ಕೋಲ್ಕತಾ: ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ ಆಂತರಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಗಾಂಧಿ ಪ್ರತಿಪಕ್ಷದ ಮುಖವಾಗಿದ್ದರೆ, ಯಾರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳು ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರ “ಅತಿದೊಡ್ಡ ಟಿಆರ್ ಪಿ ಎಂದು ಹೇಳಿದ್ದಾರೆ ಎಂದು ಹೇಳಿರುವುದಾಗಿ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ರಾಹುಲ್ ಗಾಂಧಿ ನಾಯಕನಾಗಬೇಕು ಎಂದು ಬಯಸುತ್ತಿರುವ ಬಿಜೆಪಿಯು ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಬಿಜೆಪಿಯ ಮುಂದೆ ತಲೆಬಾಗುವುದು ಕಾಂಗ್ರೆಸ್. ಕಾಂಗ್ರೆಸ್, ಸಿಪಿಎಂ ಮತ್ತು ಬಿಜೆಪಿ ಪಕ್ಷಗಳು ತೃಣಮೂಲ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿವೆ ಎಂದು ಟಿಎಂಸಿ ಕಾರ್ಯಕರ್ತರಿಗೆ ಕೋಲ್ಕತಾದಿಂದ ವರ್ಚುವಲ್ ಭಾಷಣದಲ್ಲಿ ಹೇಳಿದರು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಾಬಲ್ಯದ ಕ್ಷೇತ್ರದಲ್ಲಿ ಸೋಲು ಅನುಭವಿಸಿತ್ತು. ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.