ಬೆಳಗಾವಿ: ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು ನಿಜ. ಆದರೆ ಜೆಡಿಎಸ್ ಸೇರ್ಪಡೆಯಾಗುತ್ತೇನೆ ಎಂಬುದರಲ್ಲಿ ಹುರುಳಿಲ್ಲ. “ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ದಲ್ಲಿ ಸಚಿವರಾಗಿದ್ದರೂ ಅದನ್ನು ಬಿಟ್ಟು ಬಿಜೆಪಿಗೆ ಬಂದು ಸರ್ಕಾರ ರಚನೆ ಆಗುವಂತೆ ಮಾಡಿದ್ದೇನೆ. ಈಗ ಮತ್ತೆ ಮಂತ್ರಿ ಮಾಡಿ ಎಂದು ಯಾರ ಬಳಿಯೂ ಹೋಗಿಲ್ಲ. ಬೇಡಿಕೆ ಇಟ್ಟಿಲ್ಲ ಎಂದರು.
ಬಿಜೆಪಿ ನಾಯಕರು ನನ್ನನ್ನು ಮಂತ್ರಿಯನ್ನಾಗಿ ಮಾಡಲಿ ಅಥವಾ ಬಿಡಲಿ ನಾನಂತೂ ಪಕ್ಷ ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. 2023ರ ಚುನಾವಣೆಯಲ್ಲಿ ಪಕ್ಷವು ನನಗೆ ಪ್ರಮುಖ ಜವಾಬ್ದಾರಿ ಕೊಡಲಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದರು.
ಕೆಲವರು ನಾನು ಜೆಡಿಎಸ್ ಸೇರುತ್ತೇನೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು ನಿಜ. ಅವರಿಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ನಿಮ್ಮ ಉದ್ದೇಶದಂತೆ ನೀವು ಕೆಲಸ ಮಾಡಿ. ನಮ್ಮ ಉದ್ದೇಶದಂತೆ ನಾವು ಮಾಡುತ್ತೇವೆ. ಇಬ್ಬರ ಉದ್ದೇಶವೂ ಒಂದೇಯಾಗಿದೆ. ಅದು ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂಬುದು. ಈ ನಿಟ್ಟಿನಲ್ಲಿ ನಾವು ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
Related Articles
1994ರಲ್ಲಿಯೇ ದೇವೇಗೌಡರು ನನಗೆ ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಆಗ ನಾನು ಕಾಂಗ್ರೆಸ್‌ಗೆ ನಿಷ್ಠನಾಗಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ. ಆದರೆ ಪಕ್ಷದಲ್ಲಿ ಆಂತರಿಕವಾಗಿ ನಾಯಕರ ನಡುವೆ ನಡೆಯುತ್ತಿದ್ದ ಕಚ್ಚಾಟದಿಂದ ಬೇಸತ್ತು ಬಿಜೆಪಿಗೆ ಬಂದೆ. ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಹೀಗಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.