Advertisement

ಬಿಜೆಪಿ ಮತ ಯಾತ್ರೆ; ಎಪ್ರಿಲ್‌ನಲ್ಲಿ ನಾಯಕರ ತಂಡಗಳಿಂದ ರಾಜ್ಯ ಪ್ರವಾಸ

02:17 AM Mar 28, 2022 | Team Udayavani |

ಬೆಂಗಳೂರು: ಇತ್ತೀಚೆಗೆ ನಡೆದಿರುವ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಂಡಿರುವ  ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು, 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುಗಾದಿ ಬಳಿಕ ಮೂರು ತಂಡಗಳಾಗಿ ರಾಜ್ಯ ಪ್ರವಾಸ ಕೈಗೊಳ್ಳಲು ಯೋಜನೆ ರೂಪಿಸುತ್ತಿದ್ದಾರೆ. ಎ.12ರಿಂದ ಅಥವಾ 13ರಿಂದ ಈ ಪ್ರವಾಸ ಆರಂಭವಾಗುವ ಸಾಧ್ಯತೆಗಳಿವೆ.

Advertisement

ವಿಧಾನಸಭೆ ಅಧಿವೇಶನ ಮಾ.30ಕ್ಕೆ ಮುಕ್ತಾಯವಾಗಲಿದೆ. ಬಳಿಕ ಪ್ರಧಾನಿ  ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ.  ಹಿಜಾಬ್‌ ಪ್ರಕರಣ, ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ  ಮುಂತಾದವುಗಳ ಮೂಲಕ  ಮತ ಕ್ರೋಡೀಕರಣಕ್ಕೆ ಬಿಜೆಪಿ ಶ್ರಮಿಸುತ್ತಿದೆ.   ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುವ ಗುರಿಯನ್ನು ಸರಳವಾಗಿ ತಲುಪುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ವಿವಿಧ ಹಂತದ ಪ್ರವಾಸ
ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದ್ದು, ಅದಕ್ಕೆ ಪಕ್ಷವನ್ನು ಸಿದ್ಧಗೊಳಿಸಲು   ನಾಯಕರು ವಿವಿಧ ಹಂತಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುವಂತೆ ಬಿಜೆಪಿ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಎಪ್ರಿಲ್‌ ಎರಡನೇ ವಾರ 3 ದಿನಗಳ ಕಾಲ  ರಾಜಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮೂರು  ತಂಡಗಳಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿ  ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳ ಕುರಿತು ಸ್ಥಳೀಯವಾಗಿ ಸಭೆ ನಡೆಸಿ ಜನರಿಗೆ ತಲುಪಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ.

ಶಾ ಭೇಟಿ ಬಳಿಕ ಅಂತಿಮ?
ಸಿಎಂ,  ಮಾಜಿ ಸಿಎಂ ಹಾಗೂ ಪಕ್ಷದ ರಾಜ್ಯಾ ಧ್ಯಕ್ಷರ ನೇತೃತ್ವದ 3 ತಂಡಗಳಲ್ಲೂ 8ರಿಂದ 10  ನಾಯಕರನ್ನು ಸೇರಿಸಲು ಯೋಜಿಸಲಾಗಿದೆ.  ತಂಡವನ್ನು ಅಂತಿಮಗೊಳಿಸುವ  ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಎ.1ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ  ರಾಜ್ಯಕ್ಕೆ  ಆಗಮಿಸುತ್ತಿದ್ದು,  ಅವರೊಂದಿಗೆ ವಿಶೇಷ ಕೋರ್‌ ಕಮಿಟಿ ಸಭೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.  ಕೋರ್‌ ಕಮಿಟಿ ಸಭೆ ಅಥವಾ ಹಿರಿಯ ನಾಯಕರ ಸಭೆ ನಡೆಸಿದ ಬಳಿಕ ಪ್ರವಾಸದ ಸಂಪೂರ್ಣ ಚಿತ್ರಣವನ್ನು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ ಮತ್ತು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌  ಅಂತಿಮಗೊಳಿಸಿ ಬಳಿಕ  ತಂಡಗಳನ್ನು ನಿರ್ಧರಿಸುವ ಸಾಧ್ಯತೆ ಇದೆ.

ಟಾರ್ಗೆಟ್‌ 150
ಡಿಸೆಂಬರ್‌ನಲ್ಲಿ ಗುಜರಾತ್‌ ಚುನಾವಣೆ ಜತೆಗೇ ರಾಜ್ಯಕ್ಕೂ  ಚುನಾವಣೆ ನಡೆದರೆ ಅದಕ್ಕೂ ಸಿದ್ಧವಾಗುವ ನಿಟ್ಟಿನಲ್ಲಿ ಪಕ್ಷವನ್ನು ಸಿದ್ಧಗೊಳಿಸಲು ತಯಾರಿ ನಡೆಯುತ್ತಿದೆ. 2023ರ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಈಗಿನಿಂದಲೇ ಚುನಾವಣ ಚಟುವಟಿಕೆಗಳನ್ನು ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಮೊದಲ ಹಂತದ ರಾಜ್ಯ ಪ್ರವಾಸ ಮುಗಿದ ಬಳಿಕ ಎ. 16 ಮತ್ತು 17ರಂದು ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ.  ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದು, ಅವರೊಂದಿಗೆ ಮುಂದಿನ ಎರಡು ಹಂತಗಳ ಪ್ರವಾಸದ  ಬಗ್ಗೆ ಚರ್ಚಿಸಲು ರಾಜ್ಯ ನಾಯಕರು ಯೋಜಿ ಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.