Advertisement

“ಆಪರೇಷನ್‌ ಕಮಲ’ಕ್ಕೆ ಬಿಜೆಪಿ ಯತ್ನ

06:00 AM Aug 09, 2018 | |

ಬೆಂಗಳೂರು: ರಾಜ್ಯದಲ್ಲಿ ಮತ್ತೆ “ಆಪರೇಷನ್‌ ಕಮಲ’ದ ಪ್ರಯತ್ನಗಳು ಶುರುವಾಗಿದ್ದು, ಕಾಂಗ್ರೆಸ್‌ನ ಅನೇಕ ನಾಯಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿ, ಆಮಿಷವೊಡ್ಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಕುತಂತ್ರ ನಡೆಸುತ್ತಿದೆ. ಕಾಂಗ್ರೆಸ್‌ ಶಾಸಕರಿಗೆ ಅಧಿಕಾರದ ಆಸೆ ತೋರಿಸಿ, ಆಪರೇಷನ್‌ ಕಮಲಕ್ಕೆ ಮುಂದಾಗಿದೆ. ಕಾಂಗ್ರೆಸ್‌ನ ಬಹುತೇಕ ಶಾಸಕರನ್ನು ಸಂಪರ್ಕಿಸಿರುವ ಬಿಜೆಪಿ ನಾಯಕರು ಪಕ್ಷ ತೊರೆದವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಆಮಿಷ ಒಡ್ಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ಯಾವ ಶಾಸಕರೂ ಅವರ ಆಮಿಷಕ್ಕೆ ಒಳಗಾಗಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕರು ಪಕ್ಷದ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುವುದರಲ್ಲಿ ಯಾವುದೇ ವಿಶೇಷತೆಯಿಲ್ಲ. ಯಾವುದೇ ಕಾಂಗ್ರೆಸ್‌ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜತೆಗೆ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡಿಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಸ್ಥಳೀಯ ಮಟ್ಟದಲ್ಲಿ ವಿರೋಧ ಇರುವುದನ್ನು ಒಪ್ಪಿಕೊಂಡ ಅವರು, ರಾಷ್ಟ್ರಮಟ್ಟದಲ್ಲಿ ಭ್ರಷ್ಟ ಹಾಗೂ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಎಲ್ಲ ಜಾತ್ಯತೀತ ಶಕ್ತಿಗಳು ಒಂದಾಗುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಸ್ಥಳೀಯ ನಾಯಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಜಾತ್ಯತೀತ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸ್ಥಳೀಯ ನಾಯಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಾನಾಗಲಿ, ಯೂಡಿಯೂರಪ್ಪ ಆಗಲಿ, ಮತ್ತಾರೆ ಆಗಲಿ ವರ್ಗಾವಣೆಗೆ ಶಿಫಾರಸು ಪತ್ರ ಕೊಡುವುದು ತಪ್ಪಾ? ಜನಪ್ರತಿನಿಧಿಗಳು ಶಿಫಾರಸು ಮಾಡುತ್ತಾರೆ.  ಪ್ರಜಾಪ್ರಭುತ್ವದಲ್ಲಿ ಇದು ಸರ್ವೆ ಸಾಮಾನ್ಯ. ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ.
● ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆಗಸ್ಟ್‌ 13ರಂದು ಬೀದರ್‌ ಜಿಲ್ಲೆಗೆ ಆಗಮಿಸಲಿದ್ದು, ಬೀದರ್‌ನಲ್ಲಿ ಕಾಂಗ್ರೆಸ್‌ ವತಿಯಿಂದ ಜನಧ್ವನಿ ಸಮಾವೇಶ ಏರ್ಪಡಿಸಲಾಗಿದೆ. ಬೀದರ್‌ ಸಮಾವೇಶದ ಮೂಲಕ ರಾಹುಲ್‌ ಅವರು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
● ದಿನೇಶ್‌ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

ಐದು ಮಂದಿ ಬಿಜೆಪಿ ನಾಯಕರು ಫಿಲ್ಡಿಗೆ 
ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಆಪರೇಷನ್‌ ಕಮಲಕ್ಕೆ 5 ಮಂದಿ ಬಿಜೆಪಿ ನಾಯಕರು ಫಿಲ್ಡಿಗೆ ಇಳಿದಿದ್ದಾರೆ. ಇವರು ಈಗಾಗಲೇ ಅನೇಕ ಕಾಂಗ್ರೆಸ್‌ ನಾಯಕರನ್ನು ಸಂಪರ್ಕಿಸಿದ್ದಾರೆ. ಯಾರನ್ನು, ಯಾರು ಮತ್ತು ಎಲ್ಲಿ ಸಂಪರ್ಕ ಮಾಡಿದ್ದಾರೆ. ಯಾವೆಲ್ಲ ನಾಯಕರ “ಆಪರೇಷನ್‌ ಕಮಲ’ಕ್ಕೆ ಪ್ರಯತ್ನ ನಡೆಯುತ್ತಿದೆ ಎಂಬ ಬಗ್ಗೆ ಎಲ್ಲ ಮಾಹಿತಿ ನಮಗೆ ಗೊತ್ತಿದೆ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಾನು ಮಾತನಾಡುತ್ತೇನೆ, ಆಗ ಎಲ್ಲ ಮಾಹಿತಿಯನ್ನೂ ಬಿಚ್ಚಿಡುತ್ತೇನೆಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ, “ನನ್ನನ್ನು ಮುಖ್ಯಮಂತ್ರಿ ಮಾಡಿದ್ದರೆ, ನಾನು ಆ ಬಗ್ಗೆ ಹೇಳುತ್ತಿದ್ದೆ’ ಎಂದು ಚಟಾಕಿ ಹಾರಿಸಿದರು.

ಮೈತ್ರಿ ಸರ್ಕಾರದ ಕಾರ್ಯ ಚಟುವಟಿಕೆ ಕಂಡು ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ಮುಖ್ಯವಾಗಿ ರಾಜ್ಯದ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ  ಮೋದಿ ಅವರ ಬಳಿ ಮಾತನಾಡಲು ಬಿಜೆಪಿಯ ಯಾವ ನಾಯಕರೂ ಸಿದ್ಧರಿಲ್ಲ.
● ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next