂಜದ ಸಿಮೆಂಟ್‌ ಮಂಜು ಪ್ರತಿ ಬೂತ್‌ಗಳಲ್ಲಿ ಇದ್ದ ಬಿಜೆಪಿ ಶಕ್ತಿ ಕೇಂದ್ರದ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಹುರುಪು ತುಂಬಿದರು. ಇದರಿಂದಾಗಿ ಕ್ಷೇತ್ರದೆಲ್ಲೆಡೆ ಸಾಮಾನ್ಯ ಕಾರ್ಯಕರ್ತರು ಸಾಮಾನ್ಯ ಕಾರ್ಯಕರ್ತನಿಗಾಗಿ ಕೆಲಸ ಮಾಡಿದರು. ಅಲ್ಲದೆ ಸಂಘ ಪರಿವಾರದ ಕಾರ್ಯಕರ್ತರು ಸಹ ಸಿಮೆಂಟ್‌ ಮಂಜು ಪರ ನಿರಂತರವಾಗಿ ಕೆಲಸ ಮಾಡಿದರು.

ಹೈಕಮಾಂಡ್‌ ಪ್ರಚಾರ ಬಲ: ಸಿಮೆಂಟ್‌ ಮಂಜು ನಾಮಪತ್ರ ಸಲ್ಲಿಕೆಯ ರೋಡ್‌ ಷೋ ಪ್ರಚಾರಕ್ಕೆ ಪ್ರೀತಮ್‌ ಗೌಡ ಬಂದರೆ, ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕ್ಷೇತ್ರಕ್ಕೆ ಮೂರು ಬಾರಿ ಬಂದು ಚುನಾವಣೆ ಪ್ರಚಾರ ನಡೆಸಿದರು. ಗೃಹ ಸಚಿವ ಅಮಿತ್‌ ಷಾ ಆಲೂರಿನಲ್ಲಿ ರೋಡ್‌ ಷೋ ನಡೆಸಿದರೆ ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಮೆಂಟ್‌ ಮಂಜು ಪರ ರೋಡ್‌ ಷೋ ನಡೆಸಿದ್ದರಿಂದ ವೀರಶೈವ ಮತಗಳು ಸುಲಭವಾಗಿ ಬಿಜೆಪಿ ಪರ ಬರುವಂತಾಯಿತು. ಜೆಡಿಎಸ್‌, ಕಾಂಗ್ರೆಸ್‌ಗೆ ಸರಿಸಾಟಿಯಾಗಿ ಸಂಪನ್ಮೂಲ ವ್ಯಯ: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸರಿಸಾಟಿಯಾಗಿ ಸಂಪನ್ಮೂಲವನ್ನು ಬಿಜೆಪಿ ಅಭ್ಯರ್ಥಿ ವ್ಯಯ ಮಾಡಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು.

Advertisement

ಕೈ ಹಿಡಿದ ಕಟ್ಟಾಯ: ಕಳೆದ ಬಾರಿಗಿಂತ ಈ ಬಾರಿ ಕಟ್ಟಾಯ ಭಾಗದಲ್ಲಿ ಬಿಜೆಪಿಗೆ ಅಧಿಕ ಮತಗಳು ಬಂದಿದ್ದರಿಂದ ಬಿಜೆಪಿಗೆ ಗೆಲುವು ಸಾಧಿಸಲು ಸಾಧ್ಯವಾಯಿತು.

ಜೆಡಿಎಸ್‌ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆ: ಸಾಮಾನ್ಯ ಕಾರ್ಯಕರ್ತ ಸಿಮೆಂಟ್‌ ಮಂಜು ವಿರುದ್ದ ನಮಗೆ 30,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿವುದು ಖಚಿತ ಹಾಗೂ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ನಾರ್ವೆ ಸೋಮಶೇಖರ್‌ ಜೆಡಿಎಸ್‌ ಸೇರ್ಪಡೆಯಾಗಿದ್ದರಿಂದ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವು ಖಚಿತ ಎಂದು ಮೈಮರೆತಿದ್ದು ಆದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಪ್ರತಿ ದಿನ ಪ್ರಚಾರ ಮಾಡಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸುವ ಮುಖಾಂತರ ಬದಲಾವಣೆಗೆ ಒಂದು ಅವಕಾಶ ಕೊಡಿ ಎಂದು ಪ್ರಚಾರ ನಡೆಸಿದ್ದಲ್ಲದೆ, ಅಂತಿಮ ಕ್ಷಣದಲ್ಲಿ ಮೈಮರೆಯದೆ ಸಂಪನ್ಮೂಲ ವ್ಯಯ ಮಾಡಿದ್ದು ಬಿಜೆಪಿಗೆ ಗೆಲುವಿಗೆ ಸಹಾಯಕಾರಿಯಾಯಿತು.

ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ಅನುಕೂಲ: ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತ್ತು ನೋಟಾದಿಂದ ಸುಮಾರು 6500 ಮತಗಳನ್ನು ಪಡೆದಿದ್ದು ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದು ಬಿಜೆಪಿ ಗೆಲುವಿಗೆ ಸಹಾಯಕಾರಿಯಾಯಿತು.

ಸೋತ ಗುರು ಗೆಲುವು ಸಾಧಿಸಿದ ಶಿಷ್ಯ: ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಮ್‌ ಗೌಡ ಚುನಾವಣೆಯಲ್ಲಿ ಪರಾಜಿತರಾದರೆ ಅವರ ಶಿಷ್ಯ ಸಿಮೆಂಟ್‌ ಮಂಜು ಗೆಲುವು ಸಾಧಿಸಿದ್ದಾರೆ. ಇದರಿಂದ ಸಿಮೆಂಟ್‌ ಮಂಜು ಗೆಲುವು ಸಾಧಿಸಿದರು ಸಂಭ್ರಮಾಚರಣೆ ಮಾಡದ ಪರಿಸ್ಥಿತಿಯಲ್ಲಿದ್ದು ಗೆಲುವು ಸಾಧಿಸಿದ ತಕ್ಷಣ ಪ್ರೀತಮ್‌ ಗೌಡರ ಮನೆಗೆ ಹೋಗಿ ಅವರ ಆರ್ಶೀವಾದ ಪಡೆದು ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ಒಟ್ಟಾರೆಯಾಗಿ ಜೆಡಿಎಸ್‌ ಭದ್ರಕೋಟೆಯಾಗಿದ್ದ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 19 ವರ್ಷಗಳ ನಂತರ ಕಮಲ ಅರಳಿದ್ದು ಇದರಿಂದ ಕಾರ್ಯಕರ್ತರು ಸಂಭ್ರಮಚರಣೆ ಮಾಡುತ್ತಿದ್ದಾರೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಸಿಮೆಂಟ್‌ ಮಂಜು ರಾಜ್ಯದ ಘಟಾನುಘಟಿ ನಾಯಕರು ಪರಾಜಿತಗೊಂಡ ಸಂರ್ಧಭದಲ್ಲಿ ಗೆಲುವು ಸಾಧಿಸಿರುವುದು ಎದುರಾಳಿಗಳನ್ನು ಆಶ್ಚರ್ಯಕ್ಕೆ ಈಡು ಮಾಡಿದೆ. ಅದೃಷ್ಟ ದ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಸಿಮೆಂಟ್‌ ಮಂಜು ತೀವ್ರಾ ಹಣಾಹಣಿಯಲ್ಲಿ ಗೆಲುವು ಸಾಧಿಸಿದ್ದಾರೆ.

ಸುಧೀರ್‌ ಎಸ್‌.ಎಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next