ನವದೆಹಲಿ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್. ಎನ್.ರವಿ ನಡುವಿನ ಜಟಾಪಟಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ರಾಜ್ಯಪಾಲರನ್ನು ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಲವರು ಇತ್ತೀಚೆಗೆ ಲಜ್ಜೆಗೆಟ್ಟು ಸಂವಿಧಾನದ ಅತಿಕ್ರಮಣ ಮಾಡಿ ಭಾರತದ ರಾಜಕೀಯದ ಫೆಡರಲ್ ರಚನೆಯನ್ನು ಕಳಂಕಗೊಳಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
“ವಿರೋಧ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಸಾಂವಿಧಾನಿಕ ಕಚೇರಿಯನ್ನು ಕಾರ್ಯಕರ್ತರು ಎಂದು ಬಳಸಿಕೊಂಡು ಬಿಜೆಪಿಯ ಉದ್ದೇಶಪೂರ್ವಕ ವಿನ್ಯಾಸವು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇತ್ತೀಚೆಗೆ ಕೆಲವು ರಾಜ್ಯಪಾಲರು ಸಂವಿಧಾನದ ಉಲ್ಲಂಘನೆ, ಫೆಡರಲ್ ವ್ಯವಸ್ಥೆಯನ್ನು ಕೆಣಕಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಸೋಮವಾರ ‘ತಮಿಳುನಾಡು’ ಎನ್ನುವುದಕ್ಕಿಂತ ‘ತಮಿಳಗಂ’ ಎಂಬುದು ರಾಜ್ಯಕ್ಕೆ ಸೂಕ್ತ ಹೆಸರಾಗಿರುತ್ತದೆ ಎಂದು ಹೇಳಿದ ನಂತರ ಭಾರೀ ರಾಜಕೀಯ ಗದ್ದಲ ಎದ್ದಿತ್ತು. ರಾಜ್ಯಪಾಲರು ಭಾಷಣಕ್ಕೆ ಆಗಮಿಸುತ್ತಿದ್ದಂತೆ ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಗದ್ದಲ ಆರಂಭವಾಗಿತ್ತು. ಮುಖಾಮುಖಿಯ ನಂತರ, ರಾಜ್ಯಪಾಲರು ವಿಧಾನಸಭೆಯಿಂದ ವಾಕ್‌ಔಟ್ ಮಾಡಿದ್ದರು.