Advertisement

ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ: ಎಕ್ಸಿಟ್ ಪೋಲ್‌ ಸಮೀಕ್ಷೆ

08:53 PM Feb 27, 2023 | Team Udayavani |

ಗುವಾಹಟಿ: ಬಿಜೆಪಿಯು ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಗೆಲುವು ಸಾಧಿಸಲಿದೆ, ಮೇಘಾಲಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

Advertisement

ಒಟ್ಟು ಸಮೀಕ್ಷೆಗಳು ನಾಗಾಲ್ಯಾಂಡ್‌ನಲ್ಲಿ ಮಿತ್ರಪಕ್ಷವಾದ ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) ಯೊಂದಿಗೆ ಬಿಜೆಪಿಯ ಮೈತ್ರಿ ಸರಕಾರವು ಅಧಿಕಾರಕ್ಕೆ ಬರಲಿದೆ ಮತ್ತು ಮೇಘಾಲಯದಲ್ಲಿ ಎರಡರಿಂದ ಕನಿಷ್ಠ ಏಳು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ತೋರಿಸಿದೆ.

ತ್ರಿಪುರಾದಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತದ ಅಂಕವನ್ನು ದಾಟಿದರೂ ಫಲಿತಾಂಶ 2018 ಕ್ಕೆ ಹೋಲಿಸಿದರೆ ನೀರಸವಾಗಿರಬಹುದು ಎನ್ನಲಾಗಿದೆ.

ಎಕ್ಸಿಟ್ ಪೋಲ್‌ಗಳು ಈಶಾನ್ಯದಲ್ಲಿ ಕಾಂಗ್ರೆಸ್ ತನ್ನ ಅತಿದೊಡ್ಡ ಹಿನ್ನಡೆಯತ್ತ ಸಾಗುತ್ತಿದೆ ಎಂದು ಸೂಚಿಸುತ್ತದೆ, ನಾಗಾಲ್ಯಾಂಡ್‌ನಲ್ಲಿ ಕೇವಲ ಒಂದು ಸ್ಥಾನ ಮತ್ತು ಮೇಘಾಲಯದಲ್ಲಿ ಆರು ಸ್ಥಾನಗಳನ್ನು ಗೆಲ್ಲುವ ಭವಿಷ್ಯ ನುಡಿದಿವೆ. ಕಳೆದ ಬಾರಿ ಅದು ಏಕೈಕ ದೊಡ್ಡ ಪಕ್ಷವಾಗಿತ್ತು.

ಮೂರೂ ರಾಜ್ಯಗಳ ಮತ ಎಣಿಕೆ ಗುರುವಾರ ನಡೆಯಲಿದೆ. 60 ಸ್ಥಾನಗಳ ತ್ರಿಪುರಾ ಅಸೆಂಬ್ಲಿಯಲ್ಲಿ ಬಿಜೆಪಿ 31 ಸ್ಥಾನಗಳನ್ನು ಪಡೆದು ಬಹುಮತದ 31 ಸಂಖ್ಯೆಯನ್ನು ಮುಟ್ಟುತ್ತದೆ ಎಂದು ಮೂರು ಎಕ್ಸಿಟ್ ಪೋಲ್‌ಗಳು ಹೇಳಿವೆ. 30 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದ ಎಡಪಕ್ಷ ಮತ್ತು ಮೈತ್ರಿಕೂಟ ಕೇವಲ 15 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ,ಈ ಚುನಾವಣೆಗೆ ಅದರ ಅನಿರೀಕ್ಷಿತ ಮಿತ್ರ ಪಕ್ಷವಾದ ಕಾಂಗ್ರೆಸ್ ಲೆಕ್ಕಕ್ಕೆ ಏನನ್ನೂ ಸೇರಿಸುವ ಸಾಧ್ಯತೆಯಿಲ್ಲ ಎಂದಿವೆ.

Advertisement

ಗ್ರೇಟರ್ ಟಿಪ್ರಾಲ್ಯಾಂಡ್‌ನ ಪ್ರಮುಖ ಬೇಡಿಕೆಯೊಂದಿಗೆ ಹಿಂದಿನ ರಾಜಮನೆತನದ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ಅವರು ಹುಟ್ಟುಹಾಕಿದ ಹೊಸ ಪಕ್ಷವಾದ ತಿಪ್ರಾ ಮೋಥಾ 13 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಕಳೆದ ಬಾರಿ, ತ್ರಿಪುರಾದಲ್ಲಿ ಬಿಜೆಪಿ 36 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಆದರೂ ಪ್ರಾದೇಶಿಕ IPFT (ತ್ರಿಪುರಾದ ಸ್ಥಳೀಯ ಪ್ರಗತಿಶೀಲ ಫ್ರಂಟ್) ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

ಮೇಘಾಲಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಾಗಲಿದ್ದು, ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) 23 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. 2018 ರಲ್ಲಿ ರಾಜ್ಯದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದ ಬಿಜೆಪಿ, ಏಳು ಸ್ಥಾನಗಳೊಂದಿಗೆ ತನ್ನ ಸಂಖ್ಯೆಯನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಲಿದೆ. ಕಾಂಗ್ರೆಸ್ ಆರು ಸ್ಥಾನಗಳನ್ನು ಗೆಲ್ಲಬಹುದು ಮತ್ತು ಹೊಸದಾಗಿ ಪ್ರವೇಶಿಸಿದ ತೃಣಮೂಲ ಕಾಂಗ್ರೆಸ್ 11 ಸ್ಥಾನಗಳೊಂದಿಗೆ ತನ್ನ ಖಾತೆಯನ್ನು ತೆರೆಯುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ.

2018 ರಲ್ಲಿ, ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿತು, ಆದರೆ ಎನ್‌ಪಿಪಿಯೊಂದಿಗೆ ಸರಕಾರವನ್ನು ರಚಿಸುವಲ್ಲಿ ಯಶಸ್ವಿಯಾಗಿತ್ತು. ಭ್ರಷ್ಟಾಚಾರದ ಆರೋಪದ ಮೇಲೆ ಸಂಗ್ಮಾ ಅವರ ಪಕ್ಷದೊಂದಿಗೆ ಭಿನ್ನಾಭಿಪ್ರಾಯದ ನಂತರ ಈ ಬಾರಿ ಅದು 60 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಂಗ್ಮಾ ಅವರ ಪಕ್ಷದೊಂದಿಗಿನ ಮೈತ್ರಿಯನ್ನು ಪುನರುಜ್ಜೀವನಗೊಳಿಸಲು ಬಿಜೆಪಿ ವಿಫಲವಾದರೆ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಕಿಂಗ್ ಮೇಕರ್ ಆಗಬಹುದು ಎನ್ನಲಾಗಿದೆ.

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟವು 42 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಎನ್‌ಪಿಎಫ್ ಆರು ಮತ್ತು ಕಾಂಗ್ರೆಸ್ ಒಂದನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಮೂರು ರಾಜ್ಯಗಳಲ್ಲಿ ಬಹುಮತಕ್ಕೆ 31 ಸ್ಥಾನಗಳು ಅಗತ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next