ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆ ಭಾನುವಾರ ರಾಜಧಾನಿ ಬೆಂಗಳೂರನ್ನು ಪ್ರವೇಶಿಸಲಿದ್ದು, ಜೆ.ಪಿ.ನಗರದ ಆರ್‌ಬಿಐ ಬಡಾವಣೆ ಆಟದ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ಯಾತ್ರೆಯು ನಗರ ಪ್ರವೇಶ ಮಾಡಲಿದ್ದು, ಪುಟ್ಟೇನಹಳ್ಳಿ ವೃತ್ತದ ಸರ್ಕಾರಿ ಶಾಲೆಯಿಂದ ಮೆರವಣಿಗೆ ಮೂಲಕ ತೆರಳಿ 11.30ರ ವೇಳೆಗೆ ಜೆ.ಪಿ.ನಗರದ ಆರ್‌ಬಿಐ ಬಡಾವಣೆಯ ಆಟದ ಮೈದಾನ ತಲುಪಲಿದೆ.
ಈ ಕುರಿತು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪರಿವರ್ತನಾ ಸಮಾವೇಶದ ಹಿನ್ನೆಲೆಯಲ್ಲಿ ಬೃಹತ್ ವೇದಿಕೆ, ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು, ಹಿತೈಶಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪರಿವರ್ತನಾ ಸಮಾವೇಶ ಇಲ್ಲಿ ನಡೆಯಲಿದೆ.
ಎರಡನೇ ಭಾಗವಾಗಿ ಡಿ. 17ರಂದು ಹಳೇ ವಿಮಾನ ನಿಲ್ದಾಣದ ಸಮೀಪದ ವಿಶ್ವೇಶ್ವರಯ್ಯ ಶಾಲಾ ಮೈದಾನದಲ್ಲಿ ಮತ್ತು ಮೂರನೇ ಭಾಗವಾಗಿ ಜ.7 ರಂದು ವಿಜಯನಗರದ ಎಂ.ಸಿ. ಬಡಾವಣೆಯ ಮೈದಾನದಲ್ಲಿ ಪರಿವರ್ತನಾ ಸಮಾವೇಶ ಮತ್ತು ರ್ಯಾಲಿ ನಡೆಯಲಿದೆ.ಜ.17ರಂದು ಸಮಾರೋಪ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಹೇಳಿದರು.
ಈ ಬಾರಿಯೂ ಭಾಗವಹಿಸಲ್ಲ ಎಸ್‌ಎಂಕೆ: ಪರಿವರ್ತನಾ ರ್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಗೈರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭಾನುವಾರದ ರ್ಯಾಲಿಯಲ್ಲಿ ಭಾಗವಹಿಸುವಂತೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಆಹ್ವಾನಿಸಿದ್ದಾರೆ. ಸ್ವತಃ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಗಿ ಆಹ್ವಾನ ನೀಡಲಾಗಿದೆ.
ಆದರೆ, “ಅನಾರೋಗ್ಯ ಮತ್ತು ವಿದೇಶಿ ಪ್ರಯಾಣವಿರುವ ಹಿನ್ನೆಲೆಯಲ್ಲಿ ಭಾನುವಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುವುದಿಲ್ಲ. ಜನವರಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತೇನೆ,’ ಎಂದು ಎಸ್‌ಎಂಕೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.