Advertisement

ಸಮ್ಮಿಶ್ರ ಸಂಘರ್ಷದ ಲಾಭ ಪಡೆಯುವುದೇ ಬಿಜೆಪಿ?

06:00 AM Jun 26, 2018 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್‌ ಬೆಳವಣಿಗೆಗಳು ಪ್ರಾರಂಭವಾಗಿದ್ದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹಠಾತ್ತನೆ ಅಹಮದಾಬಾದ್‌ಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

Advertisement

ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಯಡಿಯೂರಪ್ಪ ಅಮಿತ್‌ ಶಾ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗಳಿಗೂ ಕಾರಣವಾಗಿದೆ.

ಬಸವರಾಜ ಬೊಮ್ಮಾಯಿ ಜತೆ ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳಿ ಅಮಿತ್‌ ಶಾ ನಿವಾಸದಲ್ಲಿ ಸುದೀರ್ಘ‌ ಚರ್ಚೆ ನಡೆಸಿದ ಯಡಿಯೂರಪ್ಪ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರದ ವಿದ್ಯಮಾನಗಳ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಅತೃಪ್ತಿ ಹಾಗೂ ಕೆಲ ಕಾಂಗ್ರೆಸ್‌ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿರುವ ಬಗ್ಗೆಯೂ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವುದು. ಬಜೆಟ್‌ ಮಂಡನೆ ಕುರಿತ ಅಪಸ್ವರ ಅದರಿಂದ ಸಮ್ಮಿಶ್ರ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ರಾಜ್ಯದಲ್ಲಿನ ಪ್ರತಿ ವಿದ್ಯಮಾನದ ಬಗ್ಗೆಯೂ ತಮ್ಮದೇ ಆದ ವಿಶ್ಲೇಷಣೆಯೊಂದಿಗೆ ಸಮಗ್ರ ಮಾಹಿತಿಯನ್ನು ಯಡಿಯೂರಪ್ಪ, ಅಮಿತ್‌ ಶಾಗೆ ನೀಡಿದ್ದಾರೆ. ಇದರ ಹಿಂದೆ ಬೇರೆಯದೇ ಲೆಕ್ಕಾಚಾರವೂ ಇದೆ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸದಲ್ಲಿದ್ದ ಅಮಿತ್‌ ಶಾಗೆ ಇಲ್ಲಿನ ಸೋಲು ತೀವ್ರ ನಿರಾಶೆ ಮೂಡಿಸಿತ್ತು. ಹೀಗಾಗಿ, ಆ ನಂತರ ಕರ್ನಾಟಕಕ್ಕೆ ಬಂದಿರಲಿಲ್ಲ.

Advertisement

“ಸಂಪಕ್‌ ಸಮರ್ಥನ್‌ ಅಭಿಯಾನ್‌’ ಗಾಗಿ ರಾಜ್ಯಕ್ಕೆ ಆಗಮಿಸಿ ಗಣ್ಯರ ಭೇಟಿ ಮಾಡುವ ಕಾರ್ಯಕ್ರಮವಿತ್ತಾದರೂ ಆ ಬಗ್ಗೆ ಸಮಯ ನಿಗದಿಯಾಗಿರಲಿಲ್ಲ. ಹೀಗಾಗಿ, ಯಡಿಯೂರಪ್ಪ ಅವರೇ ಅಮಿತ್‌ ಶಾ ಅವರ ಬಳಿ ತೆರಳಿ ಚರ್ಚಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿದರೂ ಸರ್ಕಾರ ರಚನೆ ಮಾಡುವಷ್ಟು ಸ್ಥಾನ ಗಳಿಸಲು ಸಾಧ್ಯವಾಗದಿರುವುದಕ್ಕೆ ಹಲವು ಕಾರಣಗಳಿವೆ. 100 ರಿಂದ 3000 ಸಾವಿರ ಮತಗಳ ಅಂತರದಲ್ಲಿ 6 ರಿಂದ 8 ಸ್ಥಾನಗಳಲ್ಲಿ ಸೋತಿದ್ದೇವೆ. ಬೆಂಗಳೂರಿನಲ್ಲಿ  ಇನ್ನೂ ನಾಲ್ಕು ಸ್ಥಾನ ಗಳಿಸುವ ಅವಕಾಶ ಇತ್ತಾದರೂ ಸಂಘಟಿತ ಪ್ರಯತ್ನ ಆಗಲಿಲ್ಲ ಎಂಬ ಮಾತನ್ನೂ ಹೇಳಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಯೋಜನೆ
ಇದೇ ಸಂದರ್ಭದಲ್ಲಿ  ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆಗಳ ಬಗ್ಗೆಯೂ ಅಮಿತ್‌ ಶಾಗೆ ಕಾರ್ಯಯೋಜನೆ ನೀಡಿರುವ ಯಡಿಯೂರಪ್ಪ, ಕೆಲವೆಡೆ ಅಭ್ಯರ್ಥಿಗಳ ಬದಲಾವಣೆ ಪ್ರಸ್ತಾಪ ಸಹ ಮಾಡಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಬದಲು ಮಾಜಿ ಶಾಸಕ ಎಸ್‌.ಮುನಿರಾಜು ಅವರನ್ನು ಕಣಕ್ಕಿಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಡಿ.ವಿ.ಸದಾನಂದಗೌಡರನ್ನು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಕಳುಹಿಸಬಹುದು. ಅಲ್ಲಿ ಜಯಪ್ರಕಾಶ್‌ ಹೆಗ್ಡೆ ಅಥವಾ ಡಿ.ವಿ.ಸದಾನಂದಗೌಡರನ್ನು ಪರಿಗಣಿಸಬಹುದು ಎಂದು ಹೇಳಿದ್ದಾರೆ.

ಅದೇ ರೀತಿ ಕೆಲವೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬದಲಾವಣೆ ಪ್ರಸ್ತಾಪಿಸಿ,  ಬೀದರ್‌ ಕ್ಷೇತ್ರದಿಂದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಲಬುರಗಿ ಕ್ಷೇತ್ರದಿಂದ ಮಾಜಿ ಶಾಸಕ ಸುನಿಲ್‌ ವಲ್ಯಾಪುರೆ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಥವಾ ಬಿ.ಎನ್‌.ಬಚ್ಚೇಗೌಡ, ಹಾಸನದಿಂದ ನವಿಲೆ ಪ್ರಕಾಶ್‌, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅಥವಾ ತುಳಸಿ ಮುನಿರಾಜುಗೌಡ ಅವರ ಹೆಸರು ಪ್ರಸ್ತಾಪಿಸಿ, ಒಪ್ಪಿಗೆ ನೀಡಿದರೆ  ಈಗಿನಿಂದಲೇ ಸಿದ್ಧತೆ ಆರಂಭಿಸಲು ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ,  ಈಬಗ್ಗೆಯೂ ರಾಜ್ಯದ ಇತರೆ ನಾಯಕರ ಬಳಿ ಚರ್ಚಿಸಿ ನಂತರವಷ್ಟೇ ನಿರ್ಧಾರ ಮಾಡಿ ಎಂದು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಶೋಭಾ ಕರಂದ್ಲಾಜೆ ಪರಿಷತ್‌ ಪ್ರತಿಪಕ್ಷ ನಾಯಕಿ?
*ಪ್ರಸ್ತುತ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರನ್ನು ವಿಧಾನಪರಿಷತ್‌ಗೆ ಕಳುಹಿಸಿ ಪ್ರತಿಪಕ್ಷ ನಾಯಕಿಯಾಗಿ ಮಾಡಬಹುದು. ಕಾಂಗ್ರೆಸ್‌ನಿಂದ ಸಭಾನಾಯಕಿಯಾಗಿ ಜಯಮಾಲಾ ಇರುವುದರಿಂದ ಸರ್ಕಾರ ಎದುರಿಸಲು ಶೋಭಾ ಕರಂದ್ಲಾಜೆ ಸೂಕ್ತ ಆಯ್ಕೆಯಾಗಬಹುದು. ವಿ.ಸೋಮಣ್ಣ ಅವರಿಂದ ತೆರವಾಗುವ ಪರಿಷತ್‌ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ನೇಮಿಸಬಹುದು ಎಂದು ಪ್ರಸ್ತಾಪ ಮಾಡಿದ್ದಾರೆ.  ಈ ಬಗ್ಗೆ ರಾಜ್ಯದ  ಇತರೆ ನಾಯಕರ ಬಳಿ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಅಮಿತ್‌ ಶಾ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಶೋಭಾ ಕರಂದ್ಲಾಜೆ ಅವರಿಗೆ ತಕ್ಷಣವೇ ರಾಜ್ಯ ರಾಜಕಾರಣಕ್ಕೆ ಮರಳಲು ಅಷ್ಟಾಗಿ ಆಸಕ್ತಿ ಇಲ್ಲ ಎಂದು ಹೇಳಲಾಗಿದೆ.

ಬಸವರಾಜ ಬೊಮ್ಮಾಯಿ ಸಾಥ್‌
*ಅಮಿತ್‌ ಶಾ ಭೇಟಿ ಸಂದರ್ಭದಲ್ಲಿ  ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಹಿಂದಿ ಹಾಗೂ ಇಂಗ್ಲೀಷ್‌  ಭಾಷೆಯಲ್ಲಿ ಹಿಡಿತ ಹೊಂದಿರುವ ಹಾಗೂ ತಮ್ಮ ನೆಚ್ಚಿನ ಬಂಟ ಬಸವರಾಜ ಬೊಮ್ಮಾಯಿ ಅವರನ್ನು ಯಡಿಯೂರಪ್ಪ ಜತೆಗೆ ಕರೆದ್ಯೊಯ್ದಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆ  ಸಮುದಾಯದ ನಾಯಕರು ಹಾಗೂ ಅವರಿಗೆ ಇರುವ ಬೆಂಬಲದ ಬಗ್ಗೆ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚಿನ ಮಾಹಿತಿ ಇರುವುದರಿಂದ ಚರ್ಚೆ ಸಂದರ್ಭದಲ್ಲಿ ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ಅವರನ್ನೇ ತಮ್ಮ ಜತೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next